ಶಿವಮೊಗ್ಗ, ಸೆ.4: ಹೊಳಲೂರು ಗ್ರಾಮದ ಗೋಡೌನ್ಗೆ ಕನ್ನ ಹಾಕಿ ಲಕ್ಷಾಂತರ ಮೌಲ್ಯದ ಒಣ ಅಡಿಕೆ ಎಗರಿಸಿ ಪರಾರಿಯಾಗಿದ್ದ ಖದೀಮರಿಗೆ ಶಿವಮೊಗ್ಗ ಗ್ರಾಮಾಂತರ ಠಾಣೆ ಪೊಲೀಸರು ಖಾಕಿ ಖದರ್ ತೋರಿಸಿದ್ದಾರೆ. ಪಿಐ ರಾಘವೇಂದ್ರ ಕಾಂಡಿಕೆ ನೇತೃತ್ವದ ತಂಡ ನಡೆಸಿದ ಚುರುಕಿನ ಕಾರ್ಯಾಚರಣೆಯಲ್ಲಿ ಐವರು ಆರೋಪಿಗಳು ಬಂಧನಕ್ಕೊಳಗಾಗಿದ್ದು, ₹5.75 ಲಕ್ಷ ಮೌಲ್ಯದ ಸೊತ್ತುಗಳನ್ನು ಜಪ್ತಿ ಮಾಡಲಾಗಿದೆ.

ಆಗಸ್ಟ್ 23ರ ಬೆಳಗಿನ ಜಾವ ಹೊಳಲೂರು ಗ್ರಾಮದ ಗೋಡೌನ್ಗೆ ನುಗ್ಗಿದ್ದ ಕಳ್ಳರು ಸುಮಾರು 4 ಕ್ವಿಂಟಾಲ್ 80 ಕೆ.ಜಿ. ಒಣ ಅಡಿಕೆ ಕಳವು ಮಾಡಿಕೊಂಡು ಪರಾರಿಯಾಗಿದ್ದರು. ಈ ಕುರಿತು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ಪೊಲೀಸರು ತನಿಖೆ ಆರಂಭಿಸಿದ್ದರು

.
ಜಿಲ್ಲಾ ಪೊಲೀಸ್ ಅಧೀಕ್ಷಕರು ಹಾಗೂ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ವಿಶೇಷ ತನಿಖಾ ತಂಡ ರಚಿಸಲಾಗಿತ್ತು. ಪಿಐ ರಾಘವೇಂದ್ರ ಕಾಂಡಿಕೆ ಅವರ ನೇತೃತ್ವದಲ್ಲಿ ಪಿಎಸ್ಐ ನವೀನ್ ಮಠಪತಿ ಹಾಗೂ ಸಿಬ್ಬಂದಿ ಆರೋಪಿಗಳ ಜಾಡು ಹಿಡಿದು ಕಾರ್ಯಾಚರಣೆ ನಡೆಸಿ ಐವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತರನ್ನು ರಾಹುಲ್ (25), ಜಗನ್ನಾಥ್ ಎಸ್. (23), ಚಂದನ್ ಕೆ. (22), ನವೀನ್ ಅಲಿಯಾಸ್ ಟಿಪ್ಪಿ (20) ಹಾಗೂ ಸುದೀಪ್ ಡಿ. ಎಂದು ಗುರುತಿಸಲಾಗಿದೆ.
ಕಾರಿನಲ್ಲಿ ಅಡಿಕೆ ಸಾಗಾಟ; ಬೈಕ್ ಕೂಡ ಜಪ್ತಿ
ಬಂಧಿತರಿಂದ ಕೃತ್ಯಕ್ಕೆ ಬಳಸಿದ್ದ ಸುಮಾರು ₹3 ಲಕ್ಷ ಮೌಲ್ಯದ ಮಾರುತಿ ಸುಜುಕಿ ಇಕೋ ಕಾರು, ₹25 ಸಾವಿರ ಮೌಲ್ಯದ ಹೀರೋ ಎಚ್ಎಫ್ ಡೀಲಕ್ಸ್ ಬೈಕ್ ಹಾಗೂ ₹2.50 ಲಕ್ಷ ಮೌಲ್ಯದ 4 ಕ್ವಿಂಟಾಲ್ 60 ಕೆ.ಜಿ. ಒಣ ಅಡಿಕೆ ವಶಪಡಿಸಿಕೊಳ್ಳಲಾಗಿದೆ.

ಒಟ್ಟು ₹5.75 ಲಕ್ಷ ಮೌಲ್ಯದ ಸೊತ್ತುಗಳನ್ನು ಜಪ್ತಿ ಮಾಡಲಾಗಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ

.
ಗೋಡೌನ್ಗೆ ಕನ್ನ ಹಾಕಿ ಅಡಿಕೆ ಎಗರಿಸಿದ್ದ ಆರೋಪಿಗಳ ಜಾಡು ಹಿಡಿದು ಕಾರ್ಯಾಚರಣೆ ನಡೆಸಿದ ಪಿಐ ರಾಘವೇಂದ್ರ ಕಾಂಡಿಕೆ ನೇತೃತ್ವದ ಶಿವಮೊಗ್ಗ ಗ್ರಾಮಾಂತರ ಠಾಣೆ ಪೊಲೀಸರ ಕಾರ್ಯಾಚರಣೆಗೆ ಮೆಚ್ಚುಗೆ ವ್ಯಕ್ತವಾಗಿದೆ.