ಶಿವಮೊಗ್ಗ,ಸೆ.3: ಕಸ್ತೂರಿ ರಂಗನ್ ವರದಿಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಬೇಕು ಹಾಗೂ ಈಗ ಹೊರಡಿಸಿರುವ ಅಧಿಸೂಚನೆತಯನ್ನು ಹಿಂಪಡೆಯಬೇಕೆಂದು ಮಾಜಿ ಸಚಿವ ಹಾಗೂ ರಾಜ್ಯ ಕಾಂಗ್ರೆಸ್ ವಕ್ತಾರ ಕಿಮ್ಮನೆ ರತ್ನಾಕರ್ ಇಂದು ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.

ಕಸ್ತೂರಿ ರಂಗನ್ ವರದಿ ಜಾರಿ ಬಗ್ಗೆ ರಾಜ್ಯ ಮತ್ತು ಕೇಂದ್ರ ಸರ್ಕಾರ ಚರ್ಚೆ ನಡೆಸಬೇಕು. ವರದಿ ವಿರೋಧಿಸಿ ಸೆ.7 ರ ಬೆಳಿಗ್ಗೆ 9 ಗಂಟೆಗೆ ತೀರ್ಥಹಳ್ಳಿ ತಾಲ್ಲೂಕಿನ ಬಿಂದ್ಲ ಗ್ರಾಮದಿಂದ ತೀರ್ಥಹಳ್ಳಿಯ ಶಾಂತವೇರಿ ಗೋಪಾಲಗೌಡ ರಂಗಮಂದಿರದವರೆಗೆ ನಡೆಯಲಿರುವ ಪಾದಯಾತ್ರೆಯನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಸನ್ನಕುಮಾರ್ ಹಾಗೂ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಬಿ.ಎ.ರಮೇಶ್ ಹೆಗ್ಡೆ ಉದ್ಘಾಟಿಸಲಿದ್ದು, ನಂತರ ನಡೆಯುವ ಬೃಹತ್ ಪ್ರತಿಭಟನಾ ಸಭೆಯನ್ನು ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಉದ್ಘಾಟಿಸಲಿದ್ದು, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯ್ ಕುಮಾರ್ ಸೊರಕೆ ಹಾಗೂ ಜಿಲ್ಲೆಯ ಪಕ್ಷದ ಮುಖಂಡರು ಭಾಗವಹಿಸಲಿದ್ದಾರೆ ಎಂದರು.

ವರದಿ ಜಾರಿಯ ಬಗ್ಗೆ ಪಕ್ಷಾತೀತವಾಗಿ ವಿರೋಧ ವ್ಯಕ್ತವಾಗುತ್ತಿದ್ದು, ಬಿಜೆಪಿ ಜೆಡಿಎಸ್ ಸಹ ಪಾದಯಾತ್ರೆ, ಬಹಿರಂಗ ಸಭೆ ನಡೆಸುತ್ತಿದ್ದು, ಪಕ್ಷಾತೀತವಾಗಿ ನಡೆಯುವ ಪ್ರತಿಭಟನೆಯಲ್ಲಿ ಬಿಜೆಪಿಯೊಂದಿಗೆ ಕಾಂಗ್ರೆಸ್ ಭಾಗವಹಿಸುತ್ತಿಲ್ಲ. ವಿರೋಧ ವ್ಯಕ್ತಪಡಿಸುತ್ತಿರುವ ಬಿಜೆಪಿ ಇಲ್ಲಿ ಹೋರಾಟ ಮಾಡದೆ ಪಕ್ಷದ ಶಾಸಕರು ಮತ್ತು ಸಂಸದರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಏರಿ ಈ ವರದಿಯನ್ನು ತಿರಸ್ಕರಿಸುವಂತೆ ಹಾಗೂ ಅಧಿಸೂಚನೆಯನ್ನು ಹಿಂಪಡೆಯುವಂತೆ ಒತ್ತಾಯಿಸಬೇಕು ಎಂದರು.

ವರದಿಯನ್ನು ತಿರಸ್ಕರಿಸುವಂತೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ಮಾಡಿಕೊಂಡಿದ್ದು, ಈ ವರದಿ ಸಂಬಂಧಿಸಿದಂತೆ ಶೀಘ್ರದಲ್ಲೇ ಒಂದು ದಿನದ ಅಧಿವೇಶನ ಕರೆಯಲಿದ್ದು, ಈ ಕುರಿತು ಅಧಿವೇಶದ ನಿರ್ಣಯವನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸುವ ಭರವಸೆ ನೀಡಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಸನ್ನ ಕುಮಾರ್, ಪ್ರಮುಖರಾದ ಬಿ.ಎ.ರಮೇಶ್ ಹೆಗ್ಡೆ, ಎಸ್.ಟಿ.ಹಾಲಪ್ಪ, ಯು.ಶಿವಾನಂದ್, ಅಮರ್ನಾಥ್ ಶೆಟ್ಟಿ, ಗಣೇಶ್ ಗಾಜನೂರು ಇದ್ದರು.