ಶಿವಮೊಗ್ಗ : ಆಗಸ್ಟ್ ೨೪ : : ಶಿವಮೊಗ್ಗ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿನ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಪ್ರಕ್ರಿಯೆಯ ನಂತರ ಕರಡು ಮತದಾರರ ಪಟ್ಟಿಯು ಇಂದು ಬಿಡುಗಡೆಯಾಗಿದ್ದು, ಮತದಾರರು ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿರುವುದನ್ನು ಚುನಾವಣಾ ಆಯೋಗದ ಅಧಿಕೃತ ಜಾಲತಾಣದಲ್ಲಿ ಪರಿಶೀಲಿಸಿಕೊಳ್ಳಬಹುದಾಗಿದೆ ಎಂದು ಶಿವಮೊಗ್ಗ ಮಹಾನಗರಪಾಲಿಕೆ ಆಯುಕ್ತ ಕೆ.ಮಾಯಣ್ಣಗೌಡ ಅವರು ಹೇಳಿದರು.

ಅವರು ಇಂದು ಪಾಲಿಕೆಯ ಪರಿಷತ್ ಸಭಾಂಗಣದಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಜಿಲ್ಲೆಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಪ್ರಕ್ರಿಯೆಯ ಕುರಿತು ಮಾಹಿತಿ ನೀಡಿ ಮಾತನಾಡುತ್ತಿದ್ದರು. ಪಾಲಿಕೆ ವ್ಯಾಪ್ತಿಯಲ್ಲಿದ್ದ ಒಟ್ಟು ೨೮೮ಮತಗಟ್ಟೆಗಳಲ್ಲಿ ೧೨೦೦ಕ್ಕೂ ಹೆಚ್ಚಿನ ಮತದಾರರಿರುವ ಮತಗಟ್ಟೆಗಳನ್ನು ಗುರುತಿಸಿ, ೧೧೫೦ಕ್ಕೆ ಹೆಚ್ಚಿನ ಮತದಾರರಿಲ್ಲದಂತೆ ಹೆಚ್ಚುವರಿಯಾಗಿ ೯ಮತಗಟ್ಟೆಗಳನ್ನು ಸೃಜಿಸಿ ಒಟ್ಟು ೨೯೭ಕೇಂದ್ರಗಳನ್ನಾಗಿ ಹೆಚ್ಚಿಸಲಾಗಿದೆ ಎಂದರು.

೨೯೭ಮತಗಟ್ಟೆ ಅಧಿಕಾರಿಗಳಿಗೆ ಉಸ್ತುವಾರಿಯಾಗಿ ೨೯ಮಂದಿ ಅಧಿಕಾರಿಗಳನ್ನು ನೇಮಿಸಿ ಉಸ್ತುವಾರಿಯ ಹೊಣೆ ನೀಡಲಾಗಿದೆ. ೨೦೨೬ರ ಜೂನ್೦೬ರಲ್ಲಿರುವಂತೆ ಪಾಲಿಕೆ ವ್ಯಾಪ್ತಿಯಲ್ಲಿದ್ದ ಒಟ್ಟು ೨೭೭೦೯೮ಮತದಾರರಲ್ಲಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಪ್ರಕ್ರಿಯೆಯ ನಂತರ ೨೨೦೬೬೬ಮತದಾರರು ಅಂತಿಮ ಕರಡು ಪಟ್ಟಿಯಲ್ಲಿ ಉಳಿದುಕೊಂಡಿದ್ದಾರೆ. ಇದರಲ್ಲಿ ಈವರೆಗೆ ಮ್ಯಾಪಿಂಗ್ ಆಗದಿರುವ ೫೬೪೩೨ ಮತದಾರರಲ್ಲಿ ೯೧೮೧ಮಂದಿ ಮೃತರಾಗಿರುವುದನ್ನು ಗುರುತಿಸಲಾಗಿದೆ. ೨೯೯೬೨ ಮಂದಿ ಸ್ಥಳಾಂತರಗೊಂಡಿದ್ದಾರೆ. ೫೭೧೯ಮಂದಿ ಬೇರೆಡೆಗೆ ಈಗಾಗಲೇ ನೋಂದಾಯಿಸಿಕೊಂಡಿದ್ದಾರೆ. ೧೧೫೭೦ಮಂದಿ ಮತದಾರರನ್ನು ಗೈರು ಎಂದು ಗುರುತಿಸಲಾಗಿದೆ. ಈ ಪ್ರಕ್ರಿಯೆಯ ಕುರಿತಾದ ಮಾಹಿತಿಯನ್ನು ಕಾಲಕಾಲಕ್ಕೆ ಸ್ಥಳೀಯ ರಾಜಕೀಯ ಪಕ್ಷಗಳ ಮುಖಂಡರಿಗೆ ಮಾಹಿತಿ ಒದಗಿಸಲಾಗಿದೆ ಎಂದರು.

ಮರಣ ಹೊಂದಿದ ಹಾಗೂ ಸ್ಥಳಾಂತರಗೊಂಡ ಮತದಾರರನ್ನು ಹೊರತುಪಡಿಸಿ, ಈವರೆಗೆ ಗುರುತಿಸಲಾಗದಿರುವ ಮತದಾರರಿಗೆ ನೋಟಿಸ್ ನೀಡಲಾಗುತ್ತದೆ. ಈ ಎಲ್ಲರೂ ಅಗತ್ಯ ದಾಖಲೆಗಳೊಂದಿಗೆ ತಮ್ಮ ಪೌರತ್ವವನ್ನು ಸಾಬೀತುಪಡಿಸಬೇಕಾಗುವುದು. ಮ್ಯಾಪಿಂಗ್ ಮಾಡಲು ಅವರಿಗೆ ಕಾಲಾವಕಾಶ ನಿಗಧಿಪಡಿಸಿಕೊಡಲಾಗುವುದು. ಪಟ್ಟಿಯಲ್ಲಿ ಹೆಸರು ಇಲ್ಲದಿರುವವರು ಆಕ್ಷೇಪಣೆ ಸಲ್ಲಿಸಲು ಸೆಪ್ಟೆಂಬರ್ ೨೩ರವರೆಗೆ ಅವಕಾಶವಿದ್ದು, ಮತದಾರರು ತಮ್ಮ ಹೆಸರು ಇದೆಯೇ ಎಂದು ಪರಿಶೀಲಿಸಿಕೊಳ್ಳಬಹುದಾಗಿದೆ ಎಂದರು.
ಮತದಾರರ ಕರಡು ಪಟ್ಟಿಯಿಂದ ಹೊರಗುಳಿದಿರುವ ಮತದಾರರ (ಎಎಸ್ಡಿಡಿಒ) ಪೈಕಿ ಗೈರು, ಸ್ಥಳಾಂತರಗೊಂಡಿರುವ, ಪಟ್ಟಿಯಲ್ಲಿ ಹೆಸರು ಇಲ್ಲದಿದ್ದರೆ ಅಥವಾ ತಿದ್ದುಪಡಿ ಇದ್ದರೆ, ಹೊಸ ಸೇರ್ಪಡೆಗೆ ಮತದಾರರು ನಿಗದಿತ ದಾಖಲೆಗಳೊಂದಿಗೆ ಫಾರ್ಮ್ಸಲ್ಲಿಕೆ ಮಾಡಬೇಕು. ಇದರ ಜತೆಗೆ ಅ.೧ಕ್ಕೆ ೧೮ ವರ್ಷ ತುಂಬುವ ಯುವ ಮತದಾರರು ನಿಗದಿತ ದಾಖಲೆಗಳೊಂದಿಗೆ ಫಾರ್ಮ್ಸಲ್ಲಿಸಿ ಮತದಾರರ ಪಟ್ಟಿಗೆ ಸೇರ್ಪಡೆಯಾಗಬಹುದು. ಹೆಸರು, ವಿಳಾಸ ಬದಲಾವಣೆಗೆ ನಮೂನೆ-೮ ಬಳಸಿ ಅರ್ಜಿ ಸಲ್ಲಿಸಬಹುದಾಗಿದೆ ಎಂದವರು ನುಡಿದರು.
ಈ ಸಂದರ್ಭದಲ್ಲಿ ನೋಡಲ್ಅಧಿಕಾರಿ ಗಣೇಶ್ಅವರು ಉಪಸ್ಥಿತರಿದ್ದರು.