ಶಿವಮೊಗ್ಗ/ಸಾಗರ: ಶಿವಮೊಗ್ಗ–ಸಾಗರ ಮಾರ್ಗದಲ್ಲಿ ಸಂಚರಿಸುತ್ತಿದ್ದ ‘ಡ್ರೀಮ್ ಬಸ್’ ಟೂರ್ಸ್ ಅಂಡ್ ಟ್ರಾವೆಲ್ಸ್ಗೆ ಸೇರಿದ ಖಾಸಗಿ ಬಸ್ವೊಂದು ಗುರುವಾರ ಬೆಳಗಿನ ಜಾವ ಆನಂದಪುರ ಸಮೀಪದ ಮುಂಬಾಳು ಬಳಿ ಆಕಸ್ಮಿಕವಾಗಿ ಬೆಂಕಿಗಾಹುತಿಯಾಗಿದೆ. ಕೆಲವೇ ನಿಮಿಷಗಳಲ್ಲಿ ಬೆಂಕಿ ಇಡೀ ಬಸ್ಗೆ ವ್ಯಾಪಿಸಿದ್ದು, ಬಸ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ.

ಬೆಳಿಗ್ಗೆ ಸುಮಾರು 5.45ರ ವೇಳೆಗೆ ಬಸ್ನ ಬ್ಯಾಟರಿ ಭಾಗದಲ್ಲಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಚಾಲಕನ ಸೀಟ್ ಸಮೀಪ ಹೊಗೆ ಕಾಣಿಸಿಕೊಂಡಿದೆ. ಕೂಡಲೇ ಎಚ್ಚೆತ್ತ ಚಾಲಕ ಫೈರ್ ಎಕ್ಸ್ಟಿಂಗ್ವಿಷರ್ ಮೂಲಕ ಬೆಂಕಿ ನಂದಿಸಲು ಪ್ರಯತ್ನಿಸಿದರಾದರೂ, ಬೆಂಕಿ ವೇಗವಾಗಿ ಹರಡಿದೆ.

ಆ ವೇಳೆ ಬಸ್ನಲ್ಲಿ ಸಾಗರದತ್ತ ತೆರಳುತ್ತಿದ್ದ ಕೆಲ ಪ್ರಯಾಣಿಕರು ಇದ್ದರು. ಪರಿಸ್ಥಿತಿಯ ಗಂಭೀರತೆ ಅರಿತ ಚಾಲಕ ತಕ್ಷಣ ಪ್ರಯಾಣಿಕರನ್ನು ಕೆಳಗಿಳಿಸಿ, ಅವರ ಲಗೇಜ್ಗಳನ್ನು ಸಹ ಸುರಕ್ಷಿತವಾಗಿ ಹೊರತೆಗೆದಿದ್ದಾರೆ. ಬಳಿಕ ಪ್ರಯಾಣಿಕರನ್ನು ಬದಲಿ ಬಸ್ನಲ್ಲಿ ಸಾಗರಕ್ಕೆ ಕಳುಹಿಸಿಕೊಡಲಾಗಿದೆ.

ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸದೆ ಪ್ರಯಾಣಿಕರು ಸುರಕ್ಷಿತವಾಗಿ ಪಾರಾಗಿದ್ದಾರೆ.

ಬಸ್ನ ಮಾಲೀಕರು ಆನಂದಪುರದ ಸಯ್ಯದ್ ಅಕ್ರಂ ಎಂದು ತಿಳಿದುಬಂದಿದೆ. ಆನಂದಪುರ ಪೊಲೀಸ್ ಠಾಣೆಯ ಸಬ್ಇನ್ಸ್ಪೆಕ್ಟರ್ ಪ್ರವೀಣ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಘಟನೆ ಕುರಿತು ತನಿಖೆ ಮುಂದುವರಿದಿದೆ.