ಶಿವಮೊಗ್ಗ : ಸೆಪ್ಟಂಬರ್ 17 : : ಜಿಲ್ಲೆಯಲ್ಲಿ ಅತ್ಯಲ್ಪ ಅವಧಿಯಲ್ಲಿ ರೈಲ್ವೇ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆಗಳಾಗಿದ್ದು, ಅನೇಕ ಹೊಸ ರೈಲು ಸಂಪರ್ಕ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಾಂಸದ ಬಿ.ವೈ.ರಾಘವೇಂದ್ರ ಅವರು ಹೇಳಿದರು.
ಅವರು ಇಂದು ಶಿವಮೊಗ್ಗ ಸಮೀಪದ ಹಾರನಹಳ್ಳಿ ಗ್ರಾಮದ ರೈಲು ನಿಲ್ದಾಣದ ಪ್ಲಾಟ್ ಫಾರ್ಮ್ ವಿಸ್ತರಣೆ ಅಭಿವೃದ್ಧಿಪಡಿಸುವ 1.88ಕೋಟಿ ರೂ. ವೆಚ್ಚದ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡುತ್ತಿದ್ದರು. ಪ್ರಸ್ತುತ ಇರುವ ಪ್ಲಾಟ್ ಫಾರ್ಮ್ 250ಮೀ. ಅಗಲವಿದ್ದು, ಇದನ್ನು ಒಂದು ಮೀಟರ್ ಎತ್ತರಿಸುವ ಹಾಗೂ ಒಂದು ಮೀ. ಅಗಲ ವಿಸ್ತರಿಸಲು ಉದ್ದೇಶಿಸಲಾಗುವುದು. ಈ ಕಾಮಗಾರಿ ಪೂರ್ಣಗೊಂಡ ನಂತರ ಈ ಭಾಗದಲ್ಲಿ ಸಂಚರಿಸುವ ರೈಲುಗಳನ್ನು ನಿಲ್ಲಿಸಿ, ಸಂಚರಿಸಲು ಅವಕಾಶ ದೊರೆಯಲಿದೆ ಎಂದವರು ನುಡಿದರು.

ಕೋಟೆಗಂಗೂರು ರೈಲ್ವೇ ಕೋಚಿಂಗ್ ಡಿಪೋ ಶೀಘ್ರದಲ್ಲಿ ಲೋಕಾರ್ಪಣೆಗೊಳ್ಳಲಿದೆ. ಕೋಟೆಗಂಗೂರು ರೈಲ್ವೆ ಡಿಪೋ ಅಧಿಕೃತವಾಗಿ ಆರಂಭಗೊಂಡ ನಂತರ ದೇಶದ ಪ್ರತಿಷ್ಟಿತ ನಗರಗಳಿಗೆ ಸಂಪರ್ಕ ಕಲ್ಪಿಸುವ ಅನೇಕ ಹೊಸ ಮಾರ್ಗಗಳು ಆರಂಭಗೊಳ್ಳಲಿವೆ. ವಿಶೇಷವಾಗಿ ವಂದೇಭಾರತ್ ರೈಲು ಸಂಚಾರ ಆರಂಭಗೊಳ್ಳಲಿದೆ. ಇದರೊಂದಿಗೆ ತಿರುಪತಿ, ಕೇರಳದ ಎರ್ನಾಕುಲಂ, ಬಿಹಾರ, ಜಾರ್ಖಂಡ್, ಚಂಡೀಘಡ, ಗುವಾಹಟಿಗೆ ರೈಲು ಸಂಪರ್ಕ ದೊರೆತು ರೈಲ್ವೇ ಜಂಕ್ಷನ್ ಆಗಿ ಪರಿವರ್ತನೆಯಾಗಲಿದೆ. ಇದರಿಂದಾಗಿ ಮಲೆನಾಡಿನ ಜನರು ದೇಶದಾದ್ಯಂತ ಸಂಚರಿಸಲು ಅನುಕೂಲವಾಗಲಿದೆ ಎಂದ ಅವರು, ಶಿವಮೊಗ್ಗ – ಶಿಕಾರಿಪುರ – ರಾಣೇಬೆನ್ನೂರು ರೈಲು ಸಂಚಾರ

ಆರಂಭಗೊಳ್ಳುವುದರೊಂದಿಗೆ ಮಹಾರಾಷ್ಟ್ರ ಸೇರಿದಂತೆ ಉತ್ತರಭಾರತದ ರಾಜ್ಯಗಳಿಗೆ ಸಂಚಾರ ಸಂಪರ್ಕ ದೊರೆಯಲಿದೆ. ಇದರಿಂದಾಗಿ ಅತಿಹೆಚ್ಚು ಜನ ರೈಲಿನಲ್ಲಿ ಸುಲಭ, ಸರಳವಾಗಿ ಅತ್ಯಂತ ಕಡಿಮೆ ವೆಚ್ಚದಲ್ಲಿ ಸುಖಕರ ಪ್ರಯಾಣ ಮಾಡಬಹುದಾಗಿದೆ ಎಂದರು.
ಮುಂದಿನ ಎರಡು ತಿಂಗಳಲ್ಲಿ ಲೋಕಾರ್ಪಣೆಗೊಳ್ಳಲಿರುವ ಕೋಟೆಗಂಗೂರು ರೈಲ್ವೇ ಕೋಚಿಂಗ್ ಡಿಪೋ ರಾಜ್ಯದ ಮುಖ್ಯವಾದ ನಾಲ್ಕು ಡಿಪೋಗಳಲ್ಲಿ ಗುರುತಿಸುವ ಸ್ಥಾನಮಾನ ಹೊಂದಲಿದೆ. ಪ್ರಸ್ತುತ ವಾರಕ್ಕೆ ಮೂರು ಬಾರಿ ಮತ್ತು ವಾರಕ್ಕೆ ಒಂದು ಬಾರಿ ರೈಲಿನ ನಿರ್ವಹಣೆ ಬೆಂಗಳೂರಿನ ಸರ್.ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ನಲ್ಲಿ ನಡೆಯುತ್ತಿದ್ದು, ಅದು ಮುಂದಿನ ದಿನಗಳಲ್ಲಿ ಕೋಟೆಗಂಗೂರಿಗೆ

ಸ್ಥಳಾಂತರಗೊಳ್ಳಲಿದೆ. ಅಲ್ಲದೇ ಶಿವಮೊಗ್ಗ ನಗರದಲ್ಲಿನ ಗೂಡ್ಸ್ಶೆಡ್ ಕೂಡ ಕೋಟೆಗಂಗೂರಿನ ಸ್ಥಳಾಂತರಗೊಳ್ಳಲಿದೆ ಎಂದ ಅವರು, ತಾಳಗುಪ್ಪ, ಸಾಗರ ಮತ್ತು ಶಿವಮೊಗ್ಗದ ರೈಲ್ವೆ ನಿಲ್ದಾಣಗಳನ್ನು 100ಕೋಟಿ ರೂ.ಗಳ ವೆಚ್ಚದಲ್ಲಿ ಉನ್ನತೀಕರಿಸುವ ಕಾರ್ಯ ಕೈಗೊಳ್ಳಲಾಗುವುದು. ದಶಕಗಳ ಹಿಂದೆ ಕೇವಲ ಕೆಲವೇ ರೈಲುಗಳು ಸಂಚರಿಸುತ್ತಿದ್ದ ರೈಲು ಕಂಬಿಗಳ ಮೇಲೆ ಇಂದು ಪ್ರತಿನಿತ್ಯ 28ಕ್ಕೂ ಹೆಚ್ಚು ರೈಲುಗಳು ಸಂಚರಿಸುತ್ತಿವೆ. ಸಾರ್ವಜನಿಕರು ಈ ಅವಕಾಶದ ಲಾಭ ಪಡೆದುಕೊಳ್ಳಬೇಕು ಎಂದವರು ನುಡಿದರು.
ಅಷ್ಟೇ ಅಲ್ಲದೇ ಶಿವಮೊಗ್ಗ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಗಮನಹರಿಸಲಾಗಿದ್ದು, ರಸ್ತೆ, ಸೇತುವೆ, ಮತ್ತಿತರ ಕಾಮಗಾರಿಗಳನ್ನು ಸಹಸ್ರಾರು ಕೋಟಿ ರೂ.ಗಳ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ರೈಲು ಸಂಪರ್ಕ ಇಲ್ಲದಿರುವ ಜಿಲೆಯ ಸೊರಬ ಮತ್ತು ತೀರ್ಥಹಳ್ಳಿ ತಾಲೂಕುಗಳಿಗೂ ರೈಲು ಸಂಪರ್ಕ ಕಲ್ಪಿಸಲು ಗಮನಹರಿಸಲಾಗುವುದು ಎಂದ ಅವರು, ಶಿವಮೊಗ್ಗದಿಂದ ಹೊಸ ರೈಲು ಮಾರ್ಗಕ್ಕೆ ಮಂಜೂರಾತಿ ದೊರೆತಿದ್ದು, ಅಂತಿಮ ಸ್ಥಳ ಸಮೀಕ್ಷೆಗೆ ಭದ್ರಾವತಿ -ಚಿಕ್ಕಜಾಜೂರು, ಶಿವಮೊಗ್ಗದಿಂದ ಶೃಂಗೇರಿ-ಮಂಗಳೂರು, ಶಿವಮೊಗ್ಗದಿಂದ ಬೀರೂರಿಗೆ ದ್ವಿಪಥ ಟ್ರ್ಯಾಕ್ ನಿರ್ಮಾಣ, ತಾಳಗುಪ್ಪ-ಸಿರ್ಸಿ-ಹುಬ್ಬಳ್ಳಿ, ತಾಳಗುಪ್ಪ-ಹೊನ್ನಾವರ ನೂತನ ರೈಲು ಮಾರ್ಗ ಅಭಿವೃದ್ಧಿಗೊಳಿಸಲಾಗುವುದು ಎಂದರು.
ಪ್ರಸ್ತುತ ಕೈಗೊಳ್ಳಲಾಗಿರುವ ಅಭಿವೃದ್ಧಿ ಕಾಮಗಾರಿಯನ್ನು ಗುಣಮಟ್ಟದ್ದಾಗಿರುವಂತೆ ನೋಡಿಕೊಳ್ಳುವುದರ ಜೊತೆಗೆ ನಿಗಧಿಪಡಿಸಿದ ಕಾಲಮಿತಿಯೊಳಗಾಗಿ ಪೂರ್ಣಗೊಳಿಸುವಂತೆ ಸೂಚಿಸಿದ ಅವರು, ಈ ಭಾಗದ ಜನರ ನಿರೀಕ್ಷೆಯಂತೆ ರೈಲ್ವೇ ಮೇಲ್ಸೇತುವೆ ಕಾಮಗಾರಿ, ವಿಠಗೊಂಡನಕೊಪ್ಪ ಹಾರ್ನಳ್ಳೀ ರಸ್ತೆ ಸಂಪರ್ಕ ಕಲ್ಪಿಸಲು ಗಮನಹರಿಸಲಾಗುವುದು. ಶಿವಮೊಗ್ಗ ತಾಲೂಕಿನ ಏತ ನೀರಾವರಿ ಯೋಜನೆಗಳಿಗೆ ರಾಜ್ಯದ ನೀರಾವರಿ ಸಚಿವರಿಗೆ 28ಕೋಟಿ ರೂ.ಗಳನ್ನು ಮಂಜೂರು ಮಾಡುವಂತೆ ಮನವಿ ಮಾಡಿಕೊಳ್ಳಲಾಗಿದ್ದು, ಅನುದಾನ ಬಿಡುಗಡೆಗೊಳ್ಳುವ ಆಶಾಭಾವನೆ ಇದೆ. ಈ ಎಲ್ಲಾ ಯೋಜನೆಗಳ ಹಿಂದೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಸಹಕಾರ ಸ್ಮರಿಸುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ವಿಧಾನ ಪರಿಷತ್ ಸದಸ್ಯ ಡಾ|| ಧನಂಜಯ ಸರ್ಜಿ ಅವರು ಮಾತನಾಡಿ, ಜಿಲ್ಲೆಯಲ್ಲಿ ರೈಲ್ವೇ ಕ್ಷೇತ್ರದಲ್ಲಿ ಕ್ರಾಂತಿಕಾರಕ ಅಭಿವೃದ್ಧಿಗಳಾಗಿವೆ. ನೂತನ ರೈಲ್ವೆ ಸಂಪರ್ಕ ವ್ಯವಸ್ಥೆ ದೊರೆತು ಜನಸಾಮಾನ್ಯರು ರಾಜ್ಯದಾದ್ಯಂತ ಸಂಚರಿಸಲು ಅನುಕೂಲವಾಗಿದೆ. ಈ ಎಲ್ಲಾ ಕಾಮಗಾರಿಗಳ ಹಿಂದಿನ ಪ್ರೇರಕ ಶಕ್ತಿಯಾಗಿರುವ ಸಂಸದ ಬಿ.ವೈ.ರಾಘವೇಂದ್ರ ಅವರು ನುಡಿದಂತೆ ನಡೆದು ಮಾದರಿ ಜನನಾಯಕರಾಗಿದ್ದಾರೆ. ಆದ್ದರಿಂದ ಅವರು ಅಭಿನಂದನಾರ್ಹರು ಎಂದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಕೆ.ಬಿ.ಅಶೋಕನಾಯ್ಕ, ಕೆ.ಜಿ.ಕುಮಾರಸ್ವಾಮಿ, ಜಗದೀಶ್, ಸೇರಿದಂತೆ ಅನೇಕ ಗಣ್ಯರು, ಮುಖಂಡರು, ಅಧಿಕಾರಿಗಳು ಉಪಸ್ಥಿತರಿದ್ದರು.