ಶಿವಮೊಗ್ಗ,ಅ.7: ಈ ಪ್ರತಿಭಾನ್ವಿತರು ಅಕ್ಟೊಬರ್ 5 ರಿಂದ 17 ರ ವರೆಗೆ ಈಜಿಪ್ಟ್ನ ಕೈರೋ ನಗರದಲ್ಲಿ ನಡೆಯಲಿರುವ 19 ವರ್ಷ ವಯೋಮಿತಿಯೊಳಗಿನ ಷಟಲ್ ಬ್ಯಾಡ್ಮಿಂಟನ್ ವಿಕ್ಟರ್ ಬಿಡಬ್ಲೂ ಎಫ್ ವರ್ಲ್ಡ್ ಜೂನಿಯರ್ ಟೀಮ್ ಚಾಂಪಿಯನ್ ಶಿಫ್ 2026 ರಲ್ಲಿ
13 ದಿನಗಳ ವರೆಗೆ ನಡೆಯುತ್ತಿರುವ ವಿಶ್ವ ಚಾಂಪಿಯನ್ ವಿಭಾಗದ ಷಟಲ್ ಬ್ಯಾಡ್ಮಿಂಟನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿ ಆಡುತ್ತಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕರು ಹಾಗೂ ಸರ್ಕಾರಗಳು ಕ್ರೀಡೆಗೆ ಅಷ್ಟಾಗಿ ಪ್ರೋತ್ಸಾಹ ನೀಡುತ್ತಿಲ್ಲ ಎಂಬ ಕೊರಗು ಕ್ರೀಡಾಸಕ್ತರಿಂದ ಕೇಳಿ ಬರುತ್ತಿದೆ. ಆದರೆ,ಈ ರೀತಿಯ ನಿರಾಶೆಯ ಮಾತುಗಳ ನಡುವೆಯೂ ಶಿವಮೊಗ್ಗ ನಗರದಲ್ಲಿ ಮಾತ್ರ ದಿನಕ್ಕೊಬ್ಬ ಕ್ರೀಡಾಪಟು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸ್ಪರ್ಧೆಗಳಿಗೆ ಆಯ್ಕೆಯಾಗುತ್ತಿದ್ದಾರೆಂದರೆ ಆಶ್ಚರ್ಯ ಪಡಬೇಕಾಗಿಲ್ಲ.

ಇಂತಹ ಸಾಧನೆಯಲ್ಲಿಯೇ ಅವಳಿ ಸಹೋದರರಾದ ಪವನ್ ಮತ್ತು ಪುನೀತ್ ದೇಶದ ಪ್ರಮುಖ ಷಟಲ್ ಬ್ಯಾಡ್ಮಿಂಟನ್ ಪಟುವಾಗಿ ಹೊರಹೊಮ್ಮಿದ್ದಾರೆ.
ರಾಷ್ಟ್ರೀಯ ಷಟಲ್ ಬ್ಯಾಡ್ಮಿಂಟನ್ ಡಬಲ್ಸ್ ರ್ಯಾಂಕಿಂಗ್ ಪಟ್ಟಿಯಲ್ಲಿ ನಂಬರ್ ಒನ್ ಸ್ಥಾನವನ್ನು ಪಡೆದು,ಭಾರತ ತಂಡಕ್ಕೆ ಆಯ್ಕೆಯಾಗಿರುವುದು ಹೆಮ್ಮೆಯ ಸಂಗತಿ.

ಹೀಗೆ ಜಿಲ್ಲಾ ಮಟ್ಟದಿಂದ ವಿಭಾಗ, ರಾಜ್ಯ, ರಾಷ್ಟ್ರಮಟ್ಟದವರೆಗೂ ಯಶಸ್ಸಿನ ಒಂದೊಂದೇ ಮೆಟ್ಟಿಲು ಏರುತ್ತಾ ಬಂದ ಈ ಪ್ರತಿಭಾನ್ವಿತರು ಅಂತರಾಷ್ಟ್ರ ಮಟ್ಟದ ಷಟಲ್ ಬ್ಯಾಡ್ಮಿಂಟನ್ ನಲ್ಲಿ ಭಾಗವಹಿಸುವ ಅವಕಾಶ ಪಡೆದು ರಾಜ್ಯಕ್ಕೆ ಕೀರ್ತಿ ತಂದಿರುತ್ತಾರೆ.
ಶಿವಮೊಗ್ಗ ನಗರದ ಪ್ರತಿಷ್ಠಿತ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟಿನ ಶಿವಮೊಗ್ಗ ಶಾಖೆಯ ಗುರುಪುರದ ಬಿಜಿಎಸ್ ಗುರುಕುಲ ಸ್ವತಂತ್ರ ಪದವಿ ಪೂರ್ವ ಕಾಲೇಜು, ವಾಣಿಜ್ಯ ವಿಭಾಗದಲ್ಲಿ ಅವಳಿ ಸಹೋದರರು, ವ್ಯಾಸಂಗಮಾಡುತ್ತಿದ್ದು, ಪ್ರಥಮ ಪಿಯುಸಿಯಲ್ಲಿ ಓದುತ್ತಿದ್ದು, ಆಟದ ಜೊತೆಗೆ ಓದಿನಲ್ಲಿಯೂ ಮುಂದಿದ್ದಾರೆ. ಇವರಿಗೆ ಇನ್ನೂ 17 ವರ್ಷ ಮಾತ್ರ.ಇಷ್ಟು ಚಿಕ್ಕ ವಯಸ್ಸಿನಲ್ಲಿಯೇ ಷಟಲ್ ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ ಇವರು ಸಾಧಿಸಿದ ಶ್ರಮ ಅಪಾರ.

ಈ ಪ್ರತಿಭೆಗಳು ಶಿವಮೊಗ್ಗದ ಪುರಲೆಯ ವೆಂಕಟೇಶ ನಗರದಲ್ಲಿ ವಾಸವಿರುವ ಸುರೇಶ್ ಮತ್ತು ಶಕುಂತಲಾ ದಂಪತಿಗಳ ಪುತ್ರ ರಾಗಿರುವ ಅವಳಿ ಸಹೋದರರು ಪ್ರಸ್ತುತ ಬೆಂಗಳೂರಿನ ಯಾದವ್ ಪ್ರೊ ಬ್ಯಾಡ್ ಮಿಂಟನ್ ಅಕಾಡೆಮಿಯ ತರಬೇತುದಾರ ಶ್ರೀ ಮಧುಸೂಧನ್ ಅವರ ಗರಡಿಯಲ್ಲಿ ತರಬೇತಿಯನ್ನು ಪಡೆಯುತ್ತಿದ್ದಾರೆ.

ಈ ಕ್ರೀಡಾ ಪ್ರತಿಭೆಗಳು ರಾಷ್ಟ ಮತ್ತು ಅಂತರ್ ರಾಷ್ಟ್ರಮಟ್ಟದ ಕ್ರೀಡೆಗಳಲ್ಲಿ ಉತ್ತಮ ಸಾಧನೆ ಮಾಡಲಿ ಎಂದು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿಗಳಾದ ಪೂಜ್ಯ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರು, ಪೂಜ್ಯ ಶ್ರೀಶ್ರೀ ನಾದಮಯಾನಂದನಾಥ ಸ್ವಾಮೀಜಿಯವರು, ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರು, ಶಾಲಾ ಕಾಲೇಜಿನ ಪ್ರಾಂಶುಪಾಲರಾದ ಸುರೇಶ್ ಎಸ್. ಎಚ್. ಹಾಗೂ ಅಧ್ಯಾಪಕ ವೃಂದದವರು, ಸಿಬ್ಬಂದಿವರ್ಗ ಹಾಗೂ ವಿದ್ಯಾರ್ಥಿಗಳು ಶುಭ ಹಾರೈಸಿದ್ದಾರೆ.