ಶಿವಮೊಗ್ಗ: ಜಿಲ್ಲೆಯ ಎಲ್ಲಾ ಆಹಾರ ಉದ್ದಿಮೆದಾರರು ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಆಹಾರ ಸುರಕ್ಷತೆ, ಸ್ವಚ್ಛತೆ ಹಾಗೂ ನೈರ್ಮಲ್ಯ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಅಂಕಿತಾಧಿಕಾರಿ ಡಾ. ಮೈತ್ರಿ ಸೂಚಿಸಿದ್ದಾರೆ.
ರಾಜ್ಯಾದ್ಯಂತ ಇತ್ತೀಚೆಗೆ ನಡೆದ ವಿಶೇಷ ಪರಿಶೀಲನಾ ಅಭಿಯಾನದಲ್ಲಿ ಹಲವು ಆಹಾರ ಉದ್ದಿಮೆಗಳಲ್ಲಿ ನೈರ್ಮಲ್ಯ ಮತ್ತು ಆಹಾರ ಸುರಕ್ಷತೆಗೆ ಸಂಬಂಧಿಸಿದ ಲೋಪಗಳು ಕಂಡುಬಂದ ಹಿನ್ನೆಲೆಯಲ್ಲಿ ಈ ಸೂಚನೆ ನೀಡಲಾಗಿದೆ.

ಎಲ್ಲಾ ಆಹಾರ ಉದ್ದಿಮೆದಾರರು ಕಡ್ಡಾಯವಾಗಿ ಮಾನ್ಯವಾದ ಎಫ್ಎಸ್ಎಸ್ಎಐ ಪರವಾನಗಿ ಅಥವಾ ನೋಂದಣಿ ಹೊಂದಿರಬೇಕು. ಆಹಾರ ತಯಾರಿಕೆ, ಸಂಗ್ರಹಣೆ ಮತ್ತು ಮಾರಾಟದಲ್ಲಿ ಗುಣಮಟ್ಟ ಹಾಗೂ ಸುರಕ್ಷತೆಗೆ ಆದ್ಯತೆ ನೀಡಬೇಕು. ಅವಧಿ ಮೀರಿದ, ಹಾಳಾದ, ಕೊಳೆತ ಅಥವಾ ಕಲುಷಿತ ಆಹಾರ ಪದಾರ್ಥಗಳನ್ನು ಯಾವುದೇ ಕಾರಣಕ್ಕೂ ಬಳಸಬಾರದು.
ಕಚ್ಚಾ ವಸ್ತುಗಳನ್ನು ವಿಶ್ವಾಸಾರ್ಹ ಮೂಲಗಳಿಂದ ಖರೀದಿಸಿ, ಉತ್ಪನ್ನದ ಗುಣಮಟ್ಟ, ಬ್ಯಾಚ್ ಸಂಖ್ಯೆ, ತಯಾರಿಕಾ ದಿನಾಂಕ ಹಾಗೂ ಅವಧಿ ಮುಕ್ತಾಯ ದಿನಾಂಕ ಪರಿಶೀಲಿಸಬೇಕು. ಬಳಕೆಗೆ ಯೋಗ್ಯವಲ್ಲದ ಹಾಗೂ ಅವಧಿ ಮೀರಿದ ಆಹಾರವನ್ನು ತಕ್ಷಣ ಪ್ರತ್ಯೇಕಿಸಿ, ಮರುಬಳಕೆಯಾಗದ ರೀತಿಯಲ್ಲಿ ವಿಲೇವಾರಿ ಮಾಡಬೇಕು.

ಅಡುಗೆಮನೆ, ತಯಾರಿಕಾ ಸ್ಥಳ, ಸಂಗ್ರಹಣಾ ಪ್ರದೇಶ, ನೆಲ, ಗೋಡೆ, ಕಿಟಕಿ, ಮೇಲ್ಛಾವಣಿ ಸೇರಿದಂತೆ ಸಂಪೂರ್ಣ ಆವರಣವನ್ನು ಸ್ವಚ್ಛವಾಗಿಡಬೇಕು. ಆಹಾರದೊಂದಿಗೆ ಸಂಪರ್ಕಕ್ಕೆ ಬರುವ ಪಾತ್ರೆಗಳು, ಕತ್ತರಿಸುವ ಬೋರ್ಡ್ಗಳು, ಚಾಕುಗಳು ಹಾಗೂ ಕೌಂಟರ್ಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸಿ ಸ್ಯಾನಿಟೈಸ್ ಮಾಡಬೇಕು.
ಆಹಾರ ತಯಾರಿಕಾ ಮತ್ತು ಸಂಗ್ರಹಣಾ ಪ್ರದೇಶಗಳಿಗೆ ಇಲಿ, ಜಿರಳೆ ಹಾಗೂ ಇತರ ಕ್ರಿಮಿಕೀಟಗಳು ಪ್ರವೇಶಿಸದಂತೆ ಪರಿಣಾಮಕಾರಿ ಕೀಟ ನಿಯಂತ್ರಣ ಕ್ರಮ ಕೈಗೊಳ್ಳಬೇಕು. ಹಾಲು, ಮಾಂಸ, ಮೊಟ್ಟೆ ಹಾಗೂ ಸಿದ್ಧ ಆಹಾರದಂತಹ ಶೀಘ್ರ ಹಾಳಾಗುವ ಪದಾರ್ಥಗಳನ್ನು ನಿಗದಿತ ತಾಪಮಾನದಲ್ಲಿ ಸಂಗ್ರಹಿಸಬೇಕು. ರೆಫ್ರಿಜರೇಟರ್, ಡೀಪ್ ಫ್ರೀಜರ್ ಹಾಗೂ ಕೂಲರ್ಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿರುವುದನ್ನು ಖಚಿತಪಡಿಸಿಕೊಳ್ಳಬೇಕು.

ಆಹಾರ ನಿರ್ವಹಿಸುವ ಸಿಬ್ಬಂದಿ ಸ್ವಚ್ಛ ಉಡುಪು, ಹೆಡ್ ಕವರ್ ಹಾಗೂ ಏಪ್ರನ್ ಧರಿಸಬೇಕು. ಆಹಾರ ತಯಾರಿಸುವ ಮೊದಲು ಮತ್ತು ಅಗತ್ಯವಿರುವ ಸಂದರ್ಭದಲ್ಲಿ ಕೈಗಳನ್ನು ಸರಿಯಾಗಿ ತೊಳೆಯಬೇಕು. ಆಹಾರ ತಯಾರಿಕೆ ಹಾಗೂ ಕುಡಿಯಲು ಬಳಸುವ ನೀರು ಗುಣಮಟ್ಟದ್ದಾಗಿರಬೇಕು. ಆಹಾರ ತಯಾರಿಕೆಯಲ್ಲಿ ಬಳಸುವ ಐಸ್ ಕೂಡ ಸುರಕ್ಷಿತ ನೀರಿನಿಂದ ತಯಾರಾಗಿರಬೇಕು.
ಪ್ಯಾಕೇಜ್ ಮಾಡಿದ ಆಹಾರ ಪದಾರ್ಥಗಳಲ್ಲಿ ಎಫ್ಎಸ್ಎಸ್ಎಐ ನಿಯಮಾನುಸಾರ ಕಡ್ಡಾಯ ಲೇಬಲಿಂಗ್ ವಿವರಗಳನ್ನು ನಮೂದಿಸಬೇಕು. ಗ್ರಾಹಕರನ್ನು ತಪ್ಪುದಾರಿಗೆಳೆಯುವ ಲೇಬಲ್ ಅಥವಾ ಪ್ರದರ್ಶನ ಬಳಸಬಾರದು. ಆಹಾರ ತ್ಯಾಜ್ಯವನ್ನು ಮುಚ್ಚಳವಿರುವ ಕಸದ ಬುಟ್ಟಿಗಳಲ್ಲಿ ಸಂಗ್ರಹಿಸಿ, ನಿಯಮಾನುಸಾರ ವಿಲೇವಾರಿ ಮಾಡಬೇಕು.
ಸಿಬ್ಬಂದಿಗೆ ಆಹಾರ ಸುರಕ್ಷತೆ ಮತ್ತು ನೈರ್ಮಲ್ಯದ ಕುರಿತು ಅಗತ್ಯ ತರಬೇತಿ ನೀಡಬೇಕು. ಆಹಾರ ಪದಾರ್ಥಗಳ ಖರೀದಿ, ಸಂಗ್ರಹಣೆ, ತಾಪಮಾನ ನಿಯಂತ್ರಣ, ಸ್ವಚ್ಛತೆ, ಕೀಟ ನಿಯಂತ್ರಣ ಹಾಗೂ ಸಿಬ್ಬಂದಿ ತರಬೇತಿಯ ದಾಖಲೆಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕು. ಆಹಾರ ಸುರಕ್ಷತಾ ಅಧಿಕಾರಿಗಳ ತಪಾಸಣೆಗೆ ಅಗತ್ಯ ದಾಖಲೆ ಹಾಗೂ ಮಾಹಿತಿಯನ್ನು ಒದಗಿಸಿ ಸಹಕರಿಸಬೇಕು.

15 ದಿನಗಳ ಗಡುವು
ವಿಶೇಷ ತಪಾಸಣೆಯಲ್ಲಿ ಕಂಡುಬಂದಿರುವ ಲೋಪಗಳನ್ನು ಸರಿಪಡಿಸಿಕೊಳ್ಳಲು ಸಲಹೆ ಅಥವಾ ಆದೇಶ ಜಾರಿಯಾದ ದಿನಾಂಕದಿಂದ 15 ದಿನಗಳ ಕಾಲಾವಕಾಶ ನೀಡಲಾಗುತ್ತದೆ. ಈ ಅವಧಿ ಮುಗಿದ ಬಳಿಕ ಮರುತಪಾಸಣೆ ನಡೆಸಲಾಗುವುದು.
ಮರುತಪಾಸಣೆ ವೇಳೆ ಲೋಪಗಳನ್ನು ಸರಿಪಡಿಸದಿರುವುದು ಅಥವಾ ನಿಯಮ ಉಲ್ಲಂಘನೆ ಮುಂದುವರಿದಿರುವುದು ಕಂಡುಬಂದರೆ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ-2006 ಹಾಗೂ ನಿಯಮಗಳು-2011ರ ಅನ್ವಯ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಡಾ. ಮೈತ್ರಿ ಎಚ್ಚರಿಸಿದ್ದಾರೆ.