ತೀರ್ಥಹಳ್ಳಿ: ತಾಲ್ಲೂಕಿನ ಶ್ರೀ ಚೌಡೇಶ್ವರಿ–ಸಯ್ಯಿದ್ ಸಾದತ್ ದರ್ಗಾದಲ್ಲಿ ನಡೆದ ಕಾಣಿಕೆ ಹುಂಡಿ ಎಣಿಕೆ ಕಾರ್ಯದಲ್ಲಿ ಒಟ್ಟು ₹1,01,73,650 ನಗದು ಸಂಗ್ರಹವಾಗಿದೆ.

ಹುಂಡಿಯಲ್ಲಿ ಭಕ್ತಾದಿಗಳು ಸಲ್ಲಿಸಿದ್ದ ಕಾಣಿಕೆಗಳನ್ನು ಎಣಿಕೆ ಮಾಡಲಾಗಿದ್ದು, ಒಂದು ಕೋಟಿ ಒಂದು ಲಕ್ಷದ ಎಪ್ಪತ್ತಮೂರು ಸಾವಿರದ ಆರುನೂರ ಐವತ್ತು ರೂಪಾಯಿ ನಗದು ಲಭಿಸಿದೆ. ಇದರ ಜೊತೆಗೆ ಭಕ್ತರು ಚಿನ್ನ ಹಾಗೂ ಬೆಳ್ಳಿಯ ಆಭರಣಗಳನ್ನೂ ಕಾಣಿಕೆಯಾಗಿ ಸಲ್ಲಿಸಿದ್ದಾರೆ.

ಸಂಗ್ರಹವಾದ ನಗದು ಮೊತ್ತವನ್ನು ನಿಯಮಾನುಸಾರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿದೆ.

ಹುಂಡಿ ಎಣಿಕೆ ಕಾರ್ಯದ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್. ಹೇಮಂತ್ ಕುಮಾರ್ ಹಾಗೂ ಉಪವಿಭಾಗಾಧಿಕಾರಿ ಡಾ. ಮೈತ್ರಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಈ ಸಂದರ್ಭದಲ್ಲಿ ತಹಸೀಲ್ದಾರ್ ರಂಜಿತ್, ಮುಜರಾಯಿ ತಹಸೀಲ್ದಾರ್ ಆರ್. ಪ್ರದೀಪ್, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆರೆಹಳ್ಳಿ ರಾಮಪ್ಪ ಹಾಗೂ ಸಮಿತಿಯ ಸರ್ವ ಸದಸ್ಯರು, ಕಾರ್ಯನಿರ್ವಾಹಕ ಅಧಿಕಾರಿಗಳು, ಕಂದಾಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ, ಗ್ರಾಮ ಸಹಾಯಕರು, ದೇವಸ್ಥಾನದ ಸಿಬ್ಬಂದಿ, ಬ್ಯಾಂಕ್ ಸಿಬ್ಬಂದಿ ಹಾಗೂ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.