ಒಂದು ವರ್ಷದ ಸಾರ್ಥಕ ಗೋಸೇವಾ ಪಯಣಕ್ಕೆ ಸಂಭ್ರಮದ ಮುನ್ನುಡಿ; ಕನ್ನೇರಿ ಸಿದ್ಧಗಿರಿ ಮಹಾಸಂಸ್ಥಾನದ ಪ.ಪೂ. ಶ್ರೀ ಅದೃಶ್ಯ ಕಾಡಸಿದ್ಧೇಶ್ವರ ಮಹಾಸ್ವಾಮೀಜಿ ಉಪಸ್ಥಿತಿ

ಶಿವಮೊಗ್ಗ: ಗೋವುಗಳ ಸಂರಕ್ಷಣೆ, ಪೋಷಣೆ ಹಾಗೂ ಭಾರತೀಯ ಸಂಸ್ಕೃತಿಯಲ್ಲಿ ಗೋವಿಗೆ ಇರುವ ಮಹತ್ವವನ್ನು ಸಮಾಜಕ್ಕೆ ತಿಳಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಶ್ರೀ ಗೋವರ್ಧನ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿರುವ ಒಂದು ವರ್ಷದ ಸಾರ್ಥಕ ಗೋಸೇವಾ ಪಯಣದ ಅಂಗವಾಗಿ ‘ಗೋಸೇವಾ ಸಂಭ್ರಮ–2026’ ಕಾರ್ಯಕ್ರಮಕ್ಕೆ ಭಕ್ತಿಭಾವ ಹಾಗೂ ಸಂಭ್ರಮದ ವಾತಾವರಣದಲ್ಲಿ ಚಾಲನೆ ದೊರೆಯಿತು.

ಶ್ರೀ ಕ್ಷೇತ್ರ ಸಿದ್ಧಗಿರಿ ಮಹಾಸಂಸ್ಥಾನ, ಕನ್ನೇರಿ, ಕೊಲ್ಲಾಪುರ, ಮಹಾರಾಷ್ಟ್ರದ ಪ.ಪೂ. ಶ್ರೀ ಅದೃಶ್ಯ ಕಾಡಸಿದ್ಧೇಶ್ವರ ಮಹಾಸ್ವಾಮೀಜಿ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಗೋಸೇವೆಯ ಮಹತ್ವವನ್ನು ಸಾರಿದರು.

ಗೋವು ಭಾರತೀಯ ಪರಂಪರೆ, ಕೃಷಿ ಹಾಗೂ ಗ್ರಾಮೀಣ ಬದುಕಿನೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದು, ಗೋಸಂರಕ್ಷಣೆ ಕೇವಲ ಧಾರ್ಮಿಕ ಆಚರಣೆಯಲ್ಲ, ಸಾಮಾಜಿಕ ಜವಾಬ್ದಾರಿಯೂ ಆಗಿದೆ. ಗೋವುಗಳ ರಕ್ಷಣೆ ಮತ್ತು ಅವುಗಳ ಪಾಲನೆಗೆ ಸಮಾಜದ ಪ್ರತಿಯೊಬ್ಬರೂ ಕೈಜೋಡಿಸಬೇಕಾಗಿದೆ ಎಂಬ ಸಂದೇಶ ಕಾರ್ಯಕ್ರಮದಲ್ಲಿ ಪ್ರತಿಧ್ವನಿಸಿತು.

ಗೋಸೇವೆಯ ಮೂಲಕ ಒಂದು ವರ್ಷದ ಅವಧಿಯಲ್ಲಿ ನಡೆದ ಸೇವಾ ಕಾರ್ಯಗಳನ್ನು ಸ್ಮರಿಸಿ, ಮುಂದಿನ ದಿನಗಳಲ್ಲಿಯೂ ಇನ್ನಷ್ಟು ಪರಿಣಾಮಕಾರಿಯಾಗಿ ಗೋಸಂರಕ್ಷಣಾ ಕಾರ್ಯಗಳನ್ನು ಕೈಗೊಳ್ಳುವ ಸಂಕಲ್ಪವನ್ನು ಕಾರ್ಯಕ್ರಮದಲ್ಲಿ ವ್ಯಕ್ತಪಡಿಸಲಾಯಿತು.
ಕಾರ್ಯಕ್ರಮದಲ್ಲಿ ಮಾಜಿ ಉಪಮುಖ್ಯಮಂತ್ರಿಗಳು ಹಾಗೂ ಗೋವರ್ಧನ ಸಂಸ್ಥೆಯ ಗೌರವಾಧ್ಯಕ್ಷರಾದ ಕೆ.ಎಸ್. ಈಶ್ವರಪ್ಪ ಅವರು ಉಪಸ್ಥಿತರಿದ್ದು, ಗೋಸೇವೆಯಂತಹ ಮಹತ್ವದ ಕಾರ್ಯಗಳಿಗೆ ಸಮಾಜದ ಎಲ್ಲ ವರ್ಗಗಳ ಸಹಕಾರ ಅಗತ್ಯ ಎಂದು ತಿಳಿಸಿದರು. ಗೋಸಂರಕ್ಷಣೆ ಹಾಗೂ ಗೋಸೇವೆಯನ್ನು ಜನಾಂದೋಲನವಾಗಿ ರೂಪಿಸುವ ನಿಟ್ಟಿನಲ್ಲಿ ಸಂಘ-ಸಂಸ್ಥೆಗಳು ಮತ್ತು ಸಾರ್ವಜನಿಕರು ಒಟ್ಟಾಗಿ ಕೆಲಸ ಮಾಡಬೇಕೆಂಬ ಆಶಯವನ್ನು ವ್ಯಕ್ತಪಡಿಸಿದರು.

ರಾಷ್ಟ್ರೀಯ ಸ್ವಯಂಸೇವಕ ಸಂಘದ ರಂಗನಾಥ್, ಸಂಸ್ಥೆಯ ಅಧ್ಯಕ್ಷರಾದ ಕೆ.ಈ. ಕಾಂತೇಶ್, ಯೋಗಗುರು ರುದ್ರಾರಾಧ್ಯರು, ಉಮೇಶ್ ಆರಾಧ್ಯ, ಉಮಾ ಮೂರ್ತಿ, ಸಾಂಥ್ಯ ಸೇರಿದಂತೆ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಗೋಪ್ರೇಮಿಗಳಾದ ಶ್ರೀಕಾಂತ್, ನಾಗೇಶ್, ಗುರುಗುಹ ನಾಗರಾಜ್, ರಮೇಶ್ ಬಾಬು, ಶುಭ ರಾಘವೇಂದ್ರ ಹಾಗೂ ಗುರುಶೆಟ್ ಸೇರಿದಂತೆ ಹಲವರು ಉಪಸ್ಥಿತರಿದ್ದು, ಗೋಸೇವಾ ಕಾರ್ಯಗಳಿಗೆ ತಮ್ಮ ಬೆಂಬಲ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಪೂರ್ಣಾನಂದ್, ಸೀತಾರಾಮ್, ಶ್ರೀಪಾದ್, ಸ್ವಾಮಿ, ರಮೇಶ್ ಬಾಬು ಸೇರಿದಂತೆ ಹಲವು ಪ್ರಮುಖರು ಪಾಲ್ಗೊಂಡಿದ್ದರು.
