ಶಿವಮೊಗ್ಗ : ನಗರದ ಗುರುಪುರದ ಗುಡ್ಡೇಕಲ್ನಲ್ಲಿರುವ ಪ್ರಸಿದ್ಧ ಶ್ರೀ ಬಾಲಸುಬ್ರಹ್ಮಣ್ಯಸ್ವಾಮಿ ದೇವಸ್ಥಾನದಲ್ಲಿ ಆಡಿ ಕೃತಿಕಾ ಜಾತ್ರಾ ಮಹೋತ್ಸವವನ್ನು ಆಗಸ್ಟ್ ೬ ಮತ್ತು ೭ ರಂದು ಎರಡು ದಿನಗಳ ಕಾಲ ಭಕ್ತಿ, ಸಂಭ್ರಮ ಹಾಗೂ ವೈಭವದಿಂದ ಆಚರಿಸಲಾಗುವುದು ಎಂದು ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಪಿ.ರಘುಕುಮಾರ್ ತಿಳಿಸಿದರು.

ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಮಿಳು ಸಂಪ್ರದಾಯದ ಪ್ರಕಾರ ಆಚರಿಸಲಾಗುವ ಆಡಿ ಕೃತಿಕಾ ಜಾತ್ರೆಗೆ ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಆಗಮಿಸುವ ನಿರೀಕ್ಷೆಯಿದ್ದು, ಜಾತ್ರೆಯ ಯಶಸ್ವಿ ಆಯೋಜನೆಗೆ ಎಲ್ಲ ರೀತಿಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದರು.

ಜಾತ್ರೆಯ ಅಂಗವಾಗಿ ವಿಶೇಷ ಪೂಜೆ, ಅಭಿಷೇಕ, ಅಲಂಕಾರ, ಮಹಾಮಂಗಳಾರತಿ ಸೇರಿದಂತೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಭಕ್ತರು ಕಾವಡಿ ಹೊತ್ತು, ವೇಲ್ ಚುಚ್ಚಿಕೊಂಡು ಶ್ರೀ ಬಾಲಸುಬ್ರಹ್ಮಣ್ಯಸ್ವಾಮಿಗೆ ಹರಕೆ ಸಲ್ಲಿಸುವ ಸಂಪ್ರದಾಯವೂ ಜಾತ್ರೆಯ ಪ್ರಮುಖ ಆಕರ್ಷಣೆಯಾಗಲಿದೆ ಎಂದು ತಿಳಿಸಿದರು.

ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ದೇವಸ್ಥಾನ ಟ್ರಸ್ಟ್ ವತಿಯಿಂದ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಲಾಗುತ್ತಿದ್ದು, ಜಿಲ್ಲಾಡಳಿತ, ಮಹಾನಗರ ಪಾಲಿಕೆ ಹಾಗೂ ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ಸುಗಮ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ಗುಡ್ಡದ ಮೇಲೆ ನಿರ್ಮಾಣವಾಗುತ್ತಿರುವ ವಿಶ್ವದ ಅತಿ ಎತ್ತರದ ೧೫೧ ಅಡಿ ಶ್ರೀ ಬಾಲಸುಬ್ರಹ್ಮಣ್ಯಸ್ವಾಮಿ ವಿಗ್ರಹದ ಕಾಮಗಾರಿ ಈಗಾಗಲೇ ಆರಂಭಗೊಂಡಿದ್ದು, ಈ ಮಹತ್ವಾಕಾಂಕ್ಷಿ ಯೋಜನೆಗೆ ಭಕ್ತರು ತನು-ಮನ-ಧನದಿಂದ ಸಹಕಾರ ನೀಡುವಂತೆ ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್ ಉಪಾಧ್ಯಕ್ಷ ಪಿ. ಸುಬ್ರಮಣಿ, ಕಾರ್ಯದರ್ಶಿ ಎಂ. ಲೋಕೇಶ್, ಖಜಾಂಚಿ ಎಂ. ರಾಜು, ಸಹಕಾರ್ಯದರ್ಶಿ ಸಿ.ಆರ್. ರವಿ, ಟ್ರಸ್ಟಿಗಳಾದ ಡಿ. ರಾಜಶೇಖರಪ್ಪ, ಎಂ. ಸುಬ್ರಮಣಿ, ಎಂ.ಪಿ. ಸಂಪತ್, ಪಿ. ರವಿಕುಮಾರ್ ಹಾಗೂ ಕೆ. ವಿಶ್ವನಾಥ್ ಉಪಸ್ಥಿತರಿದ್ದರು.