ಶಿವಮೊಗ್ಗ:’ಗೋಹತ್ಯೆ ಸಂಪೂರ್ಣ ನಿಷೇಧ, ಗೋವಿಗೆ ರಾಷ್ಟ್ರಮಾತೆ ಗೌರವ ಹಾಗೂ ಗೋ ಸಂರಕ್ಷಣೆಗಾಗಿ ಪ್ರತ್ಯೇಕ ಸಚಿವಾಲಯ ಸ್ಥಾಪನೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ದೇಶದಾದ್ಯಂತ ಸಹಿ ಸಂಗ್ರಹ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಗೋ ಸಮ್ಮಾನ ಆಹ್ವಾನ ಅಭಿಯಾನದ ರಾಜ್ಯ ಸಹ ಸಂಚಾಲಕ ಶ್ರೀ ಗುರು ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಾದ್ಯಂತ ಸಾಧು-ಸಂತರ ನೇತೃತ್ವದಲ್ಲಿ ಅಭಿಯಾನ ನಡೆಯುತ್ತಿದೆ. ಈಗಾಗಲೇ 20 ಕೋಟಿ ಸಹಿಗಳನ್ನು ಸಂಗ್ರಹಿಸಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಉಳಿದ 31 ಕೋಟಿ ಸಹಿಗಳನ್ನು ಸಂಗ್ರಹಿಸಿ ಈ ವರ್ಷದ ಅಂತ್ಯದೊಳಗೆ ಸಲ್ಲಿಸುವ ಗುರಿ ಹೊಂದಲಾಗಿದೆ ಎಂದರು.

ರಾಜ್ಯದಲ್ಲಿ 3 ಕೋಟಿ ಸಹಿ ಸಂಗ್ರಹಿಸುವ ಗುರಿ ಇದ್ದು, ಶಿವಮೊಗ್ಗದಲ್ಲಿ ಗೋವರ್ಧನ ಟ್ರಸ್ಟ್ ನೇತೃತ್ವದಲ್ಲಿ ಎರಡು ಲಕ್ಷಕ್ಕೂ ಅಧಿಕ ಸಹಿ ಸಂಗ್ರಹಿಸಲು ಉದ್ದೇಶಿಸಲಾಗಿದೆ. ಜಿಲ್ಲೆಯ ಸಾಧು-ಸಂತರು ಹಾಗೂ ವಿವಿಧ ಸಂಘಟನೆಗಳನ್ನು ಒಗ್ಗೂಡಿಸಿ ಅಭಿಯಾನ ನಡೆಸಲಾಗುವುದು ಎಂದು ಹೇಳಿದರು.
ಗೋವು ಕೇವಲ ಧಾರ್ಮಿಕ ದೃಷ್ಟಿಯಿಂದ ಮಾತ್ರ ಪೂಜನೀಯವಲ್ಲ. ದೇಶೀಯ ಗೋವುಗಳ ಸಗಣಿ ಮತ್ತು ಗಂಜಲ ಕೃಷಿ ಭೂಮಿಯ ಫಲವತ್ತತೆ ಹೆಚ್ಚಿಸಲು ಸಹಕಾರಿಯಾಗಿವೆ. ರಾಸಾಯನಿಕ ಗೊಬ್ಬರ ಹಾಗೂ ಯಾಂತ್ರಿಕ ಕೃಷಿಯ ಅತಿಯಾದ ಬಳಕೆಯಿಂದ ಮಣ್ಣಿನ ಗುಣಮಟ್ಟ ಕುಸಿಯುತ್ತಿದೆ. ನೈಸರ್ಗಿಕ ಕೃಷಿ ಮತ್ತು ಭೂಮಿಯ ಪುನಶ್ಚೇತನಕ್ಕೆ ಗೋಸಂಪತ್ತಿನ ಸಂರಕ್ಷಣೆ ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.

ಗೋಸಂರಕ್ಷಣೆಗೆ ದೇಶಾದ್ಯಂತ ಜನರ ಸಹಭಾಗಿತ್ವ ಅಗತ್ಯ. ಯಾವುದೇ ಒಂದು ಸಂಘಟನೆಗೆ ಸೀಮಿತವಾದ ಅಭಿಯಾನ ಇದಲ್ಲ. ಗೋವಿನ ಹಾಲು ಕುಡಿದು ಬೆಳೆದ ಪ್ರತಿಯೊಬ್ಬ ಭಾರತೀಯರೂ ಸಹಿ ಹಾಕುವ ಮೂಲಕ ಬೆಂಬಲಿಸಬೇಕು ಎಂದು ಮನವಿ ಮಾಡಿದರು.

ಡಿ.17ರಂದು ಬೆಂಗಳೂರಿನಲ್ಲಿ ರಾಜ್ಯಪಾಲರು ಹಾಗೂ ಮುಖ್ಯಮಂತ್ರಿಗಳ ಮೂಲಕ ಸಹಿಗಳನ್ನು ರಾಷ್ಟ್ರಪತಿ ಮತ್ತು ಪ್ರಧಾನಮಂತ್ರಿಗಳಿಗೆ ಸಲ್ಲಿಸಲಾಗುವುದು. ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಹಾಗೂ ಗೋಪ್ರೇಮಿಗಳು ಭಾಗವಹಿಸಬೇಕು ಎಂದು ಕೋರಿದರು.
ಗೋವರ್ಧನ ಟ್ರಸ್ಟ್ ಅಧ್ಯಕ್ಷ ಕೆ. ಈ. ಕಾಂತೇಶ್, ಪ್ರಧಾನ ಕಾರ್ಯದರ್ಶಿ ಉಮೇಶ್ ಆರಾಧ್ಯ, ಸಂಚಾಲಕರಾದ ದಿನೇಶ್ ವೈಷ್ಣವ್, ಶ್ರೀಕಾಂತ್, ಗುರು ಶೇಟ್, ವಿಶ್ವರಾಜಾಚಾರ್, ಸುಬ್ರಹ್ಮಣ್ಯ, ಕುಬೇರಪ್ಪ ಇದ್ದರು.
ಬಾಕ್ಸ್
ನ.20ರಂದು ಅಭಿಯಾನಕ್ಕೆ ಚಾಲನೆ: 10 ದಿನಗಳ ಸಹಿ ಸಂಗ್ರಹ ; ಕೆ.ಎಸ್.ಈಶ್ವರಪ್ಪ ಗೋ ಸಮ್ಮಾನ ಆಹ್ವಾನ ಅಭಿಯಾನ ಹಾಗೂ ಗೋವರ್ಧನ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಗೋ ಸಂರಕ್ಷಣೆಗಾಗಿ ಸಹಿ ಸಂಗ್ರಹ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ತಿಳಿಸಿದರು.ನ.20 ರಂದು ಬೆಳಿಗ್ಗೆ 10.30ಕ್ಕೆ ಬೆಕ್ಕಿನ ಕಲ್ಮಠದ ಆವರಣದಲ್ಲಿ ಅಭಿಯಾನಕ್ಕೆ ಚಾಲನೆ ನೀಡಲಾಗುವುದು. ಬೆಕ್ಕಿನ ಕಲ್ಮಠದ ಮಲ್ಲಿಕಾರ್ಜುನ ಮುರುಗರಾಜೇಂದ್ರ ಸ್ವಾಮೀಜಿ ಸೇರಿದಂತೆ ವಿವಿಧ ಮಠಗಳ ಮಠಾಧೀಶರು ಸಾನ್ನಿಧ್ಯ ವಹಿಸಲಿದ್ದಾರೆ. ಅಭಿಯಾನದ ರಾಜ್ಯ ಸಹ ಸಂಚಾಲಕ ಶ್ರೀ ಗುರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದರು.ಅಭಿಯಾನವನ್ನು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ವ್ಯಾಪಕವಾಗಿ ನಡೆಸಲಾಗುವುದು. ಕಾರ್ಯಕರ್ತರು ಮನೆ ಮನೆಗೆ ತೆರಳಿ, ಸಾರ್ವಜನಿಕ ಸಮಾರಂಭಗಳು ಹಾಗೂ ಪ್ರಮುಖ ವೃತ್ತಗಳಲ್ಲಿ ಕೌಂಟರ್ಗಳನ್ನು ಸ್ಥಾಪಿಸಿ ಸಹಿ ಸಂಗ್ರಹಿಸಲಿದ್ದಾರೆ. ಮಹಿಳಾ ಸ್ವಸಹಾಯ ಸಂಘಗಳು, ರೈತ ಗುಂಪುಗಳು ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘಗಳಿಂದ ಜನರನ್ನು ಸಂಪರ್ಕಿಸಲಾಗುವುದು ಎಂದರು.ಸಹಿ ಸಂಗ್ರಹ ಅಭಿಯಾನ ನ. 30 ರವರೆಗೆ ಇರಲಿದ್ದು, ಅಭಿಯಾನದಲ್ಲಿ ಪಾಲ್ಗೊಳ್ಳಲು 9067777323 ಸಂಖ್ಯೆಗೆ ಮಿಸ್ ಕಾಲ್ ನೀಡಬಹುದು. ಹೆಚ್ಚಿನ ಮಾಹಿತಿಗೆ 9571712140 ಸಂಪರ್ಕಿಸಬಹುದು ಎಂದು ತಿಳಿಸಿದರು.
ಹನಿ ಹನಿಗೂಡಿದರೆ ಹಳ್ಳ ಎಂಬಂತೆ ಪ್ರತಿಯೊಬ್ಬರ ಸಹಿಯೂ ಗೋ ಸಂರಕ್ಷಣೆಯ ಕಾರ್ಯಕ್ಕೆ ಬಲ ನೀಡಲಿದೆ. ಎಲ್ಲರೂ ಒಗ್ಗಟ್ಟಿನಿಂದ ಅಭಿಯಾನದಲ್ಲಿ ಪಾಲ್ಗೊಳ್ಳಬೇಕು.
– ಬಳಸಗೋಡು ಭೃಂಗೀಶ್ವರ ಮಠದ ಗುರುನೀಲಕಂಠ ಶಿವಾಚಾರ್ಯ ಸ್ವಾಮೀಜಿ.
ಗೋವು ಕೇವಲ ಪ್ರಾಣಿಯಲ್ಲ, ದೇಶದ ಸಂಸ್ಕೃತಿ ಮತ್ತು ಪರಂಪರೆಯ ಪ್ರತೀಕ. ಗೋ ಸಂರಕ್ಷಣೆ ಉದ್ದೇಶದ ಈ ಅಭಿಯಾನ ಕೇವಲ ಸಹಿ ಸಂಗ್ರಹಕ್ಕೆ ಸೀಮಿತವಾಗದೆ, ಜನಜಾಗೃತಿ ಮೂಡಿಸುವ ಅಭಿಯಾನವಾಗಿದೆ.- ಹರ್ಷ ಕಾಮತ್, ಸಂಚಾಲಕರು.
ಭಾರತೀಯ ಸಂಸ್ಕೃತಿ ಮತ್ತು ಸಂಸ್ಕಾರಗಳ ಉಳಿವಿನಲ್ಲಿ ಗೋಮಾತೆಯ ಪಾತ್ರ ಮಹತ್ವದ್ದಾಗಿದೆ. ಗೋ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ. ನಗರದ ಶಾಲಾ- ಕಾಲೇಜಿನಿಂದಲೂ ಸಹಿ ಸಂಗ್ರಹಿಸಲಾಗುವುದು.-ನವ್ಯಶ್ರೀ ನಾಗೇಶ್,ಸಂಚಾಲಕರು.