ಭೀಮನ ಅಮಾವಾಸ್ಯೆಯು ದಕ್ಷಿಣ ಭಾರತದಲ್ಲಿ ಹೆಚ್ಚಾಗಿ ಕರ್ನಾಟಕ, ಆಂಧ್ರ ಪ್ರದೇಶ ಮತ್ತು ತಮಿಳುನಾಡಿನ ಕೆಲವು ಭಾಗಗಳಲ್ಲಿ ಆಚರಿಸಲ್ಪಡುವ ಹಬ್ಬವಾಗಿದೆ. ಇದನ್ನು ಹಿಂದೂ ಪಂಚಾಂಗದ ಆಷಾಢ ಮಾಸದ ಅಮಾವಾಸ್ಯೆಯ ದಿನದಂದು ಆಚರಿಸಲಾಗುತ್ತದೆ.ಇದು ಶುಭ ಅವಧಿಯ ಆರಂಭವನ್ನು ಸೂಚಿಸುತ್ತದೆ. ಭೀಮೇಶ್ವರ ವ್ರತವನ್ನು ನವದಂಪತಿಗಳು ಸಡಗರದಿಂದ ಆಚರಿಸುತ್ತಾರೆ. ಈ ವ್ರತಕ್ಕೆ ಪತಿ ಸಂಜೀವಿನಿ ವ್ರತ ಎಂದು ಕರೆಯುವುದುಂಟು, ಪತಿಗೆ ದೀರ್ಘಾಯುಷ್ಯವನ್ನು ಕರುಣಿಸುವಂತೆ, ತಮ್ಮನು ದೀರ್ಘ ಸುಮಂಗಲಿಯಾಗಿ ಹರಸುವಂತೆ ಕೋರಿ ಶಿವನನ್ನು ಪೂಜಿಸುವ ಹಬ್ಬವೇ ಭೀಮನ ಅಮಾವಾಸ್ಯೆ.

ಭೀಮನ ಅಮಾವಾಸ್ಯೆಯನ್ನು ಮದುವೆಯಾದ ಹೆಂಗಸರು ಮಾತ್ರವಲ್ಲ, ಮದುವೆಯಾಗದ ಹೆಣ್ಣು ಮಕ್ಕಳು ಒಳ್ಳೆ ಗಂಡ ಸಿಗಲಿ ಎಂದು ಹಾಗೂ ಮದುವೆಯಾದ ಹೆಣ್ಣು ತನ್ನ ಗಂಡನ ಆಯಸ್ಸು ವೃದ್ಧಿಯಾಗಲಿ ಎಂದು ದೇವರನ್ನು ಪ್ರಾರ್ಥಿಸಿ ಈ ವ್ರತ ಕೈಗೊಳ್ಳುತ್ತಾರೆ.
ಪೌರಾಣಿಕ ಹಿನ್ನೆಲೆ: ಭಗವಾನ್ ಪರಶಿವನು ಭೀಮನ ಅಮಾವಾಸ್ಯೆಯಂದೇ ಪಾರ್ವತಿಯನ್ನು ಪತ್ನಿಯನ್ನಾಗಿ ಸ್ವೀಕರಿಸಿದ್ದು, ಆದ್ದರಿಂದ ಈ ದಿನವನ್ನು ಭೀಮನ ಅಮಾವಾಸ್ಯೆ ಎಂದು ಆಚರಿಸಲಾಗುತ್ತದೆ.ಈ ದಿನದಂದು ಮಹಿಳೆಯರು ಶಿವ ಪಾರ್ವತಿಯನ್ನು ಆರಾಧಿಸಿದರೆ ಸಮೃದ್ಧಿ, ಸಂತಾನ,ಪತಿ ವ್ರತೆ,ಆಯುಸ್ಸು, ಯಶಸ್ಸು, ಸಂತೋಷ ಎಲ್ಲವನ್ನು ಶಿವ ಮತ್ತು ಪಾರ್ವತಿದೇವಿ ಕರುಣಿಸುತ್ತಾರೆ ಎಂಬ ನಂಬಿಕೆ ಇದೆ.

ಈ ದಿನ ಶಿವನು ಪಾರ್ವತಿಯ ಮೇಲಿನ ಭಕ್ತಿಯಿಂದ ಪ್ರಭಾವಿತನಾಗುತ್ತಾನೆ ಮತ್ತು ಅವಳನ್ನು ತನ್ನ ಹೆಂಡತಿಯಾಗಿ ಸ್ವೀಕರಿಸುತ್ತಾನೆ ಎನ್ನುವ ನಂಬಿಕೆಯಿದೆ. ಈ ದಿನ ಮಹಿಳೆಯರು ಉಪವಾಸವಿದ್ದು, ಭಗವಾನ್ ಶಿವನಿಗೆ ಪ್ರಾರ್ಥನೆ ಸಲ್ಲಿಸಿದರೆ, ಪಾರ್ವತಿಯು ಅವಿವಾಯಿತ ಮಹಿಳೆಯರಿಗೆ ಸದ್ಗುಣಯುತ ಗಂಡನನ್ನು ನೀಡುತ್ತಾಳೆ ಮತ್ತು ಮದುವೆಯಾದ ಮಹಿಳೆಯರು ತಮ್ಮ ಗಂಡನ ದೀರ್ಘಾಯುಷ್ಯ,ಯಶಸ್ಸು ಮತ್ತು ಸಂತೋಷಕ್ಕಾಗಿ ಪ್ರಾರ್ಥಿಸುತ್ತಾರೆ ಎಂದು ನಂಬಲಾಗಿದೆ.

ವಿವಿಧ ರೀತಿ ಆಚರಣೆ : ವ್ರತ ಆಚರಣೆ ಪ್ರಾಂತ್ಯದಿಂದ ಪ್ರಾಂತಕ್ಕೆ ಭಿನ್ನತೆಯಿಂದ ಕೂಡಿದೆ, ಒಂದೇ ಆದರೂ, ಆಚರಣೆಯಲ್ಲಿ ವಿವಿಧತೆಯನ್ನು ಕಾಣಬಹುದು, ದಕ್ಷಿಣ ಕನ್ನಡಲ್ಲಿ ಇದನ್ನು ಆಟಿ ಅಮಾವಾಸ್ಯೆ ಎಂದು ಕರೆಯುತ್ತಾರೆ. ಈ ದಿನದಂದು ಆ ಭಾಗದ ಸಂಸ್ಕೃತಿ,ಆಚಾರ ವಿಚಾರಗಳನ್ನು ಬಿಂಬಿಸುವ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಉತ್ತರ ಕನ್ನಡದ ಕೆಲವು ಭಾಗಗಳಲ್ಲಿ ಇದಕ್ಕೆ ಕೊಡೆ ಅಮಾವಾಸ್ಯೆ ಎಂದು ಕರೆಯುತ್ತಾರೆ.ಈ ದಿನದಂದು ಮಗಳೊಂದಿಗೆ ಮನೆಗೆ ಬಂದ ಅಳಿಯನಿಗೆ ಮಾವ ಕೊಡೆ ನೀಡಿ ಸತ್ಕರಿಸುತ್ತಾನೆ.
ಈ ಹಬ್ಬದ ಇನ್ನೊಂದು ವಿಶೇಷತೆ ಎಂದರೆ ಭಂಡಾರವನ್ನು ಕರಿಗಡುಬು ಮೈದಾಹಿಟ್ಟಿನಿಂದ ಮಾಡಿಕೊಳ್ಳಬಹುದು, ಇದನ್ನು ಮಾಡುವಾಗ ಇದರೊಳಗೆ ದುಡ್ಡು ಅಥವಾ ನಾಣ್ಯವನ್ನು ಇಡಬೇಕು, ಇದನ್ನು ಹೊಸ್ತಲಿನ ಮೇಲೆ ಇಟ್ಟು ಪೂಜೆ ಮಾಡಬೇಕು, ಅಣ್ಣ-ತಮ್ಮ ಇದನ್ನು ಹೊಡೆಯುತ್ತಾರೆ,ಅವರಿಗೆ ಆರತಿ ಮಾಡಿ, ಒಳಗೆ ಇರುವ ದುಡ್ಡಿನ, ಜೊತೆಗೆ ಉಡುಗೊರೆ ಕೊಡಬೇಕು.

ತಂಬಿಟ್ಟು ದೀಪದ ಮಹತ್ವ : ಈ ವಿಶೇಷ ದಿನದಂದು ಗೋಧಿಯಿಂದ ಮಾಡಿದ ಹಣತೆಯಲ್ಲಿ ದೀಪವನ್ನು ಉರಿಸಿದರೆ, ಮನಸ್ಸಿನಲ್ಲಿರುವ ಕೆಟ್ಟ ಭಾವನೆಗಳನ್ನು ಇದು ತೆಗೆದು ಹಾಕುವುದು,ಎಲ್ಲಾ ಕತ್ತಲೆಯನ್ನು ಕೂಡ ತನ್ನ ಆತ್ಮದ ಸುಂದರತೆಯಿಂದ ದೀಪದಂತೆ ಪ್ರಜ್ವಲಿಸಬೇಕೆಂಬುದು ಇದರರ್ಥ. ಹೀಗಾಗಿ ಭೀಮೇಶ್ವರನ ವ್ರತವನ್ನು ಆಚರಿಸುವ ಸುಮಂಗಲಿಯರಿಗೆ ಶುಭವಾಗಲಿ ಎಂದು ಹಾರೈಸೋಣ.
ರಾ. ಹ. ತಿಮ್ಮೇನಹಳ್ಳಿ, ಶಿವಮೊಗ್ಗ.
:
ಪೂಜಾ ವಿಧಾನ : ಈ ದಿನದಂದು ಮಹಿಳೆಯರು ಬೇಗ ಎದ್ದು ಶುಚಿಯಾಗಿ ಹೊಸ ಬಟ್ಟೆಯನ್ನು ಧರಿಸಿ ಮನೆ ಮುಂದೆ ರಂಗೋಲಿಯನ್ನು ಹಾಕಬೇಕು. ಗೃಹಿಣಿಯರು ತಮ್ಮ ಕೈಗೆ ಕಂಕಣ ಕಟ್ಟಿಕೊಂಡು ಜ್ಯೋರ್ತಿಭೀಮೇಶ್ವರನನ್ನು ಧ್ಯಾನಿಸಿ,ವ್ರತ ಕೈಗೊಳ್ಳಬೇಕು,ರಾಹುಕಾಲ ಹೊರತುಪಡಿಸಿ ಬೆಳಗ್ಗೆ ಅಥವಾ ಸಂಜೆ ಯಾವುದೇ ಶುಭ ಮುಹೂರ್ತ ವ್ರತ ಕೈಗೊಳ್ಳಬಹುದು, ಒಂದು ತಟ್ಟೆಯಲ್ಲಿ ಅಕ್ಕಿ ಹಾಕಿ, ಅದರ ಮೇಲೆ ಎರಡು ದೀಪದ ಕಂಬ ನೆಟ್ಟು, ದೀಪದ ಎಣ್ಣೆ ಹಾಕಿ ಹಚ್ಚಬೇಕು. ಈ ದೀಪ ಸ್ತಂಭದಲ್ಲಿ ಶಿವ ಪಾರ್ವತಿಯನ್ನು ಅವಾಹನೆ ಮಾಡಿ ಪೂಜೆಸಲ್ಲಿಸಬೇಕು. ಪೂಜೆಗೆ ಬೇಕಾದ ಸಾಮಗ್ರಿಗಳೊಂದಿಗೆ ಒಂಬತ್ತು ಗಂಟಿನ ಗೌರಿ ಧಾರವನ್ನು ಇಟ್ಟು ಪೂಜೆ ಮಾಡಿ ಬಳಿಕ ಆ ಧಾರವನ್ನು ಕೈಗೆ ಕಟ್ಟಿಕೊಳ್ಳಬೇಕು. ಶುಭಾರಂಭದ ಸಂಕೇತ ಗಣೇಶನಾಗಿರುವುದರಿಂದ ಮೊದಲು ಗಣೇಶನನ್ನು ಆರಾಧಿಸಿ ನಂತರ ಭೀಮೇಶ್ವರನನ್ನು ಪೂಜಿಸಿ.