ಶಿವಮೊಗ್ಗ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ನಡೆಸಿದ್ದ ’ಭಾರತ್ ಜೋಡೋ’ ಯಾತ್ರೆಯ ಆಶಯಗಳನ್ನು ಮುಂದುವರೆಸಿಕೊಂಡು ಹೋಗಬೇಕು, ಸರ್ಕಾರದ ಗ್ಯಾರೆಂಟಿ ಯೋಜನೆಗಳ ಬಗ್ಗೆ ಜನರಿಗೆ ತಿಳಿಸಬೇಕು. ಆ ಮೂಲಕ ಜನರೊಂದಿಗೆ ನೇರ ಸಂಪರ್ಕ ಹೊಂದಬೇಕೆನ್ನುವ ಉದ್ದೇಶದೊಂದಿಗೆ ರಾಜ್ಯದ ೮೨ ವಿಧಾನಸಭಾ ಕ್ಷೇತ್ರಗಳಲ್ಲಿ ಭಾರತ್ ಜೋಡೋ ೨ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ತಿಳಿಸಿದರು.

ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಇಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಕಳೆದ ನಾಲ್ಕು ವರ್ಷಗಳ ಹಿಂದೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪ್ರಮುಖ ಏಳು ಅಂಶಗಳನ್ನು ಮುಂದಿಟ್ಟುಕೊಂಡು ಕನ್ಯಾಕುಮಾರಿಯಿಂದ ಪಾದಯಾತ್ರೆ ನಡೆಸಿದ್ದರು. ಅವರ ಪಾದಯಾತ್ರೆಯು ಸೆ. ೩೦ ರಂದು ಚಾಮರಾಜನಗರದ ಗುಂಡ್ಲುಪೇಟೆ ಮೂಲಕ ಕರ್ನಾಟಕ ಪ್ರವೇಶಿಸಿ, ಸುಮಾರು ಒಂದು ವಾರ ಕಾಲ ರಾಜ್ಯದಲ್ಲಿ ಯಾತ್ರೆ ನಡೆದಿತ್ತು. ಅದರ ನೆನಪಿನಲ್ಲಿ ಸೆ.೩೦ ರಂದು ಶಿಕಾರಿಪುರದಿಂದ ಭಾರತ್ ಜೋಡೋ-೨ ಯಾತ್ರೆಗೆ ಚಾಲನೆ ನೀಡಲಾಗುತ್ತಿದೆ ಎಂದರು.

ಭಾರತ್ ಜೋಡೋ ಯಾತ್ರೆಯ ಉದ್ಘಾಟನೆಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಹ್ವಾನಿಸುವ ಯೋಚನೆ ಇತ್ತು. ಆದರೆ ಆ ಇಬ್ಬರು ನಾಯಕರು ಅಂದು ದೆಹಲಿಗೆ ತೆರಳುತ್ತಿರುವ ಕಾರಣಕ್ಕೆ ಅವರ ಅನುಪಸ್ಥಿತಿಯಲ್ಲಿ ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ.ಹರಿಪ್ರಸಾದ್ ಸೇರಿದಂತೆ ಹಲವು ಸಚಿವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆಂದು ಅವರು ತಿಳಿಸಿದರು.

ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ದೇಶದ ಸಾಮರಸ್ಯ ಮತ್ತು ಏಕತೆ, ಜನರೊಂದಿಗೆ ನೇರ ಸಂಪರ್ಕ, ಉದ್ಯೋಗ ಹಾಗೂ ಆರ್ಥಿಕ ಸಮಸ್ಯೆಗಳ ಅರಿವು, ರೈತರು ಮತ್ತು ಕಾರ್ಮಿಕರ ಜೀವನ ಪರಿಸ್ಥಿತಿಗಳನ್ನು ತಿಳಿದುಕೊಳ್ಳುವುದು, ಸಂವಿಧಾನ ಮತ್ತು ಪ್ರಜಾಪ್ರಭುತ್ವದ ರಕ್ಷಣೆ ಹಾಗೂ ದ್ವೇಷದ ಬದಲಿಗೆ ಪ್ರೀತಿಯ ಸಂದೇಶವನ್ನು ಸಾರುವುದು ಸೇರಿದಂತೆ ಹಲವು ಪ್ರಮುಖ ಆಶಯಗಳನ್ನು ಮುಂದಿಟ್ಟುಕೊಳ್ಳಲಾಗಿತ್ತು. ಅದೇ ವಿಚಾರಗಳನ್ನು ಮುಂದುವರೆಸಲಾಗುತ್ತದೆ ಎಂದು ವಿವರಿಸಿದರು.

ರಾಹುಲ್ ಗಾಂಧಿ ಅವರು ಸುಮಾರು ಐದು ತಿಂಗಳ ಕಾಲ ೬ ಸಾವಿರ ಕಿಲೋಮೀಟರ್ಗಳಷ್ಟು ಪಾದಯಾತ್ರೆ ನಡೆಸಿ, ದೇಶದ ವಿವಿಧ ವರ್ಗಗಳ ಜನರನ್ನು ನೇರವಾಗಿ ಭೇಟಿ ಮಾಡಿದ್ದರು. ಈ ಯಾತ್ರೆಯೂ ನಡೆದು ಇದೀಗ ನಾಲ್ಕು ವರ್ಷಗಳಾಗಿದ್ದು, ಅದರ ಆಶಯಗಳನ್ನು ತಳಮಟ್ಟಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಸ್ಥಳೀಯ ಮುಖಂಡರ ನೇತೃತ್ವದೊಂದಿಗೆ ೮೨ ವಿಧಾನಸಭಾ ಕ್ಷೇತ್ರಗಳಲ್ಲು ಬೂತ್ ಮಟ್ಟದಲ್ಲಿ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮುಂದಿನ ಹಂತದ ಕಾರ್ಯಕ್ರಮದ ರೂಪರೇಷಗಳನ್ನು ಸಿದ್ದಪಡಿಸಲಿದ್ದಾರೆ ಎಂದರು.

ಇದೇ ವೇಳೆ, ಎಸ್ಐಆರ್ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಮತದಾರರ ಪಟ್ಟಿಯಿಂದ ಅರ್ಹ ಮತದಾರರ ಹೆಸರುಗಳು ಕೈಬಿಡದಂತೆ ಚುನಾವಣಾ ಪ್ರಕ್ರಿಯೆ ಪಾರದರ್ಶಕವಾಗಿರಬೇಕಿತ್ತು. ಆದರೆ ಈಗ ಹಲವು ಸಂಗತಿಗಳು ಹೊರಬರುತ್ತಿವೆ. ಆದರಿಂದ ಚುನಾವಣಾ ಆಯೋಗದ ಅಧಿಕಾರಿಗಳ ಕಾರ್ಯವೈಖರಿ ಕುರಿತು ಕಾಂಗ್ರೆಸ್ ಹಲವು ಪ್ರಶ್ನೆಗಳನ್ನು ಎತ್ತಿದ್ದು, ಈ ಬಗ್ಗೆ ಸೂಕ್ತ ಸ್ಪಷ್ಟನೆ ಅಗತ್ಯವಿದೆ ಎಂದು ಹೇಳಿದರು.
ಚುನಾವಣಾ ಪ್ರಕ್ರಿಯೆಯಲ್ಲಿ ಅಧಿಕಾರಿಗಳು ಪಕ್ಷಪಾತವಿಲ್ಲದೆ ಕಾರ್ಯನಿರ್ವಹಿಸಬೇಕು. ಚುನಾವಣಾ ಆಯೋಗದ ಕಾರ್ಯವೈಖರಿ ಕುರಿತು ಉಂಟಾಗಿರುವ ಅನುಮಾನಗಳಿಗೆ ಸ್ಪಷ್ಟತೆ ನೀಡುವ ಅಗತ್ಯವಿದ್ದು, ಸಂಬಂಧಪಟ್ಟ ಅಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ನಿಷ್ಪಕ್ಷಪಾತವಾಗಿ ನಿರ್ವಹಿಸಬೇಕು ಎಂದು ಅವರು ಒತ್ತಾಯಿಸಿದರು.
ಚುನಾವಣಾ ಆಯೋಗ ನಿಪಕ್ಷಪಾತವಾಗಿ ಕಾರ್ಯನಿರ್ವಹಿಸ ಬೇಕಾಗಿತ್ತಾದರೂ, ಮುಖ್ಯ ಆಯುಕ್ತರು ಪಕ್ಷ ಪಾತಿಯಾಗಿ ರುವುದು ಅವರ ಸಹದ್ಯೋಗಿ ಗಳಿಂದ ಬಯಲಾಗಿದೆ.ಅವರ ರಾಜೀನಾಮೆ ನೀಡಬೇಕೆನ್ನುವುದು ಕಾಂಗ್ರೆಸ್ ಪಕ್ಷದ ಒತ್ತಾಯ ವಾಗಿದೆ.ಆದರೆ ಆಯೋಗ ಮತ್ತು ಕೇಂದ್ರ ಸರ್ಕಾರಗಳು ಶಾಮೀಲಾಗಿರುವುದರಿಂದ ಮುಂದೆ ಆಯುಕ್ತರನ್ನು ಯಾವುದಾದರೂ ಪ್ರಮುಖ ಹುದ್ದೆಗೆ ಕೂರಿಸಿದರೂ ಕೂಡ ಅಚ್ಚರಿ ಇಲ್ಲ. ಹಾಗಾಗಿ ಎಸ್ಐಆರ್ನಲ್ಲಿ ಆದ ಲೋಪಗಳ ಬಗ್ಗೆ ನಾವು ಜನರಿಗೆ ತಿಳಿಸಲಿದ್ದೇವೆ ಎಂದರು.
ಗೋಷ್ಟಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್. ಸಿ.ಯೋಗೇಶ್, ವಿಧಾನ ಪರಿಷತ್ ಸದಸ್ಯೆ ಬಲ್ಕೀಶ್ ಬಾನು, ವಿಧಾನ ಪರಿಷತ್ ಮಾಜಿ ಸದಸ್ಯ ಆರ್. ಪ್ರಸನ್ನಕುಮಾರ್, ರಾಜ್ಯ ಜವಳಿ ನಿಗಮದ ಅಧ್ಯಕ್ಷ ಚೇತನ್ ಕೆ. ಗೌಡ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ವೇತಾ ಬಂಡಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಎನ್.ರಮೇಶ್ ಹಾಗೂ ಪಿ.ಓ. ಶಿವಕುಮಾರ್, ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಸ್.ರವಿಕುಮಾರ್, ಕಾಂಗ್ರೆಸ್ ಮುಖಂಡರಾದ ಎಸ್.ಪಿ. ದಿನೇಶ್, ಜಿಲ್ಲಾ ಕಾಂಗ್ರೆಸ್ ಆಡಳಿತ ಉಸ್ತುವಾರಿ ಎಸ್.ಟಿ. ಹಾಲಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲೀಂ ಪಾಷಾ, ಎಸ್ಸಿ ಘಟಕದ ಅಧ್ಯಕ್ಷ ಶಿವಣ್ಣ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಎಸ್.ಟಿ.ಚಂದ್ರಶೇಖರ್, ಚಿನ್ನಪ್ಪ ಸೇರಿದಂತೆ ಇನ್ನಿತರರು ಇದ್ದರು.
ಹತ್ತು ಒಳ್ಳೆಯ ಕೆಲಸಗಳ ಮುಂದೆ ಒಂದುಕೆಟ್ಟ ಕೆಲಸ ಪ್ರಧಾನವಾಗಬಾರದು; ಭಂಡಾರಿಸೂಡಾ ಅಧ್ಯಕ್ಷ ಹೆಚ್.ಎಸ್.ಸುಂದರೇಶ್ ಅವರ ಟೀಕೆಗಳಿಗೆ ಪ್ರತಿಕ್ರಿಯೆ ನೀಡಿದ ಮಂಜುನಾಥ್ ಭಂಡಾರಿ ಅವರು, ನಿಜ, ಸುಂದರೇಶ್ ನನ್ನ ಕ್ಲಾಸ್ ಮೆಟ್. ಅವರ ಟೀಕೆಯ ವಿಚಾರ ವೈಯಕ್ತಿಕವಾದದ್ದು. ಇಲ್ಲಿ ಪ್ರತಿಕ್ರಿಯೆ ನೀಡುವುದು ಸರಿಯಲ್ಲ. ಹತ್ತಾರು ಒಳ್ಳೆಯ ಕೆಲಸ ಮಾಡಿದವರು ಕೆಲವೊಮ್ಮೆ ಒಂದು ಕೆಟ್ಟ ಕೆಲಸ ಮಾಡಿರುತ್ತಾರೆ. ಹಾಗಂತ ಅವರನ್ನು ಕೆಟ್ಟವರು ಎನ್ನಲಾಗದು. ಪಕ್ಷ ಅವರಿಗೆ ಎಲ್ಲವನ್ನು ಕೊಟ್ಟಿದೆ. ಅವರು ಕೂಡ ಪಕ್ಷಕ್ಕೆ ದುಡಿದಿದ್ದಾರೆ. ಅವರ ಮೇಲೆ ಶಿಸ್ತು ಕ್ರಮ ಕೈಗೊಳ್ಳುವುದನ್ನು ಪಕ್ಷ ನೋಡಿಕೊಳ್ಳಲಿದೆ ಎಂದು ಹೇಳಿದರು.