ಶಿವಮೊಗ್ಗ,ಅ.06:
“ಕುಡಿಯುವ ನೀರಿನ ಸಮಸ್ಯೆ ಹೇಳಿಕೊಳ್ಳಲು ಬರುವ ಸಾರ್ವಜನಿಕರೊಂದಿಗೆ ಅಸಭ್ಯವಾಗಿ ನಡೆದುಕೊಳ್ಳುವ ಅಧಿಕಾರಿ ಅಥವಾ ಸಿಬ್ಬಂದಿ ಯಾರೇ ಆಗಿದ್ದರೂ ಅವರ ವಿರುದ್ಧ ಮುಲಾಜಿಲ್ಲದೆ ಕಠಿಣ ಶಿಸ್ತುಕ್ರಮ ಜರುಗಿಸಿ ಅಮಾನತು ಮಾಡಲು ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು

,” ಎಂದು ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಸ್.ಎನ್. ಚನ್ನಬಸಪ್ಪ (ಚೆನ್ನಿ) ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ನಗರದ ವಿವಿಧ ಬಡಾವಣೆಗಳಲ್ಲಿ ಕುಡಿಯುವ ನೀರು ಸರಬರಾಜಿನಲ್ಲಿ ಪದೇ ಪದೇ

ತೊಂದರೆಯಾಗುತ್ತಿರುವ ಬಗ್ಗೆ ಹಾಗೂ ದೂರು ನೀಡಲು ಹೋದಾಗ ಅಧಿಕಾರಿಗಳು ದುರಹಂಕಾರದ ಉತ್ತರ ನೀಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ, ಶಾಸಕರು ಇಂದು

ನೀರು ಸರಬರಾಜು ಮಂಡಳಿ (ಜಲಮಂಡಳಿ) ಹಾಗೂ ಮಹಾನಗರ ಪಾಲಿಕೆಯ ಅಧಿಕಾರಿಗಳ ತುರ್ತು ಸಭೆ ಕರೆದು ತೀವ್ರ ತರಾಟೆಗೆ ತೆಗೆದುಕೊಂಡರು.
ಸಭೆಯಲ್ಲಿ ಮಾತನಾಡಿದ ಶಾಸಕರು, “ಸಾರ್ವಜನಿಕರ ಸಮಸ್ಯೆಗಳನ್ನು ಸೌಜನ್ಯದಿಂದ ಆಲಿಸಿ ತಕ್ಷಣವೇ ಪರಿಹರಿಸುವುದು ಅಧಿಕಾರಿಗಳ ಕರ್ತವ್ಯ. ಜನಸಾಮಾನ್ಯರ ಮೇಲೆ ದರ್ಪ ತೋರುವುದನ್ನು ಯಾವುದೇ ಕಾರಣಕ್ಕೂ

ಸಹಿಸುವುದಿಲ್ಲ,” ಎಂದರು. ಇದೇ ವೇಳೆ 24/7 ಕುಡಿಯುವ ನೀರಿನ ಕಾಮಗಾರಿ ವಿಳಂಬಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಅವರು, ನಿಗದಿತ ಅವಧಿಯೊಳಗೆ ಕಾಮಗಾರಿ ಮುಗಿಸಿ ನಾಗರಿಕರಿಗೆ ಸುಗಮವಾಗಿ ಕುಡಿಯುವ ನೀರು ಒದಗಿಸಬೇಕು ಹಾಗೂ ತೊಂದರೆಯಾದ ಪ್ರದೇಶಗಳಿಗೆ ತಕ್ಷಣ ಟ್ಯಾಂಕರ್ ಮೂಲಕ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದು ಆದೇಶಿಸಿದರು.
ಕರ್ತವ್ಯಲೋಪ ಕಂಡುಬಂದಲ್ಲಿ ಕ್ರಮ ಖಚಿತ ಎಂದು ಅವರು ಎಚ್ಚರಿಸಿದರು. ಸಭೆಯಲ್ಲಿ ಜಲಮಂಡಳಿ ಮತ್ತು ಪಾಲಿಕೆಯ ಅಧಿಕಾರಿಗಳು ಭಾಗವಹಿಸಿದ್ದರು.