ಶಿವಮೊಗ್ಗ, ಸೆ.10: ನಗರದ ಪ್ರಮುಖ ರಸ್ತೆ ಹಾಗೂ ಫುಟ್ಪಾತ್ಗಳನ್ನು ಒತ್ತುವರಿ ಮಾಡಿಕೊಂಡು ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಪಡಿಸುತ್ತಿದ್ದ ಅತಿಕ್ರಮಣಗಳ ವಿರುದ್ಧ ಶಿವಮೊಗ್ಗ ಮಹಾನಗರ ಪಾಲಿಕೆ ಅಧಿಕಾರಿಗಳು ,ಟ್ರಾಫಿಕ್ ಪೋಲಿಸರು ಕಾರ್ಯಾಚರಣೆ ನಡೆಸಿ, ಒತ್ತುವರಿಗಳನ್ನು ತೆರವುಗೊಳಿಸಿದರು.

ನಿರ್ಮಲ ಆಸ್ಪತ್ರೆಯ ಹಿಂಭಾಗದ ಚಾಲನ್ನಿಂದ ಶರಾವತಿ ನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ರಸ್ತೆ ಹಾಗೂ ಫುಟ್ಪಾತ್ನ್ನು ಒತ್ತುವರಿ ಮಾಡಿಕೊಂಡು ಶ್ರೀ ಮಂಜುನಾಥ್ ತಂದೆ ವೀರಪ್ಪ ಅವರು ದನಗಳನ್ನು ಕಟ್ಟಿಕೊಂಡಿದ್ದರು. ಇದರಿಂದ ಪಾದಚಾರಿಗಳ ಸಂಚಾರ ಹಾಗೂ ಸಾರ್ವಜನಿಕ ವಾಹನಗಳ ಸುಗಮ ಓಡಾಟಕ್ಕೆ ತೊಂದರೆಯಾಗುತ್ತಿತ್ತು.

ಇದೇ ವೇಳೆ ಲಕ್ಷ್ಮೀ ಟಾಕೀಸ್ನಿಂದ ಜೈಲ್ ಸರ್ಕಲ್ವರೆಗೆ ರಸ್ತೆ ಹಾಗೂ ಫುಟ್ಪಾತ್ನ ಭಾಗವನ್ನು ಒತ್ತುವರಿ ಮಾಡಿಕೊಂಡು ಹಣ್ಣಿನ ಅಂಗಡಿಗಳು ಹಾಗೂ ವಿವಿಧ ಅಂಗಡಿಗಳ ರ್ಯಾಂಪ್ಗಳನ್ನು ನಿರ್ಮಿಸಿರುವುದು ಕಂಡುಬಂದಿತ್ತು.
ಈ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆ ಅಧಿಕಾರಿಗಳು ಹಾಗೂ ,ಟ್ರಾಫಿಕ್ ಪೋಲಿಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ, ರಸ್ತೆ ಮತ್ತು ಫುಟ್ಪಾತ್ನಲ್ಲಿ ನಿರ್ಮಿಸಲಾಗಿದ್ದ ಒತ್ತುವರಿಗಳನ್ನು ತೆರವುಗೊಳಿಸಿದರು.

ಕಾರ್ಯಾಚರಣೆಯಿಂದ ಫುಟ್ಪಾತ್ ಪಾದಚಾರಿಗಳ ಬಳಕೆಗೆ ಮುಕ್ತವಾಗಿದ್ದು, ಸಾರ್ವಜನಿಕ ವಾಹನಗಳ ಸುಗಮ ಸಂಚಾರಕ್ಕೂ ಅನುವು ಮಾಡಿಕೊಡಲಾಯಿತು.
ಸಾರ್ವಜನಿಕರ ಸಂಚಾರಕ್ಕೆ ಮೀಸಲಾದ ರಸ್ತೆ ಹಾಗೂ ಫುಟ್ಪಾತ್ಗಳನ್ನು ಒತ್ತುವರಿ ಮಾಡಿಕೊಂಡು ಸಂಚಾರಕ್ಕೆ ಅಡ್ಡಿಪಡಿಸುವವರ ವಿರುದ್ಧ ಇದೇ ರೀತಿಯ ಕ್ರಮ ಮುಂದುವರಿಯಬೇಕೆಂಬುದು ಸಾರ್ವಜನಿಕರ ಒತ್ತಾಯವಾಗಿದೆ.