ಶಿವಮೊಗ್ಗ: ಸ್ವದೇಶಿ ಉತ್ಪನ್ನಗಳಿಗೆ ಆದ್ಯತೆ, ಸ್ವರಾಜ್ಯದ ಜವಾಬ್ದಾರಿ ಮತ್ತು ಸ್ವಾವಲಂಬನೆಯ ಮನೋಭಾವ ಬೆಳೆಸಿಕೊಂಡು ಯುವಜನತೆ ದೇಶದ ಆರ್ಥಿಕತೆ ಹಾಗೂ ರಾಷ್ಟ್ರ ನಿರ್ಮಾಣಕ್ಕೆ ಕೈಜೋಡಿಸಲಿ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ಎನ್.ನಾಗರಾಜ ಹೇಳಿದರು.

ನಗರದ ರಾಷ್ಟ್ರೀಯ ಶಿಕ್ಷಣ ಸಮಿತಿಯ ವತಿಯಿಂದ ಶನಿವಾರ ಆಡಳಿತ ಕಛೇರಿಯ ಆವರಣದಲ್ಲಿ ಏರ್ಪಡಿಸಿದ್ದ 80 ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರ ತ್ಯಾಗ, ಬಲಿದಾನ ಮತ್ತು ಆದರ್ಶಗಳನ್ನು ನೆನಪಿಸಿಕೊಳ್ಳುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ. ಸ್ವಾತಂತ್ರ್ಯಾನಂತರದ ಪೀಳಿಗೆಯಾದ ನಮಗೆ, ದಾಸ್ಯದ ದಿನಗಳ ನೋವು ಮತ್ತು ಸಂಕಷ್ಟಗಳ ನೇರ ಅನುಭವ ಇಲ್ಲ. ಆದ್ದರಿಂದ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರನ್ನು ಮರೆತರೆ ಅದು ಇತಿಹಾಸಕ್ಕೆ ಮಾಡುವ ದೊಡ್ಡ ಅಪಚಾರವಾಗುತ್ತದೆ.

ಸತ್ಯ ಮತ್ತು ಅಹಿಂಸೆಯ ಮಾರ್ಗದಲ್ಲಿ ಮಹಾತ್ಮ ಗಾಂಧೀಜಿ ಅವರ ನೇತೃತ್ವದಲ್ಲಿ ನಡೆದ ಹೋರಾಟದ ಫಲವಾಗಿ ದೇಶ ಸ್ವಾತಂತ್ರ್ಯವನ್ನು ಪಡೆಯಿತು. ಗಾಂಧೀಜಿ ನಂಬಿದ ಮೌಲ್ಯಗಳ ಬಗ್ಗೆ ಹೊಂದಿದ್ದ ಅಚಲ ಬದ್ಧತೆಯೇ ಅವರನ್ನು ‘ಮಹಾತ್ಮ’ರನ್ನಾಗಿ ಮಾಡಿತು. ಇಂದು ಅವರ ಸ್ವದೇಶಿ, ಸ್ವರಾಜ್ಯ, ಸ್ವಾವಲಂಬನೆ ಹಾಗೂ ಮೌಲ್ಯಾಧಾರಿತ ಬದುಕಿನ ಪರಿಕಲ್ಪನೆಗಳನ್ನು ಮತ್ತೊಮ್ಮೆ ಮೆಲುಕು ಹಾಕುವ ಅಗತ್ಯವಿದೆ ಎಂದರು.

ಸ್ವದೇಶಿ ಎಂದರೆ ಕೇವಲ ವಿದೇಶಿ ವಸ್ತುಗಳನ್ನು ಬಹಿಷ್ಕರಿಸುವುದಲ್ಲ. ನಮ್ಮ ನೆಲ, ಜಲ ಮತ್ತು ಜನರಿಗೆ ಅಗತ್ಯವಿರುವುದನ್ನು ಉತ್ಪಾದಿಸಿ, ಅನಗತ್ಯ ಉತ್ಪಾದನೆಯ ಮೂಲಕ ನೈಸರ್ಗಿಕ ಸಂಪನ್ಮೂಲಗಳನ್ನು ಹಾಳು ಮಾಡಬಾರದು ಎಂಬ ವಿಶಾಲ ಚಿಂತನೆ ಗಾಂಧೀಜಿಯವರದ್ದಾಗಿತ್ತು. ಇತರ ರಾಷ್ಟ್ರಗಳೊಂದಿಗೆ ವ್ಯಾಪಾರ ನಡೆಸಿದರೂ, ಅವರ ಮೇಲೆ ಸಂಪೂರ್ಣ ಅವಲಂಬಿತರಾಗಬಾರದು. ಸ್ವಾವಲಂಬನೆ ಇಲ್ಲದ ಸಮಾಜವನ್ನು ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ಅವರು ಎಚ್ಚರಿಸಿದ್ದರು.
ಗಾಂಧೀಜಿ ಗ್ರಾಮೀಣ ಭಾರತದ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಿದ್ದರು. ಮಾನವ ಸಂಪನ್ಮೂಲವನ್ನು ಕಡೆಗಣಿಸಿ, ಕೇವಲ ಯಂತ್ರಗಳು ಮತ್ತು ತಂತ್ರಜ್ಞಾನಗಳ ಮೇಲೆ ಅವಲಂಬಿತರಾಗುವುದನ್ನು ಅವರು ವಿರೋಧಿಸಿದ್ದರು. ಮಾನವ ಶ್ರಮ ಮತ್ತು ಕೌಶಲ್ಯವನ್ನು ಸದ್ಬಳಕೆ ಮಾಡಿಕೊಂಡು ಸಮೂಹದ ಮೂಲಕ ಉತ್ಪಾದನೆ ನಡೆಯಬೇಕು ಎಂಬುದು ಅವರ ಆರ್ಥಿಕ ಚಿಂತನೆಯ ಪ್ರಮುಖ ಆಶಯವಾಗಿತ್ತು.

ಶಿಕ್ಷಣ ಕ್ಷೇತ್ರದಲ್ಲಿಯೂ ಗಾಂಧೀಜಿ ವಿಶಿಷ್ಟ ದೃಷ್ಟಿಕೋನ ಹೊಂದಿದ್ದರು. ಮಕ್ಕಳು ಸಂತೋಷದಿಂದ ಕಲಿಯಬೇಕು. ವಿದ್ಯಾಭ್ಯಾಸದ ಜೊತೆಗೆ ಅವರ ಕುಲಕಸುವುಗಳನ್ನು 16 ನೇ ವಯಸ್ಸಿನವರೆಗೆ ಕಲಿಸಬೇಕು. ತಮ್ಮ ಜೀವನೋಪಾಯಕ್ಕೆ ಅಗತ್ಯವಾದ ವೃತ್ತಿ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂಬ ಉದ್ದೇಶದಿಂದ ಮೂಲ ಶಿಕ್ಷಣ ವ್ಯವಸ್ಥೆಗೆ ಒತ್ತು ನೀಡಿದರು. ಶಿಕ್ಷಣವು ಕೇವಲ ಪುಸ್ತಕದ ಜ್ಞಾನವಾಗದೆ, ಬದುಕನ್ನು ಕಟ್ಟಿಕೊಡುವ ಪ್ರಾಯೋಗಿಕ ಜ್ಞಾನವಾಗಬೇಕು ಎಂಬುದು ಅವರ ಆಶಯವಾಗಿತ್ತು.
ಇಂದು ಅಗತ್ಯಕ್ಕೆ ತಕ್ಕಂತೆ ಬದುಕುವ ಬದಲು, ಅತಿಯಾದ ಅವಲಂಬನೆ ಮತ್ತು ಬಳಕೆಯ ಸಂಸ್ಕೃತಿಗೆ ಒಳಗಾಗಿರುವ ಪರಿಣಾಮ ಆರ್ಥಿಕ ಹಾಗೂ ಸಾಮಾಜಿಕ ಸಮಸ್ಯೆಗಳು ಎದುರಾಗುತ್ತಿವೆ. ಮಹಿಳೆಯರ ಸುರಕ್ಷತೆಯಂತಹ ಗಂಭೀರ ಸವಾಲುಗಳೂ ಸಮಾಜದ ಮುಂದಿವೆ. ಇವೆಲ್ಲವೂ ಮೌಲ್ಯಾಧಾರಿತ ಬದುಕಿನಿಂದ ನಾವು ದೂರ ಸರಿದಿರುವುದನ್ನು ಸೂಚಿಸುತ್ತವೆ.

ಯುವಶಕ್ತಿ ರಾಷ್ಟ್ರ ನಿರ್ಮಾಣದ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ಈ ಬದಲಾವಣೆ ಕೇವಲ ಕಾನೂನುಗಳಿಂದ ಸಾಧ್ಯವಿಲ್ಲ. ಮೌಲ್ಯಾಧಾರಿತ ಶಿಕ್ಷಣ, ಸ್ವಾವಲಂಬನೆಯ ಚಿಂತನೆ ಮತ್ತು ಗಾಂಧೀಜಿಯವರ ಆದರ್ಶಗಳ ಅನುಷ್ಠಾನದಿಂದ ಮಾತ್ರ ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಎನ್ಇಎಸ್ ಖಜಾಂಚಿ ಡಿ.ಜಿ.ರಮೇಶ್ ಧ್ವಜಾರೋಹಣಗೊಳಿಸಿದರು. ನಿರ್ದೇಶಕರಾದ ಎಚ್.ಸಿ.ಶಿವಕುಮಾರ್, ಮಧುರಾವ್, ಆಜೀವ ಸದಸ್ಯರಾದ ರುಕ್ಮಿಣಿ ವೇದವ್ಯಾಸ, ಜಗದೀಶ್, ಮಲ್ಲಪ್ಪ, ರಾಮಪ್ರಸಾದ್, ಆನಂದ್, ಶೈಕ್ಷಣಿಕ ಆಡಳಿತಾಧಿಕಾರಿ ಎ.ಎನ್.ರಾಮಚಂದ್ರ ಉಪಸ್ಥಿತರಿದ್ದರು. ಸಾರ್ವಜನಿಕ ಸಂಪರ್ಕಾಧಿಕಾರಿ ಸಿ.ಎಂ.ನೃಪತುಂಗ ನಿರೂಪಿಸಿದರು. ಎಸ್.ಆರ್.ಎನ್.ಎಂ ಕಾಲೇಜಿನ ಸಿಬ್ಬಂದಿ ವರ್ಗ ದೇಶ ಭಕ್ತಿ ಗೀತೆ ಹಾಗೂ ಹಿರಿಯ ವಿದ್ಯಾರ್ಥಿಗಳಾದ ಮೇದಿನಿ ಮತ್ತು ಸುನೇತ್ರ ವಂದೇ ಮಾತರಂ ಗೀತೆ ಹಾಡಿದರು.