ಶಿವಮೊಗ್ಗ: ಕಳ್ಳತನ ಪ್ರಕರಣವೊಂದರಲ್ಲಿ ಕಳೆದ ಏಳು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿಯನ್ನು ದೊಡ್ಡಪೇಟೆ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ದೊಡ್ಡಪೇಟೆ ಪೊಲೀಸ್ ಠಾಣೆಯ ಗುನ್ನೆ ಸಂಖ್ಯೆ 183/2019ರ ಕಲಂ 379 ಐಪಿಸಿ ಪ್ರಕರಣಕ್ಕೆ ಸಂಬಂಧಿಸಿದಂತೆ, ಶಿವಮೊಗ್ಗದ ಅಮೀರ್ (26) ಎಂಬಾತನ ವಿರುದ್ಧ 2ನೇ ಜೆಎಂಎಫ್ಸಿ ನ್ಯಾಯಾಲಯದಲ್ಲಿ ಸಿಸಿ ನಂ.993/2020ರಲ್ಲಿ ದಸ್ತಗಿರಿ ವಾರೆಂಟ್ ಜಾರಿಯಾಗಿತ್ತು.

ವಾರೆಂಟ್ ಜಾರಿಯಾದ ಬಳಿಕವೂ ಆರೋಪಿ ಹಲವು ವರ್ಷಗಳಿಂದ ಪೊಲೀಸರಿಗೆ ಹಾಗೂ ನ್ಯಾಯಾಲಯಕ್ಕೆ ಸಿಗದೇ ತಲೆಮರೆಸಿಕೊಂಡಿದ್ದನು. ಈ ಹಿನ್ನೆಲೆಯಲ್ಲಿ ದೊಡ್ಡಪೇಟೆ ಪೊಲೀಸ್ ಠಾಣೆಯ ಪಿಐ ನೇತೃತ್ವದಲ್ಲಿ ಸಿಬ್ಬಂದಿಗಳ ತಂಡ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಿದೆ.

ಬಂಧಿತ ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯದ ಆದೇಶದಂತೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ದೀರ್ಘಕಾಲದಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾದ ದೊಡ್ಡಪೇಟೆ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.