ಶಿವಮೊಗ್ಗ: ಭದ್ರಾವತಿ ಸಂಚಾರಿ ವಿಭಾಗದಲ್ಲಿ ಮುಖ್ಯ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಹಾಲೇಶ್ ಅವರು ಮಾನವೀಯತೆಗೆ ಮತ್ತೊಂದು ಉದಾಹರಣೆಯಾಗಿದ್ದಾರೆ.

ನಗರದ ನಂಜಪ್ಪ ಲೈಫ್ ಕೇರ್ ಆಸ್ಪತ್ರೆಯಲ್ಲಿ ಗಂಭೀರ ಕಾಯಿಲೆಯಿಂದ ಬಳಲುತ್ತಿರುವ ರೋಗಿಯೊಬ್ಬರಿಗೆ ತುರ್ತಾಗಿ ಪ್ಲೇಟ್ಲೆಟ್ಸ್ (ಎಸ್.ಡಿ.ಪಿ) ಬೇಕಿದ್ದ ಬೇಡಿಕೆಗೆ ಸ್ಪಂದಿಸಿ, ರೆಡ್ ಕ್ರಾಸ್ ಸಂಜೀವಿನಿ ರಕ್ತ ನಿಧಿ ಕೇಂದ್ರದಲ್ಲಿ ಪ್ಲೇಟ್ಲೆಟ್ಸ್ ದಾನ ಮಾಡುವ ಮೂಲಕ ತಮ್ಮ 61ನೇ ರಕ್ತದಾನ ಪೂರೈಸಿದ್ದಾರೆ.

ಅದರಲ್ಲಿ 46 ಬಾರಿ ಸಂಪೂರ್ಣ ರಕ್ತದಾನ ಹಾಗೂ 15 ಬಾರಿ ಪ್ಲೇಟ್ಲೆಟ್ಸ್ ದಾನ ಸೇರಿದೆ.

“ರಕ್ತದಾನವನ್ನು ನಾನು ದೇಶಸೇವೆಯ ಒಂದು ಅತ್ಯುತ್ತಮ ಮಾದರಿ ಭಾಗವನ್ನಾಗಿ ಪರಿಗಣಿಸಿದ್ದೇನೆ. ದೇವರು ಕೊಟ್ಟಿರುವ ಆರೋಗ್ಯವನ್ನು ಹಂಚುವಲ್ಲಿ ಅತೀವ ಸಂತೋಷವಿದೆ” ಎಂದು ಅವರು ತಿಳಿಸಿದ್ದಾರೆ.

ವೃತ್ತಿಯಲ್ಲಿ ಪೊಲೀಸ್ ಆಗಿದ್ದರೂ ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಂಡಿರುವ ಹಾಲೇಶ್ ಅವರು ರಕ್ತದಾನದ ಜೊತೆಗೆ ರಕ್ತದಾನ ಶಿಬಿರಗಳನ್ನು ಆಯೋಜಿಸುತ್ತಾ ಯುವಕರಿಗೆ ಮಾದರಿಯಾಗಿದ್ದಾರೆ. 61 ಬಾರಿ ರಕ್ತದಾನ ಮಾಡಿರುವ ಇವರ ಸೇವೆಗೆ ಇಲಾಖೆಯಲ್ಲಿ ಈಗಾಗಲೇ ಪ್ರಶಂಸೆ ವ್ಯಕ್ತವಾಗಿದ್ದು, ಇದು ಇಡೀ ಇಲಾಖೆಗೆ ಗೌರವ ತರುವಂತಹ ಕಾರ್ಯವಾಗಿದೆ.