
ಶಿವಮೊಗ್ಗದ ಬಹುಮುಖಿ ವೇದಿಕೆಯಿಂದ ಆಯೋಜನೆಗೊಂಡ ಫ್ರೆಂಡ್ಸ್ ಸೆಂಟರ್ ಸಭಾಂಗಣದಲ್ಲಿ ನಡೆದ ಕತ್ತಲ ಹಾಡು ಕಾರ್ಯಕ್ರಮ ಕೇವಲ ಹಾಡುಗಳ ಕಾರ್ಯಕ್ರಮವಾಗಿ ಉಳಿಯಲಿಲ್ಲ. ನಾದಮಣಿನಾಲ್ಕೂರು ಅವರ ಗಾಯನ ಮತ್ತು ನಡು ನಡುವಿನ ಒಂದಿಷ್ಟು ಅರಿವಿನ ಮಾತುಗಳು ಕತ್ತಲನ್ನು ನೋಡುವ ದೃಷ್ಟಿಯನ್ನೇ ಬದಲಾಗುವಂತಹ ಒಂದು ಆಂತರಿಕ ಅನುಭವವಾಗಿ ರೂಪಗೊಂಡಿತು.

ಕತ್ತಲು ಎಂದರೆ ಕೇವಲ ಬೆಳಕಿನ ಅನುಪಸ್ಥಿತಿಯೇ ಅಥವಾ ಒಳಗಿನ ನಾವು ಕಾಣದೆ ಉಳಿಸಿಕೊಂಡಿರುವ ಯಾವುದೋ ಒಂದು ಭಾವ ಲೋಕವೇ?, ಇಂತಹ ಪ್ರಶ್ನೆಗಳನ್ನ ಮುಂದಿಡುವ ಮೂಲಕ ‘ಕತ್ತಲ ಹಾಡು’ ಕಾರ್ಯಕ್ರಮ ಪ್ರೇಕ್ಷಕರನ್ನು ಸೆಳೆಯಿತು.


ಕತ್ತಲನ್ನು ಕಾಣುವ ರೀತಿ, ಸುತ್ತಲಿನ ಜಗವನ್ನ ನೋಡುವ ಪರಿ, ಗೆಲುವಿನೊಳಗಿರುವ ಸೋಲನ್ನ ಸ್ವೀಕರಿಸುವ ಮನಸ್ಥಿತಿ, ಸತ್ಯ ಮತ್ತು ನಿಜಗಳ ನಡುವಿನ ಸೂಕ್ಷ್ಮ ಅಂತರದ ಎಳೆಯನ್ನ ಗುರುತಿಸುವ ಸಾಮರ್ಥ್ಯ ಇವೆಲ್ಲವೂ ಹಾಡಿನ ನಾದದೊಂದಿಗೆ ನಿಧಾನವಾಗಿ ನಮ್ಮೊಳಗೆ ಅಂತರ್ಯಾನ ಮಾಡಿಸುತ್ತವೆ. ಕಾರ್ಯಕ್ರಮದಲ್ಲಿ ಉಪಸ್ಥಿತಿಯಲ್ಲಿದ್ದ ಅನೇಕರ ಬೆರಳುಗಳನ್ನು ಗಮನಿಸಿದಂತೆ ಎಲ್ಲರೂ ತಮ್ಮ ಹೃದಯದ ತಂತಿಯನ್ನು ಮೀಟುವಂತೆ ಆಡಿಸುತ್ತಿದ್ದರು, ಹೊರಗಿನ ವೇದಿಕೆಗಿಂತ ತನ್ನೊಳಗಿನ ಅಂತರಂಗದ ವೇದಿಕೆಯೇ ದೊಡ್ಡದಾಗಿ ಕಾಣತೊಡಗಿತ್ತು.
ನಾದ ಮಣಿನಾಲ್ಕೂರು ಅವರ ಗಾಯನದ ವಿಶೇಷತೆ ಇಲ್ಲಿಯೇ ಇದೆ. ‘ಕತ್ತಲ ಹಾಡು’ಕತ್ತಲೆಯನ್ನೇ ಕರಗಿಸುವಂತಿತ್ತು , ಹೃದಯದ ಭಾಷೆಯನ್ನು ಮೀಟುವಂತಿತ್ತು, ಅಲ್ಲದೆ ಸವಿತಾ ನಾಗಭೂಷಣ ಅವರ ಕವಿತೆಯಂತೆ ಕನಕ ಕೃಷ್ಣರ ಆಳವಾದ ಭಾಂದವ್ಯದ ಬಾಂದಳವನ್ನ ಸರಳವಾಗಿ ಸ್ಪುರಿಸುತ್ತಿತ್ತು, ಎಲುಬಿನ ಹಂದರದೊಳಗಿನ ಮಂದಿರವನ್ನು ತಲುಪುವಂತಿತ್ತು.

ಏಕಾಂಗಿಯಾಗಿ ಹೊರಟಾಗ ಯಾರಾದರೂ ಸಿಕ್ಕುವ ಬಗೆಯ ಅರಿಯುವಂತಿತ್ತು. ಮುಖ್ಯವಾಗಿ ಈಗಿನ ಕಾಲಘಟ್ಟದ ಮನಸ್ಥಿತಿಗಳು ಹಾಗೂ ಪರಿಸ್ಥಿತಿಗಳು ಹೇಗಿವೆ ಹೀಗೆ ಎಲ್ಲದರಲ್ಲೂ ಅಸಹನೆ ಹಾಗೇ ಮನರಂಜನೆಯನ್ನೇ ಹುಡುಕುತ್ತವೆ ಎನ್ನುವುದನ್ನ
ಸರಳ ಸ್ಪಷ್ಟವಾಗಿ ಹಾಡುಗಳ ನಡುವಿನ ಅರಿವು ನುಡಿಗಳು ಎತ್ತಿ ಹಿಡಿದವು.
ಅದಕ್ಕಾಗಿಯೇ ಕಾರ್ಯಕ್ರಮ ಮುಗಿದ ಮೇಲೂ ಎಲ್ಲರ ಮನಸ್ಸಿನಲ್ಲಿ ಒಂದು ಅಜ್ಞಾತ ಏಕತಾರಿಯ ನಾದ ಕೇಳಿಸುತ್ತಲೇ ಇತ್ತು.
ಎಲ್ಲರನ್ನ ಕ್ಷಣ ಕಾಲ ಸೋಲಿಸಿ ಕತ್ತಲಿನಲ್ಲಿ ಕರಗಿಸಿ ಒಳಗಿಳಿದು ನಮ್ಮ ನಮ್ಮ ಬೆರಳುಗಳಲ್ಲಿ ಅಜ್ಞಾತ ಏಕಕಾರಿಯನ್ನು ಮೀಟಿಸಿದ ‘ಕತ್ತಲ ಹಾಡು’ ಬಹುಮುಖಿ ಸಭಾಂಗಣದಲ್ಲಿ ನಡೆದ ಒಂದು ಕಾರ್ಯಕ್ರಮಕ್ಕಿಂತ ಹೆಚ್ಚಾಗಿ, ನಮ್ಮೊಳಗಿನ ನಮ್ಮನ್ನೇ ಮತ್ತೊಮ್ಮೆ ನೋಡಿಕೊಳ್ಳುವ ಅವಕಾಶವಾಗಿತ್ತು.

ಇಂತಹ ನಾದ ಎಲ್ಲರ ಕಿವಿಗೂ ಬೀಳಲಿ. ಮತ್ತೊಮ್ಮೆ ಮಗದೊಮ್ಮೆ ನಮ್ಮೊಳಗಿನ ಆ ಮೌನದ ಏಕತಾರಿಯನ್ನ ಅರಿಯುವ ಅವಕಾಶಗಳು ಸಿಗಲಿ..
- ಬರಹ: ಕವನ
B A ವಿದ್ಯಾರ್ಥಿ,
ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು, ಶಿವಮೊಗ್ಗ.