ದಾವಣಗೆರೆ: ಅನೈತಿಕ ಸಂಬಂಧಕ್ಕೆ ಅಡ್ಡಿಯಾಗುತ್ತಿದ್ದ ಪತಿಯನ್ನೇ ಪ್ರಿಯಕರ ಮತ್ತು ಅವನ ಗೆಳೆಯನ ಸಹಾಯದಿಂದ ಕತ್ತುಹಿಸುಕಿ ಕೊಲೆಗೈದು ಶವವನ್ನು ಹರಿಹರ ಸಮೀಪದ ತುಂಗಭದ್ರಾ ನದಿಯಲ್ಲಿ ಎಸೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ದಾವಣಗೆರೆ ಸಮೀಪದ ಪಾಮೇನಹಳ್ಳಿಯ ಎಂ. ರಘು(36) ಕೊಲೆಯಾದ ವ್ಯಕ್ತಿ.

ರಘು ಪತ್ನಿ ಶ್ರುತಿ, ಆಕೆಯ ಪ್ರಿಯಕರ ಉಬೇದುಲ್ಲಾ ಅಲಿಯಾಸ್ ಮುನ್ನಾ ಕೊಲೆ ಮಾಡಿದವರು.
ಕಳೆದ 12 ವರ್ಷದ ಹಿಂದೆ ರಘು ಮತ್ತು ಹಾವೇರಿ ಮೂಲದ ಶ್ರುತಿ ಪ್ರೀತಿಸಿ ಮದುವೆಯಾಗಿದ್ದರು. ಪಾಮೇನ ಹಳ್ಳಿಯಲ್ಲಿ ವಾಸವಿದ್ದ ರಘು ಕೂಲಿ ಕೆಲಸ ಮಾಡಿಕೊಂಡಿದ್ದನು. ದಂಪತಿಗೆ ಒಂದು ಗಂಡು, ಹೆಣ್ಣು ಮಗು ಇದೆ.

ಇತ್ತೀಚಿಗೆ ರಘು ಪ್ರತಿನಿತ್ಯ ಮದ್ಯ ಸೇವನೆ ಮಾಡಿ ಗಲಾಟೆ ಮಾಡುತ್ತಿದ್ದ. ಈ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ಆಗಾಗ ಜಗಳ ನಡೆಯುತ್ತಿತ್ತು ಎಂದು ತಿಳಿದು ಬಂದಿದೆ.
ಕಳೆದ 2 ವರ್ಷಗಳ ಹಿಂದೆ ಜೀವನ ನಿರ್ವಹಣೆಗಾಗಿ ಶ್ರುತಿ ದಾವಣಗೆರೆಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಗಾರ್ಡೆನಿಂಗ್ ಕೆಲಸಕ್ಕೆ ಹೋಗುತ್ತಿದ್ದ ಸಂದರ್ಭದಲ್ಲಿ ನಿಟುವಳ್ಳಿಯ ಉಬೇದುಲ್ಲಾ ಅಲಿಯಾಸ್ ಮುನ್ನಾ ಎಂಬವನ ಪರಿಚಯವಾಗಿದೆ. ಇಬ್ಬರ ನಡುವೆ ಅಕ್ರಮ ಸಂಬಂಧ ಏರ್ಪಟ್ಟಿತ್ತು ಎನ್ನಲಾಗಿದೆ. ಗಂಡನ ಕಿರುಕುಳದಿಂದ ಬೇಸತ್ತಿದ್ದ ಶ್ರುತಿ ಪ್ರಿಯಕರನೊಡಗೂಡಿ ರಘುವಿನ ಕೊಲೆಗೆ ಸಂಚು ರೂಪಿಸಿದ್ದಾರೆ.

ಆ.11 ರ ರಾತ್ರಿ ಉಬೇದುಲ್ಲಾ ತನ್ನ ಪರಿಚಯಸ್ಥ ಸುರೇಶ್ ಎಂಬಾತನ ಮೂಲಕ ರಘುವನ್ನು ದಾವಣಗೆರೆಯ ಬಾರ್ವೊಂದಕ್ಕೆ ಕರೆಸಿಕೊಂಡು ಕಂಠಪೂರ್ತಿ ಕುಡಿಸಿದ್ದಾರೆ. ದಾವಣಗೆರೆಯಿಂದ ರಘುವನ್ನು ಹರಿಹರದ ತುಂಗ ಭದ್ರಾ ನದಿ ಬಳಿ ಕರೆದುಕೊಂಡು ಹೋಗಿ ಕತ್ತು ಹಿಸುಕಿ, ನದಿಗೆ ತಳ್ಳಿದ್ದಾರೆ.
ಗಂಡನ ಕೊಲೆಯಾಗಿರುವ ವಿಷಯ ಗೊತ್ತಿದ್ದರೂ ಶ್ರುತಿ ಏನು ಗೊತ್ತೇ ಇಲ್ಲದವಳಂತೆ ಅತ್ತೆ, ಮೈದುನ, ಸಂಬಂಧಿಕರ ಜೊತೆಗೂಡಿ ರಘುವಿನ ಹುಡುಕಾಟ ನಡೆಸಿದ್ದಾಳೆ.

ರಘುವಿನ ಹುಡುಕಾಟ ನಡೆಸುತ್ತಿದ್ದಾಗಲೂ ಅತ್ತೆ(ರಘುವಿನ ತಾಯಿ) ಜೊತೆಗೆ ಶ್ರುತಿ ಇರುತ್ತಿದ್ದನ್ನು ಗಮನಿಸಿದ ಕುಟುಂಬದವರು ಅನುಮಾನ ಬಂದು ಹದಡಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ಪೊಲೀಸರು ಶ್ರುತಿ ಮತ್ತು ಆಕೆಯ ಸಹೋದರಿಯನ್ನು ವಿಚಾರಣೆಗೆ ಒಳಪಡಿಸಿದಾಗ ರಘು ಕೊಲೆಯಾಗಿರುವ ವಿಷಯ ಬಯಲಿಗೆ ಬಂದಿದೆ.
ಪತಿಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರುತಿಯನ್ನ ಬಂಧಿಸಿ, ಜೈಲಿಗೆ ಕಳಿಸಿದ್ದಾರೆ. ಕೊಲೆಗೆ ಸಂಬಂಧಿಸಿದಂತೆ ಪ್ರಿಯಕರ ಉಬೇದುಲ್ಲಾ, ಅವನ ಗೆಳೆಯ ಸುರೇಶ್ನನ್ನು ವಿದ್ಯಾನಗರ ಪೊಲೀಸರು ಬಂಧಿಸಿದ್ದಾರೆ.
ರಘುವಿನ ಶವ ಇನ್ನೂ ಪತ್ತೆಯಾಗಿಲ್ಲ. ಹುಡುಕಾಟ ಮುಂದುವರಿದಿದೆ.