ಆನಂದಪುರ: ತಾಲೂಕಿನ ಗೌತಮಪುರ ಗ್ರಾಮದಲ್ಲಿ ಅಕ್ರಮವಾಗಿ ಗಾಂಜಾ ಬೆಳೆದಿರುವ ಬಗ್ಗೆ ಖಚಿತ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಸಾಗರ ವೃತ್ತ ಪೊಲೀಸ್ ನಿರೀಕ್ಷಕ ಸಂತೋಷ್ ಶೆಟ್ಟಿ ಮಾರ್ಗದರ್ಶನದಲ್ಲಿ, ಆನಂದಪುರ ಪೊಲೀಸ್ ಠಾಣೆಯ ಪಿಎಸ್ಐ ಪ್ರವೀಣ್ ಅವರ ನೇತೃತ್ವದಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿದ ಪೊಲೀಸರು ₹2.10 ಲಕ್ಷ ಮೌಲ್ಯದ 16.4 ಕೆ.ಜಿ. ಹಸಿ ಗಾಂಜಾ ಗಿಡಗಳನ್ನು ವಶಪಡಿಸಿಕೊಂಡಿದ್ದಾರೆ.

ಮಾಹಿತಿ ದೊರೆತ ತಕ್ಷಣ ಕಾರ್ಯಪ್ರವೃತ್ತರಾದ ಪಿಎಸ್ಐ ಪ್ರವೀಣ್, ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ತೆರಳಿ ಕಾರ್ಯಾಚರಣೆಗೆ ಮುಂದಾಗಿದ್ದಾರೆ. ಆಗಸ್ಟ್ 14ರಂದು ಸಂಜೆ 6 ಗಂಟೆಗೆ ಗೌತಮಪುರ ಗ್ರಾಮದ ತೋಟದ ಮೇಲೆ ದಾಳಿ ನಡೆಸಲಾಗಿದ್ದು, ಅಕ್ರಮವಾಗಿ ಬೆಳೆದಿದ್ದ ಗಾಂಜಾ ಗಿಡಗಳು ಪತ್ತೆಯಾಗಿವೆ.

ಪಿಎಸ್ಐ ಪ್ರವೀಣ್ ಅವರ ನೇರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ 1ನೇ ಆರೋಪಿ ಬಸವರಾಜನನ್ನು ವಶಕ್ಕೆ ಪಡೆಯಲಾಗಿದ್ದು, ಮಾರಾಟ ಮಾಡುವ ಉದ್ದೇಶದಿಂದ ಬೆಳೆದಿದ್ದ ಎಲೆ, ಹೂವು, ಮೊಗ್ಗು ಹಾಗೂ ಕಾಂಡಗಳನ್ನೊಳಗೊಂಡ ಒಟ್ಟು 16,400 ಗ್ರಾಂ (16.4 ಕೆ.ಜಿ.) ಹಸಿ ಗಾಂಜಾವನ್ನು ಜಪ್ತಿ ಮಾಡಿದ್ದು ಇದರ ಅಂದಾಜು ಮೌಲ್ಯ ₹2,10,000 ಎಂದು ತಿಳಿದು ಬಂದಿದೆ.

ಪ್ರಕರಣದಲ್ಲಿ ಗೌತಮಪುರ ಗ್ರಾಮದ ಬಸವರಾಜ (45), ತಂದೆ ಸಣ್ಣಪ್ಪ, ಕೃಷಿಕ ಹಾಗೂ ಕುಮಾರ (47), ತಂದೆ ಮಂಜಪ್ಪ, ಕೃಷಿಕ ಅವರನ್ನು ಆರೋಪಿಗಳೆಂದು ದಾಖಲಿಸಲಾಗಿದೆ.

ಆರೋಪಿ ಬಸವರಾಜನನ್ನು ಬಂಧಿಸಲಾಗಿದ್ದು, ಮತ್ತೋರ್ವ ಆರೋಪಿ ಕುಮಾರ ತಲೆಮರೆಸಿಕೊಂಡಿದ್ದಾನೆ. ಆತನ ಪತ್ತೆಗಾಗಿ ಪಿಎಸ್ಐ ಪ್ರವೀಣ್ ಅವರ ನೇತೃತ್ವದಲ್ಲಿ ಪೊಲೀಸರು ಕಾರ್ಯಾಚರಣೆ ಮುಂದುವರಿಸಿದ್ದಾರೆ.

ಅಕ್ರಮ ಗಾಂಜಾ ಬೆಳೆ ಹಾಗೂ ಮಾದಕ ವಸ್ತುಗಳ ವಿರುದ್ಧ ಪಿಎಸ್ಐ ಪ್ರವೀಣ್ ಅವರು ಕೈಗೊಂಡಿರುವ ನಿರಂತರ ಕಾರ್ಯಾಚರಣೆಯಲ್ಲಿ ಮತ್ತೊಂದು ಮಹತ್ವದ ಯಶಸ್ಸು ಸಾಧಿಸಲಾಗಿದೆ. ಗೌತಮಪುರದಲ್ಲಿ ಅಕ್ರಮ ಗಾಂಜಾ ಬೆಳೆ ಪತ್ತೆಹಚ್ಚಿ, ಭಾರೀ ಪ್ರಮಾಣದ ಗಾಂಜಾ ವಶಪಡಿಸಿಕೊಳ್ಳುವಲ್ಲಿ ಪ್ರವೀಣ್ ನೇತೃತ್ವದ ಪೊಲೀಸ್ ತಂಡ ಯಶಸ್ವಿಯಾಗಿದೆ.

ಈ ಕಾರ್ಯಾಚರಣೆಗೆ ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಹಾಗೂ ಸಾಗರ ಸಹಾಯಕ ಪೊಲೀಸ್ ಅಧೀಕ್ಷಕ ಬೆನಕ ಪ್ರಸಾದ್ ಅವರು ಅಭಿನಂದನೆ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.

ಕಾರ್ಯಾಚರಣೆಯಲ್ಲಿ ಎ ಎಸ್ ಐ ಹಾಲಪ್ಪ, ಸಿಬ್ಬಂದಿಗಳಾದ ಪರಶುರಾಮ್, ಪ್ರಶಾಂತ್, ನಿರಂಜನ್, ನೂತನ್, ಸತೀಶ್, ಸುನಿಲ್, ಗಿರೀಶ್ ಬಾಬು ಇನ್ನಿತರರು ಪಾಲ್ಗೊಂಡಿದ್ದರು.
ಈ ಕುರಿತು ಆನಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.