
ಶಿವಮೊಗ್ಗ,ಸೆ.03:
ಬದುಕಲ್ಲಿ ಬೆಳೆಯಲು ಓದು ಅತಿ ಮುಖ್ಯ, ಹಾಗೆಯೇ ಓದಿನೊಂದಿಗೆ ಕ್ರೀಡೆ ಹಾಗೂ ಪಠ್ಯೇತರ ಚಟುವಟಿಕೆಗಳು ಸಹ ನಮ್ಮ ಜೀವನದ ಸಾಧನೆಗೆ ದಾರಿದೀಪವಾಗುತ್ತವೆ ಎಂದು ಶಿವಮೊಗ್ಗ ಸಂಚಾರಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ದೇವರಾಜ್ ತಿಳಿಸಿದರು.
ಶಿವಮೊಗ್ಗ ನೆಹರೂ ಕ್ರೀಡಾಂಗಣದಲ್ಲಿ ಇಂದು ಬೆಳಿಗ್ಗೆ ಆರಂಭಗೊಂಡ ಹಾರನಹಳ್ಳಿ, ಕುಂಸಿ, ಹಾಗೂ ಚೋರಡಿ ವಲಯದ ಪ್ರಾಥಮಿಕ ಶಾಲೆಯ 14 ವರ್ಷದ ವರ್ಷದೊಳಗಿನ ಮಕ್ಕಳ ಕ್ರೀಡಾಕೂಟವನ್ನು ಅವರು ಉದ್ಘಾಟಿಸಿ ಮಾತನಾಡುತ್ತಿದ್ದರು.
ಮಕ್ಕಳು ಕ್ರೀಡೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಇದರಿಂದ ನಮ್ಮ ದೈಹಿಕ ಸಾಮರ್ಥ್ಯದ ಜೊತೆಗೆ ಮಾನಸಿಕವಾದ ಓದಿನ ಸ್ಥಿತಿಗೆ ಪೂರಕ ವಾತಾವರಣ ದೊರಕಲಿದೆ ಎಂದರು.

ಕ್ರೀಡೆಯಲ್ಲಿ ಭಾಗವಹಿಸುವುದು ಅತೀ ಮುಖ್ಯ. ಪರಸ್ಪರ ಪ್ರೀತಿ ವಿಶ್ವಾಸದಿಂದ ಕ್ರೀಡೆಯಲ್ಲಿ ಭಾಗವಹಿಸಿ ಗೆಲ್ಲಲು ಯತ್ನಿಸಿ. ಸೋತಾಗ ನಿರಾಶರಾಗದಿರಿ, ಮುಂದಿನ ಬಾರಿ ಗೆಲ್ಲಲು ಪ್ರಯತ್ನಿಸಿ, ಪ್ರಯತ್ನ ಜೀವನದ ಸಾಧನೆಗೆ ದಾರಿದೀಪವಾಗುತ್ತದೆ ಎಂದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್ ಅವರು ಮಾತನಾಡುತ್ತಾ ಇನ್ಸ್ಪೆಕ್ಟರ್ ದೇವರಾಜ್ ಅವರು ಓದು ಹಾಗೂ ಕ್ರೀಡೆಯನ್ನು ಮುಂದಿದ್ದರಿಂದ ಇಂದು ಹಿರಿಯ ಪೊಲೀಸ್ ಅಧಿಕಾರಿಯಾಗಿದ್ದಾರೆ. ದೈಹಿಕ ಸಾಮರ್ಥ್ಯ ಹಾಗೂ ಮಾನಸಿಕ ಹಿಡಿತ ಸಾಧಿಸಲು ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳು ಅತ್ಯಗತ್ಯ. ಹಾರನಹಳ್ಳಿ ಹಿರಿಯ ಹಾರನಹಳ್ಳಿ ಹಿರಿಯ ಪ್ರಾಥಮಿಕ ಶಾಲೆ ಎಸ್ ಡಿಎಂಸಿ, ಗ್ರಾಮಸ್ಥರ ಸಹಕಾರದಿಂದ ಈ ಕ್ರೀಡಾಕೂಟವನ್ನು ವ್ಯವಸ್ಥಿತವಾಗಿ ಮಾಡಿದ್ದು ಸಂತಸದ ವಿಷಯ. ಇಲ್ಲಿ ಗೆದ್ದ ಮಕ್ಕಳು ಮುಂದೆ ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಬಹುದಾಗಿದೆ ಎಂದ ಅವರು ಎಲ್ಲಾ ಕ್ರೀಡಾಪಟು ಮಕ್ಕಳನ್ನು ಮಕ್ಕಳಿಗೆ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಹಾರನಹಳ್ಳಿ ಛಾಯಾ ನಗರದ ಶ್ರೀ ಶನೇಶ್ವರ ಸ್ವಾಮಿ ದೇವಾಲಯದ ಧರ್ಮದರ್ಶಿ ಹನುಮಂತಪ್ಪ ಅವರು ವಹಿಸಿಕೊಂಡಿದ್ದಾರೆ.

ಕಾರ್ಯಕ್ರಮದಲ್ಲಿ ಎಸ್ ಡಿ ಎಮ್ ಸಿ ಆದ್ಯಕ್ಷ ರಾಜಶೇಖರ್, ಉಪಾಧ್ಯಕ್ಷೆ ಪ್ರೀತಿ, ಸಮನ್ವಯಾಧಿಕಾರಿ ಶಿವಪ್ಪ ಸಂಗಣ್ಣನವರ್, ತಾಲೂಕು ಸಂಘದ ಅಧ್ಯಕ್ಷ ಜಯ ಎಂ., ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ತಿಮ್ಮಪ್ಪ, ಸಿಆರ್ ಪಿಗಳಾದ ಪ್ರಕಾಶ್, ರಾಘವೇಂದ್ರ ಪ್ರಮುಖರಾದ ಮೋಹನ್ ಕುಮಾರ್, ಮಂಜಪ್ಪ ಹಾಗೂ ಇತರರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಹಾರನಹಳ್ಳಿ ಶಾಲೆಯ ಮುಖ್ಯ ಶಿಕ್ಷಕಿ ರೂಪ ರೇಖಾಲೇಖಾ ಅವರು ಸ್ವಾಗತಿಸಿದರು. ಶಿಕ್ಷಕಿ ದೀಪಾ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಶಿಲ್ಪಾ ಅವರು ವಂದಿಸಿದರು.
ಮೂರು ವಲಯಗಳ ಸುಮಾರು 600ಕ್ಕೂ ಹೆಚ್ಚು ಮಕ್ಕಳು ಹಾಗೂ ಶಿಕ್ಷಕ ವೃಂದ, ದೈಹಿಕ ಶಿಕ್ಷಕರು ಉಪಸ್ಥಿತರಿದ್ದರು.