ಶಿವಮೊಗ್ಗ,ಆ.೧೫:
ದೈಹಿಕವಾಗಿ,ಮಾನಸಿಕವಾಗಿ ಸದೃಢವಾಗಲು ಕ್ರೀಡೆ ಬಹಳ ಮುಖ್ಯ ಎಂದು ಶ್ರೀ ಆದಿಚುಂಚನಗಿರಿ ಶಾಖಾ ಮಠದ ಪೂಜ್ಯ ಶ್ರೀ ಶ್ರೀ ನಾದಮಯಾನಂದನಾಥ ಸ್ವಾಮೀಜಿ ಅವರು ಕ್ರೀಡಾಪಟುಗಳಿಗೆ ಸಲಹೆ ನೀಡಿದರು.

ಅವರು ನಿನ್ನೆ ಸಂಜೆ ನೆಹರೂ ಕ್ರೀಡಾಂಗಣದಲ್ಲಿ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಶಿವಮೊಗ್ಗ ಶಾಖೆ ಹಾಗೂ ಜಿಲ್ಲಾ ವಾಲಿಬಾಲ್ ಸಂಸ್ಥೆ ಶಿವಮೊಗ್ಗ .ಇವರ ಸಂಯುಕ್ತ ಆಶ್ರಯದಲ್ಲಿ ನಡೆಸಲಾದ ಚುಂಚಾದ್ರಿ ಕಪ್ ಸಮಾರೋಪ ಸಮಾರಂಭದಲ್ಲಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡುತ್ತಾ

ಆಟದಲ್ಲಿ ಸೋಲು ಗೆಲುವು ಸರ್ವೇ ಸಾಮಾನ್ಯ ಆದರೆ ಭಾಗವಹಿಸುವಿಕೆ ಅತ್ಯಂತ ಮುಖ್ಯವಾಗಿರುತ್ತದೆ ಎಂದ ಅವರು, ಕ್ರೀಡೆಯಲ್ಲಿ ತಮ್ಮ ದೈಹಿಕ ಹಾಗೂ ಮಾನಸಿಕ ಸಾಮರ್ಥ್ಯವನ್ನು ಪರೀಕ್ಷಿಸಿಕೊಳ್ಳಬಹುದಾಗಿದೆ. ಅಲ್ಲದೇ ಕ್ರೀಡೆ ಶಿಸ್ತನ್ನು, ನಾಯಕತ್ವದ ಗುಣವನ್ನು ಕಲಿಸುತ್ತದೆ ಎಂದು ಹೇಳಿದರು.
ಶ್ರೀ ರಾಜಯೋಗಾನಂದನಾಥ ಸ್ವಾಮೀಜಿ, ಶ್ರೀ ಸಂವಿಧಾನಂದನಾಥ ಸ್ವಾಮೀಜಿ ಯವರು ದಿವ್ಯ ಸಾನಿಧ್ಯ ವಹಿಸಿದ್ದರು.
ಮಾಜಿ ಸಂಸದರಾದ ಆಯನೂರು ಮಂಜುನಾಥ್ ಮಾತನಾಡಿ, ಭಾರತ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಸಾಧನೆ ಮಾಡಿದ ಸಾಧಕರನ್ನು ಸ್ಫೂರ್ತಿಯಾಗಿ ತೆಗೆದುಕೊಂಡು, ಅವರಂತೆ ತಾವು ಸಹ ಚಿಕ್ಕ ವಯಸ್ಸಿನಿಂದಲೇ ತರಬೇತಿಯನ್ನು ಪಡೆದು ಕ್ರೀಡೆಯಲ್ಲಿ ಭಾಗವಹಿಸಿ,ತಾವು ಉತ್ತಮ ಮಾಡಿದರೆ ತಮ್ಮಗಳನ್ನ ದೇಶ ಗೌರವಿಸುತ್ತದೆ ಎಂದರು.

ಕ್ರೀಡಾಪಟುಗಳಲ್ಲಿ ಅತ್ಯಂತ ಸಾಮರಸ್ಯವಿರುತ್ತದೆ ಇದು ಕ್ರೀಡಾ ಕ್ಷೇತ್ರದ ಗುಟ್ಟಾಗಿದೆ ಎಂದ ಅವರು, ಕ್ರೀಡೆ ತಮ್ಮ ಮಾನಸಿಕ ಬುದ್ದಿಮಟ್ಟವನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ ಹಾಗಾಗಿ ಪ್ರತಿಯೊಬ್ಬ ವಿದ್ಯಾರ್ಥಿಯೂ ಕೂಡ ಶೈಕ್ಷಣಿಕ ಚಟುವಟಿಕೆಯ ಜೊತೆಗೆ ಕ್ರೀಡಾ ಚಟುವಟಿಕೆಗಳಲ್ಲೂ ಕೂಡ ಕಡ್ಡಾಯವಾಗಿ ಪಾಲ್ಗೊಳ್ಳಬೇಕು ಎಂದರು.
ಡಿಎಆರ್,ಡಿವೈಎಸ್ ಪಿ. ದಿಲೀಪ್ ಮಾತನಾಡುತ್ತ, ಚುಂಚಾದ್ರಿ ಕಪ್ ಪಂದ್ಯಾವಳಿ ಶಿವಮೊಗ್ಗ ಜಿಲ್ಲೆಯಲ್ಲಿಯೇ ಕ್ರೀಡಾ ಹಬ್ಬ ಎಂದರೆ ತಪ್ಪಾಗಲಿಕ್ಕಿಲ್ಲ. ಕ್ರೀಡೆಯಿಂದ ವ್ಯಕ್ತಿತ್ವ ವಿಕಸನಕ್ಕೆ ಬಹಳ ಮುಖ್ಯ ಎಂದರು.

ಕಾರ್ಯಕ್ರಮದಲ್ಲಿ ವಾಲಿಬಾಲ್ ಸಂಸ್ಥೆಯ ಆಧ್ಯಕ್ಷ ಭಾಸ್ಕರ್ ಜಿ. ಕಾಮತ್,ಸಂಸ್ಥೆ ನಿರ್ದೇಶಕರುಗಳಾದ ಕೊಳಿಗೆ ವಾಸಪ್ಪಗೌಡ, ರವೀಶ್, ಕುಮಾರ ಸ್ವಾಮಿ, ಇನ್ನೂ ಮುಂತಾದವರು ಉಪಸ್ಥಿತರಿದ್ದರು.

ನಗರದ ಮಕ್ಕಳಿಗಾಗಿ ಆರಂಭಗೊಂಡ ಚುಂಚಾದ್ರಿ ಕಪ್ ವಾಲಿ ಬಾಲ್ ಪಂದ್ಯಾವಳಿ,ಇಂದು ಜಿಲ್ಲೆಯ ಗ್ರಾಮಾಂತರ ಭಾಗದ ಮಕ್ಕಳಿಗೆ ಉತ್ತೇಜನ ನೀಡುತ್ತಾ ಬಂದಿದ್ದು,೨೪ ವರ್ಷದಿಂದ ನಿರಂತರವಾಗಿ ಪೂಜ್ಯರ ನೇತೃತ್ವದಲ್ಲಿ ಯಶಸ್ವಿಯಾಗಿ ನಡೆಯುತ್ತಾ ಇದೆ. ಈ ಪಂದ್ಯಾವಳಿಯಲ್ಲಿ ಭಾಗವಹಿಸಿದ ಅನೇಕ ಕ್ರೀಡಾಪಟುಗಳು ರಾಷ್ಟ್ರ, ಅಂತರಾಷ್ಟ್ರ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಿ,ವಿವಿಧ ಇಲಾಖೆಗಳಲ್ಲಿ ಉನ್ನತ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿರುವುದು ಮೂಲ ಸಾಕ್ಷಿ. ಇದಕ್ಕೆ ಪೂಜ್ಯ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರ ಸಹಕಾರದಿಂದ ಇನ್ನೂ ಮುಂದಿನ ದಿನಗಳಲ್ಲಿ ರಾಜ್ಯ ಮಟ್ಟದಲ್ಲಿ ಆಯೋಜನೆ ಮಾಡುವಂತೆ ಪೂಜ್ಯರಲ್ಲಿ ವಿನಂತಿಡುತ್ತೇನೆ.
— ಕೆ. ಎಸ್. ಶಶಿ ಕಾರ್ಯದರ್ಶಿ,
ಜಿಲ್ಲಾ ವಾಲಿಬಾಲ್ ಸಂಸ್ಥೆ, ಶಿವಮೊಗ್ಗ.
:
ಬಾಲಕ ಮತ್ತು ಬಾಲಕಿಯರ ಪ್ರಥಮ ಮತ್ತು ದ್ವಿತೀಯ ಸ್ಥಾನದ ವಿವರ :
ಬಾಲಕರ ವಿಭಾಗ : ಶ್ರೀ ಆದಿಚುಂಚನರಿ ಸಂಯುಕ್ತ ಆಂಗ್ಲ ಪ್ರೌಢ ಶಾಲೆ, ಶಿವಮೊಗ್ಗ ಹಾಗೂ ಸೆಂಟ್ ಜೋಸೆಫ್ ಪ್ರೌಢಶಾಲೆ ಸಾಗರ.ಈ ಎರಡು ತಂಡಗಳ ಮಧ್ಯೆ ಅಂತಿಮ ಪಂದ್ಯದಲ್ಲಿ ಉತ್ತಮ ಆಟದ ಪ್ರದರ್ಶನ ಕಂಡು ಬಂದಿತು. ದಾಳಿ ಮತ್ತು ಅಷ್ಟೇ ರಕ್ಷಣಾತ್ಮಕ ಆಟವನ್ನು ಕಾಣಬಹುದಾಗಿತ್ತು. ಮೊದಲನೇ ಸೆಟ್ಟಿನಲ್ಲಿ ಸೆಂಟ್ ಜೋಸೆಫ್ ಪ್ರೌಢ ಶಾಲೆ ೧೯ ಅಂಕ ಪಡೆದರೆ,
ಶ್ರೀ ಆದಿಚುಂಚನರಿ ಸಂಯುಕ್ತ ಆಂಗ್ಲ ಪ್ರೌಢ ಶಾಲೆ ತಂಡ ೨೫ ಅಂಕ ಪಡೆದು ಮೊದಲ ಸೆಟ್ ತನ್ನದಾಗಿಸಿಕೊಂಡಿತು, ಎರಡನೇ ಸೆಟ್ ನಲ್ಲಿ ರೋಚಕ ಆಟದ ಪ್ರದರ್ಶನ ನೀಡಿ ೨೫ ಅಂಕಗಳನ್ನು ಪಡೆದು ಎರಡನೇ ಸುತ್ತನ್ನು ತನ್ನದಾಗಿಸಿಕೊಂಡ ಆದಿಚುಂಚನರಿ ಪ್ರೌಢಶಾಲೆ, ೨೦೨೬ರ ಚುಂಚಾದ್ರಿ ಕಪ್ ವಾಲಿಬಾಲ್ ಟ್ರೋಪಿಯನ್ನು ತನ್ನ ಮುಡಿಗೇರಿಸಿಕೊಂಡಿತು.
ಸೆಂಟ್ ಜೋಸೆಫ್ ಪ್ರೌಢ ಶಾಲೆ ಬಾಲಕರ ತಂಡವು ರೋಚಕ ಆಟದ ಪ್ರದರ್ಶನ ನೀಡಿ ಎರಡನೇ ಸೆಟ್ ನಲ್ಲಿ ೨೦ ಅಂಕ ಪಡೆದು ದ್ವಿತೀಯ ಸ್ಥಾನವನ್ನು ಪಡೆದುಕೊಂಡಿತು. ಸರ್ಕಾರಿ ಪ್ರೌಢಶಾಲೆ, ಹೊಸ ನಗರ ಬಾಲಕರ ತಂಡ ಮೂರನೇ ಸ್ಥಾನ ಪಡೆಯಿತು.
ಬಾಲಕಿಯರ ವಿಭಾಗ : ಶ್ರೀ ಆದಿಚುಂಚನಗಿರಿ ಸಂಯುಕ್ತ ಪ್ರೌಢ ಶಾಲೆ, ಶಿವಮೊಗ್ಗ.ಹಾಗೂ ಸರ್ಕಾರಿ ಗುಡ್ಡೇ ಕೊಪ್ಪ ತೀರ್ಥಹಳ್ಳಿ,ಈ ಎರಡು ತಂಡಗಳ ಮಧ್ಯೆ ರೋಚಕ ಪಂದ್ಯ ನಡೆಯಿತು.ಶ್ರೀ ಆದಿಚುಂಚನಗಿರಿ ಸಂಯುಕ್ತ ಪ್ರೌಢ ಶಾಲೆ ಮೊದಲ ಸೆಟ್ ೨೫ಅಂಕ ಪಡೆದರೆ, ಸರ್ಕಾರಿ ಪ್ರಾಢಶಾಲೆ ಗುಡ್ಡೇ ಕೊಪ್ಪ ೧೮ ಅಂಕದೊಂದಿಗೆ ಪರಾಭವಗೊಂಡಿತು. ೨ನೇ ಸೆಟ್ಟಿನಲ್ಲಿಯೂ ಸಹ ಶ್ರೀ ಆದಿಚುಂಚನಗಿರಿ ಪ್ರೌಢಶಾಲೆ ಮತ್ತು ಸರ್ಕಾರಿ ಪ್ರೌಢಶಾಲೆ ಗುಡ್ಡೇ ಕೊಪ್ಪ ಬಾಲಕಿಯರು ಅತ್ಯಾಕರ್ಷಕ, ಮನಮೋಹಕ ಆಟದ ಪ್ರದರ್ಶನ ನೀಡಿದರು ಕೂಡ ಕೊನೆಯಲ್ಲಿ ನೇರ ಎರಡು ಸೆಟ್ ಗಳ ಅಂತರದಲ್ಲಿ ವಿಜಯಮಾಲೆ ಶ್ರೀ ಆದಿಚುಂಚನಗಿರಿ ಸಂಯುಕ್ತ ಪ್ರೌಢಶಾಲೆಗೆ ದಕ್ಕಿತು.
ಸಹ್ಯಾದ್ರಿ ಪ್ರೌಢ ಶಾಲೆ, ತೀರ್ಥ ಹಳ್ಳಿ ಬಾಲಕಿಯರು ಮೂರನೇ ಸ್ಥಾನ ಪಡೆದರೇ, ಅಕ್ಷರ ಪ್ರೌಢಶಾಲೆ, ಶಿವಮೊಗ್ಗ ಬಾಲಕಿಯರು ನಾಲ್ಕನೇ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು.
ಬಾಲಕರ ವಿಭಾಗದಲ್ಲಿ ವೈಯುಕ್ತಿಕ ಬಹುಮಾನ : ಬೆಸ್ಟ್ ಅಟ್ಯಾಕರ್- ಯುವ, ಆದಿಚುಂಚನಗಿರಿ ಪ್ರೌಢಶಾಲೆ, ಬೆಸ್ಟ್ ಸೆಟ್ಟರ್ – ತೇಜು, ಆದಿಚುಂಚನಗಿರಿ ಪ್ರೌಢಶಾಲೆ , ಬೆಸ್ಟ್ ಆಲ್ ರೌಂಡರ್ -ಗಗನ್,ಸರ್ಕಾರಿ ಪ್ರೌಢಶಾಲೆ,ಹೊಸನಗರ, ಬೆಸ್ಟ್ ಬೂಸ್ಟರ್ – ಆರ್ಯ ಎನ್. ಸೆಂಟ್ ಜೋಸೆಫ್ ಪ್ರೌಢ ಶಾಲೆ, ಸಾಗರ. ಬೆಸ್ಟ್ ಲೀಬ್ರೋ-ಹಾಸಮ್,ಸೆಂಟ್ ಜೋಸೆಫ್ ಪ್ರೌಢ ಶಾಲೆ, ಸಾಗರ.
ಬಾಲಕಿಯರ ವಿಭಾಗ : ಬೆಸ್ಟ್ ಅಟ್ಯಾಕರ್ -ಸಂಕಲ್ಪ ಆದಿಚುಂಚನಗಿರಿ ಶಾಲೆ, ಬೆಸ್ಟ್ ಆಲ್ ರೌಂಡರ್ – ಪ್ರಗತಿ ಎಂ. ಎಸ್.ಸುರ್ಕಾರಿ ಪ್ರೌಢಶಾಲೆ ಗುಡ್ಡೇ ಕೊಪ್ಪ, ಬೆಸ್ಟ್ ಸೆಟ್ಟರ್ – ದೀಪಾ ವಿ., ಆದಿಚುಂಚನಗಿರಿ ಶಾಲೆ, ಬೆಸ್ಟ್ ಬೂಸ್ಟರ್ – ಜೀವಿಕ, ಅಕ್ಷರ ಪ್ರೌಢ ಶಾಲೆ, ಶಿವಮೊಗ್ಗ. ಬೆಸ್ಟ್ ಲೀಬ್ರೋ – ಮಾನ್ಯ , ಸಹ್ಯಾದ್ರಿ ಪ್ರೌಢಶಾಲೆ ತೀರ್ಥ ಹಳ್ಳಿ,ಇವರುಗಳು ವಯುಕ್ತಿಕ ಬಹುಮಾನಗಳನ್ನು ಪಡೆದ ಪ್ರತಿಭಾನ್ವಿತರಾಗಿರುತ್ತಾರೆ.
ವಿಜೇತ ತಂಡಗಳಿಗೆ ಅತ್ಯಾಕರ್ಷಕ ಪಾರಿತೋಷಕ, ವಯುಕ್ತಿಕ ಬಹುಮಾನ ಮತ್ತು ಪ್ರಶಸ್ತಿ ಪತ್ರಗಳನ್ನು ಕ್ರೀಡಪಟುಗಳಿಗೆ ನೀಡಿ ಗೌರವಿಸಲಾಯಿತು.
ಪ್ರತಿ ವರ್ಷದಂತೆ ಈ ವರ್ಷವೂ ಸಹ ಕ್ರೀಡಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ದೈಹಿಕ ಶಿಕ್ಷಣ ಶಿಕ್ಷಕರಿಗೆ ಪೂಜ್ಯರಿಂದ ಗೌರವಿಸಲಾಯಿತು.