
ತರಂಗಗಳು ದ್ರವ್ಯ ಮತ್ತು ಸ್ಥಳದಲ್ಲಿ ಕಾಲಕ್ಕನುಗುಣವಾಗಿ ಶಕ್ತಿಯ ಸಮ್ಮೋಹನದೊಂದಿಗೆ ಹರಡುವ ತುಮುಲ. ತರಂಗ ಚಲನೆಯು ಒಂದು ಕಡೆಯಿಂದ ಮತ್ತೊಂದು ಕಡೆಗೆ ಶಕ್ತಿಯನ್ನು ವರ್ಗಾಹಿಸುತ್ತದೆ. ಶಿವಮೊಗ್ಗದಲ್ಲಿ ತಣ್ಣಗೆ ಹರಿಯುವ ತುಂಗೆಯ ತೀರದಲ್ಲಿ ಸುದ್ದಿಯ ತರಂಗಗಳನ್ನು ಎಬ್ಬಿಸುವ ಮೂಲಕ ಮಾಧ್ಯಮ ಲೋಕದಲ್ಲೊಂದು ಮಹತ್ವದ ಮೈಲಿಗಲ್ಲು ತಲುಪಿರುವ ದಿನಪತ್ರಿಕೆಯೇ “ತುಂಗಾ ತರಂಗ”. ಇಂತಹ ಮೈಲಿಗಲ್ಲು ಸ್ಥಾಪನೆಯಾಗಲು ಕಾರಣ ಗಜೇಂದ್ರಸ್ವಾಮಿ ಎಸ್.ಕೆ. ಸಂಪಾದಕತ್ವದಲ್ಲಿ ಹಾಗೂ ಇತರರೊಂದಿಗೆ ಕೈಜೋಡಿಸಿರುವ ಸ್ನೇಹ. ಪ್ರಸ್ತುತ ಕಾರ್ಯನಿರತ ಪತ್ರಿಕಾ ಸಂಪಾದಕರ ಸಂಘದ ಅಧ್ಯಕ್ಷರಾಗಿದ್ದಾರೆ



ಭದ್ರಾವತಿ ತಾಲೂಕಿನ ಅರಹತೊಳಲು ಜನ್ಮಸ್ಥಳ. ತಂದೆ ಶಿಕ್ಷಕರಾಗಿದ್ದ ಎಸ್.ಹೆಚ್. ಕೃಷ್ಣಮೂರ್ತಿ, ತಾಯಿ ಶಕುಂತಲಮ್ಮ, ಹುಟ್ಟೂರಿನ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ. ಕಲ್ಲಿಹಾಳ್ನ ಸರ್ಕಾರಿ ಸಂಯುಕ್ತ ಪಿಯು ಕಾಲೇಜಿನಲ್ಲಿ ಹೈಸ್ಕೂಲು ಮತ್ತು ಪಿಯುಸಿ, ಚನ್ನಗಿರಿಯ ಶಿವಲಿಂಗೇಶ್ವರ ಕಾಲೇಜಿನಲ್ಲಿ ಪದವಿ, ಶಿವಮೊಗ್ಗದ ಡಯಟ್ನಲ್ಲಿ ಟಿ.ಸಿ.ಹೆಚ್., ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರದಲ್ಲಿ ಎಂ.ಎ. ಪದವಿ.

ಶಿಕ್ಷಣ ಅವಧಿಯಲ್ಲೇ ಬರಹದ ಹವ್ಯಾಸ ಬೆಳೆಸಿಕೊಂಡು ಮಾಧ್ಯಮ ಲೋಕಕ್ಕೆ ಪ್ರವೇಶ. ೧೯೮೫ರಿಂದ ಭದ್ರಾವತಿ ಆಕಾಶವಾಣಿಯಲ್ಲಿ ಎನ್. ರಮೇಶ್ ಹಾಗೂ ಡಾ. ಸುದೀಂದ್ರ ನಿರ್ದೇಶನದ ಯುವವಾಣಿ, ಪರಿಸರ ಪ್ರೇಮ, ಹದಿಹರೆಯದ ಮನಸ್ಸುಗಳು ಮಾಲಿಕೆಗಳಲ್ಲಿ ಕಾರ್ಯ, ಕೃಷಿ ವಿಭಾಗದಲ್ಲಿ ರೇಡಿಯೋ ಕಾರ್ಯಕ್ರಮ ರೂಪಕ. ನಂತರ ಅದೇ ವರ್ಷ ಅರಹತೊಳಲು ಕೈಮರದ ರಾಮಮನೋಹರ ಲೋಹಿಯಾ ಶಾಲೆಯಲ್ಲಿ ಶಿಕ್ಷಕರಾಗಿ ವೃತ್ತಿ. ೧ರಿಂದ ೫ನೇ ತರಗತಿ ಶಾಲಾ ಮಕ್ಕಳು ಬರೆದ ‘ಹಳ್ಳಿ ಬೆಳಕು’ ಕವನ ಸಂಕಲನ ಸಿದ್ದಪಡಿಸಿ ಬಿಡುಗಡೆ ಮಾಡಿದ್ದು ಅಂದಿನ

ಇತಿಹಾಸ.
೧೯೯೩-೯೮ ಶಿವಮೊಗ್ಗ ಜಿಲ್ಲಾ ಮಂಗಳ ಕಲಾ ಸಾಹಿತ್ಯ ವೇದಿಕೆ ಅಧ್ಯಕ್ಷ. ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಅನೇಕ ಕವಿಗೋಷ್ಠಿ, ಕಥಾ ಕಮ್ಮಟ, ಪ್ರಬಂಧ ರಚನೆಯ ಕಾರ್ಯಕ್ರಮಗಳ ಆಯೋಜನೆ. ಇದೇ ಸರಹದ್ದಿನಲ್ಲಿ ಸಾಮಾಜಿಕ ನಿಲುವುಗಳಿಂದ ಸಮುದಾಯ ವಿಚಾರ ವೇದಿಕೆ ಮೂಲಕ ಜನಜಾಗೃತಿ ಮೂಡಿಸಲಾಯಿತು. ತುಂಗಾ ಉಳಿಸಿ ಹೋರಾಟ ಅಭಿಯಾನದ ಹೊಳೆಹೊನ್ನೂರು ವಿಭಾಗದದಲ್ಲಿ ಸಕ್ರಿಯ ಪಾಲ್ಗೊಳ್ಳುವಿಕೆ.

೧೯೯೭ರಿಂದ ೨೦೦೩ರವರೆಗೆ ಕನ್ನಡಪ್ರಭ ದಿನಪತ್ರಿಕೆಯ ಹೊಳೆಹೊನ್ನೂರು ವರದಿಗಾರ. ೧೯೯೭ರಿಂದ ೨೦೦೨ರವರೆಗೆ ಜನವಾರ್ತೆ ದಿನಪತ್ರಿಕೆಯ ಮುಖ್ಯ ವರದಿಗಾರ/ ಉಪ ಸಂಪಾದಕ.

ಇದೇ ಸಂದರ್ಭದಲ್ಲಿ ಪತಿ-ಪತ್ನಿಯರ ಗೊಂದಲ ನಿವಾರಿಸುವ ಕೌಟಂಬಿಕ ಸಮರಸ ಸಲಹಾ ಕೇಂದ್ರದಲ್ಲಿ ಪರಿಶೀಲನಾ ಮಾಹಿತಿ ಸಂಗ್ರಹಕಾರನಾಗಿ ಕರ್ತವ್ಯ. ೨೦೦೨ ರಿಂದ ಉಷಾಮಹಿ ದಿನಪತ್ರಿಕೆಯ ಉಪ ಸಂಪಾದಕ. ೧೯೯೮ರಲ್ಲಿ ಜನವಾರ್ತೆ ಪತ್ರಿಕೆಯಲ್ಲಿ ದಿಟ್ಟತನದಿಂದ ಮೆಗ್ಗಾನ್ ಆಸ್ಪತ್ರೆಯ ಕರ್ಮಕಾಂಡವನ್ನು ಅನಾವರಣಗೊಳಿಸಿದ್ದು,

ಗೋವಾದಲ್ಲಿನ ಕನ್ನಡಿಗರು ನಿತ್ಯ ನಿರಂತರವಾಗಿ ನೊಂದು, ಬೆಂದ ಬದುಕು- ಬವಣೆ ಕುರಿತು ಉಷಾಮಹಿ ದಿನಪತ್ರಿಕೆಯಲ್ಲಿ ೨೦೦೨ರಲ್ಲಿ ಒಂದು ತಿಂಗಳು ಗೋವಾದ ಕತ್ತಲು ರಹಸ್ಯ ಅಂಕಣ. ೨೦೦೪ರಲ್ಲಿ ಇದೇ ಪತ್ರಿಕೆಯಲ್ಲಿ ನೆಹರೂ ರಸ್ತೆ ಕುರಿತು ೨೦ ದಿನ ಸಮಗ್ರ ಚಿತ್ರಣ. ಕೇವಲ ಒಂದು ರಸ್ತೆ ಕುರಿತು ಭಿನ್ನ- ವಿಭಿನ್ನ ದೃಷ್ಟಿಕೋನದಲ್ಲಿ ಬರೆದ ಅತಿ ಅಪರೂಪದ ಅಂಕಣವಿದು.

೨೦೦೪-೦೭ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ, ನಂತರ ಮೂರು ವರ್ಷ ಖಜಾಂಚಿಯಾಗಿ ಕಾರ್ಯನಿರ್ವಹಣೆ.
೨೦೧೧ ಆಗಸ್ಟ್ ೧೫ರಿಂದ ತುಂಗಾತರಂಗ ದಿನಪತ್ರಿಕೆಯ ಸಂಪಾದಕ. ಸ್ಥಳೀಯ ಪತ್ರಿಕೋದ್ಯಮದಲ್ಲಿ ಹೊಸ ಆಯಾಮ ಸೃಷ್ಟಿ. ಅಂದಿನಿಂದ ಪ್ರತಿವರ್ಷ ಅತ್ಯಂತ ವಿಶಿಷ್ಟ ಹಾಗೂ ವಿಭಿನ್ನವಾಗಿ ಸಂಗ್ರಹ ಯೋಗ್ಯವಾದ ವಾರ್ಷಿಕ ವಿಶೇಷಾಂಕ. ಕ್ಯಾಲೆಂಡರ್ ಬಿಡುಗಡೆ. ಸ್ಥಳೀಯ ದಿನಪತ್ರಿಕೆಯೊಂದು ತಪ್ಪದೇ ಪ್ರತಿವರ್ಷ ವಾರ್ಷಿಕ ವಿಶೇಷಾಂಕವನ್ನು ಹೊರತರುವುದು ಸುಲಭದ ಮಾತಲ್ಲ. ಆದರೆ ಈ ಸವಾಲುಗಳನ್ನು ದಿಟ್ಟೆದೆಯಿಂದ ಸ್ವೀಕರಿಸಿ ಗೆಲುವು ಕಂಡಿರುವ ಪತ್ರಿಕೆ.

ಸೋಷಿಯಲ್ ಮೀಡಿಯಾ ಮೂಲಕ ಕೇವಲ ಶಿವಮೊಗ್ಗ ಜಿಲ್ಲೆಯಲ್ಲಷ್ಟೇ ಅಲ್ಲ ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟೀಯ ಮಟ್ಟದಲ್ಲಿಯೂ “ತುಂಗಾ ತರಂಗ ಹವಾ” ಸೃಷ್ಟಿಸಿದೆ ಎಂದರೆ ಅತಿಶಯೋಕ್ತಿಯಲ್ಲ. ವೆಬ್, ಫೇಸ್ಬುಕ್, ಟ್ವಿಟ್ಟರ್, ಇನ್ಸ್ಟಾಗ್ರಾಮ್, ಕೂ, ಟೆಲಿಗ್ರಾಂ ಸೇರಿದಂತೆ ಬಹು ಬಗೆಯ ಸೋಷಿಯಲ್ ಮೀಡಿಯಾವನ್ನು ಅತ್ಯಂತ ಸಮರ್ಥವಾಗಿ ಮತ್ತು ಸಮರ್ಪಕವಾಗಿ ಬಳಸಿಕೊಳ್ಳಲಾಗಿದೆ.
ಅದರಲ್ಲಿ ಯಶಸ್ಸು ಕಂಡಿರುವ ನಾಡಿನ ಅಪರೂಪದ ಪತ್ರಿಕೆ ತುಂಗಾತರಂಗ. tungataranga.com ಸ್ಥಾಪಿಸುವ ಮೂಲಕ ವೆಬ್ ಜಗತ್ತಿನಲ್ಲಿ ಹೊಸತನಕ್ಕೆ ಮುನ್ನುಡಿ.

ಕೊರೋನದ ಲಾಕ್ಡೌನ್ ಸಂದರ್ಭದಲ್ಲಿ ವಾರ್ತಾ ಇಲಾಖೆಯು ನಿರಂತರವಾಗಿ ಪತ್ರಿಕೆ ಪ್ರಕಟಿಸಬೇಕೆಂಬ ನಿಯಮಕ್ಕೆ ಸುಮಾರು 5 ತಿಂಗಳ ಕಾಲ ವಿನಾಯಿತಿ ನೀಡಿತ್ತು. ಆದರೆ ಆ ಸಂದರ್ಭದಲ್ಲಿಯೂ ಪ್ರಕಟವಾದ ರಾಜ್ಯದ ಸ್ಥಳೀಯ ಬೆರಳೆಣಿಕೆ ದಿನಪತ್ರಿಕೆಗಳಲ್ಲಿ “ತುಂಗಾ ತರಂಗ” ಸಹ ಸೇರಿದೆ. ಪತ್ರಿಕೆ ಪ್ರಕಟಿಸುವ ಮೂಲಕ ವೃತ್ತಿ ಬದ್ಧತೆ ಮೆರೆಯಲಾಯಿತು.\ಅಲ್ಲದೆ ಮಾನವ ಹಕ್ಕು ಸಮಿತಿ ಸೇರಿದಂತೆ ವಿವಿಧ ಸಂಘ- ಸಂಸ್ಥೆಗಳೊಂದಿಗೆ ಪೋಲೀಸರು, ಆರೋಗ್ಯ ಕ್ಷೇತ್ರದ ಸಿಬ್ಬಂದಿಗಳಿಗೆ ಕುಡಿಯುವ ನೀರು, ಪಾನೀಯ, ಊಟ- ತಿಂಡಿ ಪೂರೈಸಿದ್ದು, ಕೊರೋನಾದಿಂದ ಸಾವನ್ನಪ್ಪಿದವರ ಶವ ರವಾನೆ, ಶವ ಸಂಸ್ಕಾರಕ್ಕೂ ಸಹಕಾರ.

ಗಜ + ಇಂದ್ರ =ಗಜೇಂದ್ರ
ಆನೆಯ ಬಲ, ಇಂದ್ರನ ಧೀರತೆ. ಹೆಸರಿನಲ್ಲೇ ಒಂದು ಸಂಕೇತ ಹೊತ್ತು ಬಂದ ವ್ಯಕ್ತಿತ್ವ. ತುಂಗೆಯ ದಡದಲ್ಲಿ ಹುಟ್ಟಿ, ತರಂಗದಂತೆ ಊರೂರಿಗೆ ಹಬ್ಬಿದ “ತುಂಗಾ ತರಂಗ”ದ ಸಂಪಾದಕ ಗಜೇಂದ್ರಸ್ವಾಮಿ ಅವರಿಗೆ ಶಿವಮೊಗ್ಗ ಪ್ರೆಸ್ ಟ್ರಸ್ಟ್ “ಸಾಧಕ ಪ್ರಶಸ್ತಿ” ನೀಡಿ ಗೌರವಿಸುತ್ತಿರುವುದು ಕಾಲದ ನ್ಯಾಯ ವಾಗಿದೆ.ಭದ್ರಾವತಿಯ ಅರಹತೊಳಲು. ಅಲ್ಲಿ ಒಂದು ಸರಳ ಮನೆ. ಶಿಕ್ಷಕನಾಗುವ ಕನಸು ಹೊತ್ತು ಬೆಳೆದ ಹುಡುಗನೊಬ್ಬ, ವಿಧಿಯ ಆಟದಲ್ಲಿ ಪತ್ರಿಕೆಯ ಮೆಟ್ಟಿಲು ಹತ್ತಿದ. ಕನ್ನಡಪ್ರಭದಿಂದ ಶುರುವಾಗಿ, ಜನವಾರ್ತೆ, ಉಷಾಮಹಿ ದಾಟಿ, 2011ರಲ್ಲಿ ತನ್ನದೇ ಕನಸಿಗೆ “ತುಂಗಾ ತರಂಗ” ಎಂದು ಹೆಸರಿಟ್ಟ. ಸ್ಥಳೀಯ ಪತ್ರಿಕೆಯೊಂದು ಬದುಕುವುದು ಕಷ್ಟ. ಅದರಲ್ಲೂ ಪ್ರತಿವರ್ಷ ವಿಶೇಷಾಂಕ, ಕ್ಯಾಲೆಂಡರ್, ಸೋಷಿಯಲ್ ಮೀಡಿಯಾದ “ಹವಾ” – ಇದೆಲ್ಲವನ್ನೂ ಸಾಧಿಸಿದರೆ ಅದಕ್ಕೆ ತಪಸ್ಸೇ ಕಾರಣ.ಗಜೇಂದ್ರಸ್ವಾಮಿ ಎಂದರೆ ಕೇವಲ ಕಾಲಂ ಅಲ್ಲ.

ಅವರು ಮಣ್ಣಿನ ಮನುಷ್ಯ. ಮಾದರಿ ಕೃಷಿಕ, ದೈವಭಕ್ತ, ಸ್ನೇಹಕ್ಕೆ ಬೆಲೆ ಕೊಡುವ ಜೀವ. “ಗೀಚುಕವಿ” ಎಂಬ ಅಂಕಿತ ಅವರದ್ದು. ಬರೆಯುವುದು ಕಡಿಮೆ, ಆದರೆ ಇಳಿದಾಗ ನೇರ ಹೃದಯಕ್ಕೆ. “ನೆಗೆಟಿವ್ ಥಿಂಕಿಂಗ್” ಎಂಬ ಅಂಕಣದ ಮೂಲಕ ಅವರು ಮಾಡಿದ್ದು ಹೊಸ ಚಿಂತನೆಯ ಬೀಜ ಬಿತ್ತುವುದು.ಈ ನಾಡಿನಲ್ಲಿ ಸತ್ಯ ಹೇಳುವವನಿಗೆ ಟೀಕೆ ಇಲ್ಲದೆ ಇರುತ್ತದೆಯೇ? ಗಜೇಂದ್ರಸ್ವಾಮಿ ಬಗ್ಗೆ ಟೀಕೆಗಳು ಇಲ್ಲವೆಂದಲ್ಲ. ಆದರೆ ಆ ಟೀಕೆಗಳನ್ನೆಲ್ಲ ಮೀರಿ, ಟೇಕಪ್ ಆಗಿ ಬೆಳೆದವರು ಅವರು. ಮರಳು ಮಾಫಿಯಾ, ಕಲ್ಲು ಕ್ವಾರಿಯ ದೌರ್ಜನ್ಯ – ಇವೆಲ್ಲದರ ವಿರುದ್ಧ “ತುಂಗಾ ತರಂಗ”ದ ಮೂಲಕ ದನಿ ಎತ್ತಿದಾಗ ಅವರ ಬೆನ್ನಿಗೆ ನಿಂತಿದ್ದು ಓದುಗರ ನಂಬಿಕೆ.ಪತ್ರಿಕಾಗೋಷ್ಠಿ ಎಂದರೆ? ಅಲ್ಲಿ ಪ್ರಶ್ನೆ ಕೇಳುವವರು ಯಾರು ಎಂದರೆ ಉತ್ತರ ಒಂದೇ – “ಗಜೇಂದ್ರಸ್ವಾಮಿ”. ಇಕ್ಕಟ್ಟಿಗೆ ಸಿಲುಕಿಸುವ ಜಾಣ್ಮೆ, ಸತ್ಯದ ಪರ ನಿಲ್ಲುವ ಧೈರ್ಯ ಅವರಿಗೆ ಸಹಜ.ಆದಿಚುಂಚನಗಿರಿ ಶ್ರೀಗಳು ಸೇರಿದಂತೆ ಹಲವು ಶ್ರೀಗಳ ಆಶೀರ್ವಾದ, ಡಾ. ಜಿ. ನಾರಾಯಣಸ್ವಾಮಿ ಪ್ರಶಸ್ತಿ, ಕರ್ನಾಟಕ ರತ್ನ ಪ್ರಶಸ್ತಿ – ಎಲ್ಲವೂ ಬಂದವು. ಆದರೂ ಅವರು ಬದಲಾಗಲಿಲ್ಲ. ಯಾವ ಪಂಥಕ್ಕೂ ಅಂಟದ, ಮನಸ್ತಾಪವನ್ನು ಮರುದಿನವೇ ಮರೆಯುವ ದೊಡ್ಡ ಮನಸ್ಸು.”ಸಿಹಿಮೊಗ್ಗದ ಯುವ ಚಿಂತನ”ದಲ್ಲಿ 80ಕ್ಕೂ ಹೆಚ್ಚು ಯುವ ಪ್ರತಿಭೆಗಳಿಗೆ ಬೆಳಕಾದರು. ಕಾರಾಗೃಹದಲ್ಲೇ ಪುಸ್ತಕ ಬಿಡುಗಡೆ ಮಾಡಿದರು. ಕೊರೋನಾದ ಕರಾಳ ದಿನಗಳಲ್ಲೂ ಪತ್ರಿಕೆಯನ್ನು ನಿಲ್ಲಿಸಲಿಲ್ಲ. ಇದು ವೃತ್ತಿ ಅಲ್ಲ, ಇದು ಧರ್ಮ.ಅನೇಕ ದೌರ್ಬಲ್ಯಗಳು, ಅಡೆತಡೆಗಳ ನಡುವೆಯೂ ತುಂಗೆಯಂತೆ ಶಾಂತವಾಗಿ, ತರಂಗದಂತೆ ಕ್ರಿಯಾಶೀಲರಾಗಿ ಉಳಿದಿದ್ದಾರೆ. ಅವರ ಬದುಕೇ ಒಂದು ಪಾಠ.
ಇಂದು ಅವರು ಪ್ರಶಸ್ತಿ ಸ್ವೀಕರಿಸುತ್ತಿರುವಾಗ, ನೆನಪಾಗುವುದು ಅವರದೇ ಸಾಲುಗಳು:
ಸದಾ ದುಗುಡತನ
ಏನನ್ನೋ ಕಳೆದುಕೊಂಡ ಪರಿತಾಪ
ನೆಮ್ಮದಿಯೆಂಬ ಮರೀಚಿಕೆಯ ಹುಡುಕಿ
ರೊಕ್ಕವೆಂಬ ಮಾಯೆಗೆ ಬಲಿಯಾಗದೆ
ನಳನಳಿಸುವ ಬದುಕು ಹುಡುಕಾಟಕೊಂಡು
ಅಂತ್ಯ ಸಿಗಲಿ ಇದು ಸ್ವಾಮಿಯೇ ಗೀಚಿದ್ದಲ್ಲ. ತೋಚಿದ್ದನ್ನೇ ಅಂತರಂಗವನ್ನು ಹುಡುಕಿಕೊಂಡಿದ್ದು.ನಿನ್ನ ತರಂಗಗಳ ಅಂತರಂಗದ
ಅಂಕಣ ಚುರುಕಾಗಲಿ. ತುಂಗಾ ತರಂಗ ಎತ್ತರಕ್ಕೆ ಬೆಳೆಯಲಿ. ಗಜೇಂದ್ರಸ್ವಾಮಿ ಅವರ ಸಾಧನೆಗೆ ಮತ್ತೊಮ್ಮೆ ಅಭಿನಂದನೆಗಳು.
ಆರುಂಡಿ ಶ್ರೀನಿವಾಸ್
ಶಿಕ್ಷಣದ ನಂತರ ಪತ್ರಿಕೋದ್ಯಮ ಮತ್ತು ಕೃಷಿಯಲ್ಲಿ ತೊಡಗಿಸಿಕೊಂಡಿದ್ದು, ಅದು ಮುಟ್ಟದ ಸೊಪ್ಪಿಲ್ಲ ಎನ್ನುವಂತೆ ಇವರು ಪತ್ರಿಕೋದ್ಯಮದಲ್ಲಿ ಬರೆಯದೇ ಇರುವ ಆಯಾಮಗಳೇ ಇಲ್ಲ. ವರದಿಗಾರಿಕೆಯೊಂದಿಗೆ ಸಾಹಿತ್ಯಿಕ ಅಂಕಣ ಬರಹಕ್ಕೆ ಆದ್ಯತೆ ನೀಡಿ ತನ್ಮೂಲಕ ಪತ್ರಿಕೋದ್ಯಮದ ಮೌಲ್ಯವನ್ನು ಪ್ರಚುರಪಡಿಸುವ ಹುಡುಕಾಟದ ಹಾದಿ ಸಾಗಿದೆ. 2024ರ ಜುಲೈನಿಂದ ಪ್ರಕಟವಾಗುತ್ತಿರುವ ನೆಗೆಟಿವ್ ಥಿಂಕಿಂಗ್ ಅಂಕಣ ಓದುಗರಿಂದ ಮೆಚ್ಚುಗೆ ಪಡೆದು ಪ್ರಸಿದ್ಧಿಯಾಗಿದೆ.
ಪ್ರಜಾವಾಣಿ, ವಿಜಯ ಕರ್ನಾಟಕ, ಕನ್ನಡಪ್ರಭ, ಉದಯವಾಣಿ, ಸಂಯುಕ್ತ ಕರ್ನಾಟಕ, ಉಷಾಕಿರಣ, ವಿಜಯವಾಣಿ, ಡೆಕ್ಕನ್ ಹೆರಾಲ್ಡ್, ಸುಧಾ, ತರಂಗ, ಕರ್ಮವೀರ, ಮಯೂರ, ತುಷಾರ… ಹೀಗೆ ನಾಡಿನ ಪ್ರಮುಖ ನಿಯತಕಾಲಿಕೆಗಳಲ್ಲಿ ಲೇಖನ, ಬರಹ, ಕವನಗಳು, ಸುದೀರ್ಘವಾಗಿ ಪ್ರಕಟವಾಗಿವೆ.
ಆರುಂಡಿ ಶ್ರೀನಿವಾಸ್ ಅವರ ಬರಹ ಓದಿ
ಗಜೇಂದ್ರ ಸ್ವಾಮಿಯೊಳಗೊಬ್ಬ ಕವಿ, ಲೇಖಕ, ಬರಹಗಾರರನ್ನು ಬೆಳೆಸುವ ವ್ಯಕ್ತಿ ಇದ್ದಾನೆ. ಬರೆಯುವುದು ಮಾತ್ರವಲ್ಲ ಇತರರಿಗೆ ಪ್ರೊತ್ಸಾಹ ಕೊಡುವುದು
ಈತನ ಒಳ್ಳೆಯ ಗುಣ ಅದಕ್ಕೆ ನಾನೇ ಉದಾಹರಣೆ, ಆಗ ನಾನು ಪತ್ರಿಕೋದ್ಯಮ ಕ್ಕೆ ಹೊಸದಾಗಿ ಬಂದಿದ್ದೆ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಸ್ವಲ್ಪ ದೊಡ್ಡ ಲೇಖನ ಬರೆದಿದ್ದೆ. ಜನವಾರ್ತೆಯ ನನ್ನ ಸೀನಿಯರ್ ಅದನ್ನು ಪ್ರಕಟಿಸಲು ಆಗಲ್ಲ ಎಂದು ಬಿಟ್ಟ.
ಆಗ ಸ್ವಾಮಿ ಬಹುಶಃ ಕಂಠೀರವ ಪತ್ರಿಕೆಯಲ್ಲಿ ಸೀನಿಯರ್ ಆಗಿ ಕೆಲಸ ಮಾಡುತ್ತಿದ್ದ ಪರಿಚಯ ಇರಲಿಲ್ಲ. ಆದರೂ ಸಂಕೋಚದಿಂದ ಆತನಿಗೆ ಲೇಖನದ ಪ್ರತಿ ಕೊಟ್ಟೆ ಆದು ಹತ್ತು ಪುಟವಿತ್ತು…ಅವರು ಅದನ್ನು ಮೂರು ದಿನಗಳ ಕಾಲ ಪತ್ರಿಕೆಯಲ್ಲಿ ಪ್ರಕಟಿಸಿದರು. ನನ್ನ ಬರೆಯುವ ಬಯಕೆಯನ್ನು ಜೀವಂತಿಕೆಯಾಗಿಡಲು ಪ್ರೋತ್ಸಾಹ ಕೊಟ್ಟಿದ್ದು ನನಗೆ ನೆನಪಿದೆ.
ಆಗ ಪ್ರಜಾವಾಣಿ ಯಂತಹ ಪತ್ರಿಕೆಗಳಲ್ಲಿ ಶಿವಮೊಗ್ಗದಿಂದ ಲೇಖನ ಬರೆಯುತ್ತಿರುವವರಲಿ ಶಿ. ಜು. ಪಾಶ ಮತ್ತು ಸ್ವಾಮಿ ಪ್ರಮುಖರು. ನನಗೂ ಈ ಇಬ್ಬರ ಲೇಖನಗಳು ಖುಷಿಕೊಡುತ್ತಿದ್ದವು.
ನನಗೆ ನೆನಪಿದೆ ಸ್ವಾಮಿಯ ಭೂಮಿ ಹುಣ್ಣಿಮೆ ಕುರಿತ ಲೇಖನ ಪ್ರಜಾವಾಣಿಯಲ್ಲಿ ಪ್ರಕಟವಾಗಿತ್ತು. ತುಂಬಾ ಚೆನ್ನಾಗಿ ಬರೆದ್ದಿದ್ದ.
ನಂತರ ಅವರು ಹಲವು ಕೃತಿಗಳ ಕೃಷಿ ಮಾಡಿದ್ದಾರೆ. ಪ್ರಮುಖವಾಗಿ
ಮಕ್ಕಳಿಂದಲೇ ಬರೆಸಿದ ಹಳ್ಳಿ ಬೆಳಕು ಕವನ ಸಂಕಲನ,
ಸಿಹಿಮೊಗೆ ಯುವ ಸಿಂಚನ,
ಕವಿಗಳ ಕಲರವ,
ತೋಚಿದ್ದು ಗೀಚಿದ್ದು ಪುಸ್ತಕದ ರೂವಾರಿಯೂ ಈ ಸ್ವಾಮಿ.
ಹೀಗೆ ಕಸಾಪ ಜೊತೆ ಗುರುತಿಸಿಕೊಂಡು ಆನೇಕ
ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ.
ನೂರಾರು ಹೊಸ ಲೇಖಕರಿಗೆ ತಮ್ಮ ಪತ್ರಿಕೆಯಲ್ಲಿ ಸ್ಥಾನ ನೀಡಿ ಗುರುತಿಸಿ ಪ್ರೋತ್ಸಾಹ ನೀಡಿದ್ದಾರೆ.., ಬದುಕು ಹೀಗೆ ಬಹಳ ಸಲ ನಮ್ಮ ಬರವಣಿಗೆ ಯನ್ನೂ ಕಸಿದುಕೊಂಡು ಬಿಡುತ್ತೆ…
ಸ್ವಾಮಿಯೂ ಇದಕ್ಕೆ ಹೊರತಲ್ಲ…ಬರೆಯುವುದು ತುಂಬಾ ಕಡಿಮೆ ಮಾಡಿದ್ದಾರೆ…ಧ್ಯಾನಿಸಿ ಬರೆದಿದ್ದರೆ ಸ್ವಾಮಿ ಇಷ್ಟೊತ್ತಿಗೆ ಸಾಹಿತ್ಯ ಲೋಕದಲ್ಲಿ ರಾಜ್ಯ ಮಟ್ಟದಲ್ಲಿ ಮಿಂಚುತ್ತಿದ್ದ…,ಇನ್ನು ಮುಂದಾದರೂ ಹೆಚ್ಚು ಬರೆಯಲಿ ಎಂಬುದೇ ನನ್ನ ಆಸೆ…
ಶಿವಮೊಗ್ಗ ಜಿಲ್ಲೆಯ ಯುವ ಪ್ರತಿಭಾವಂತರನ್ನು ಗುರುತಿಸಿ ಅವರ ಪ್ರತಿಭೆಯನ್ನು ಅಕ್ಷರಗಳ ಮೂಲಕ ಅನಾವರಣಗೊಳಿಸಲು 2005ರಲ್ಲಿ ಮುಖ್ಯ ಸಂಪಾದಕರಾಗಿ ಸಿಹಿಮೊಗ್ಗದ ಯುವ ಚಿಂತನ ಕೃತಿಯನ್ನು ಹೊರ ತಂದಿರುತ್ತಾರೆ. ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಕಿಕ್ಕಿರಿದು ನೆರೆದಿದ್ದ ಪ್ರೇಕ್ಷಕರ ಸಮ್ಮುಖದಲ್ಲಿ ಬೆಳ್ಳಿ ನಂಜುಂಡಸ್ವಾಮಿ, ಆದಿಚುಂಚನಗಿರಿ ಮಠದ ಪ್ರಸನ್ನನಾಥ ಸ್ವಾಮೀಜಿ, ಮಾಜಿ ಸಚಿವ ಬಿ.ಸಿ. ಪಾಟೀಲ್ ಅವರ ಉಪಸ್ಥಿತಿಯಲ್ಲಿ ಈ ಕೃತಿ ಬಿಡುಗಡೆಗೊಳಿಸಿದರು. ಈ ಕೃತಿಯಲ್ಲಿ ಜಿಲ್ಲೆಯ 80ಕ್ಕೂ ಅಧಿಕ ಪ್ರತಿಭಾವಂತರ ಪ್ರತಿಭೆಯನ್ನು ಪರಿಚಯಿಸಲಾಗಿದ್ದು, ಇವರಲ್ಲಿ ಈಗ ಬಹುತೇಕರು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ.

2006ರಲ್ಲಿ ಶಿವಮೊಗ್ಗದಲ್ಲಿ ಕವಿ ಕೆ.ಎಸ್. ನಿಸಾರ್ ಅಹಮದ್ ಅವರ ಅಧ್ಯಕ್ಷತೆಯಲ್ಲಿ 3 ದಿನ ನಡೆದ ಅಖಿಲ ಭಾರತ 73ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಮಾಧ್ಯಮ ವಿಭಾಗದ ಮುಖ್ಯಸ್ಥನಾಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದು, ಸಮ್ಮೇಳನದ ಅಧ್ಯಕ್ಷರಾಗಿದ್ದ ಶ್ರೀ ನಿಸಾರ್ ಅಹಮ್ಮದ್ ಹಾಗೂ ರಾಷ್ಟ್ರ ಕವಿ ಜಿ.ಎಸ್. ಶಿವರುದ್ರಪ್ಪ, ಚಂಪಾ, ಚನ್ನವೀರ ಕಣವಿ, ನಾ. ಡಿಸೋಜಾ, ಮುಖ್ಯಮಂತ್ರಿ ಚಂದು ಮುಂತಾದರೊಂದಿಗೆ ಮಾಧ್ಯಮ ಸಂವಾದಕ್ಕೆ ವೇದಿಕೆ ಕಲ್ಪಿಸಿದ್ದು ವಿಶೇಷ.

2009ರಲ್ಲಿ ಸ್ನೇಹಿತ ದುರ್ಗಾ ಪ್ರಿಂಟರ್ಸ್ ಶ್ರೀನಿವಾಸ್ ಅವರ ಸಹಯೋಗದಲ್ಲಿ “ಕವಿಗಳ ಕಲರವ” ರಾಜ್ಯ ಮಟ್ಟದ ಕವನ ಸಂಕಲನ ಹೊರತರಲಾಯಿತು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮದಲ್ಲಿ ಈ ಪುಸ್ತಕ ಬಿಡುಗಡೆಗೆ ಅವಕಾಶ ನಿರಾಕರಿಸಲಾಯಿತು. ಇದನ್ನು ಸವಾಲಾತ್ಮಕವಾಗಿ ಸ್ವೀಕರಿಸಿ ನಾವು ರಾಜ್ಯದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಜಿಲ್ಲಾ ಕಾರಾಗೃಹ (ಜೈಲಿನಲ್ಲಿ) “ಡಾ. ರಹಮತ್ ತರೀಕೆರೆ” ಅವರಿಂದ ಪುಸ್ತಕ ಬಿಡುಗಡೆಗೊಳಿಸಿದ್ದು ವಿಶೇಷವಾಗಿದೆ.

2017ರಲ್ಲಿ “ತೋಚಿದ್ದು ಗೀಚಿದ್ದು” ಕವನ ಸಂಕಲನ ಹೊರತಂದಿದ್ದು, ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕುವೆಂಪು ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ, ಖ್ಯಾತ ಸಾಹಿತಿ ಶ್ರೀಕಂಠ ಕೂಡಿಗೆ ಅವರು ಮುನ್ನುಡಿ ಬರೆದದ್ದಲ್ಲದೆ ಅವರೇ ಪುಸ್ತಕ ಲೋಕಾರ್ಪಣೆಗೊಳಿಸಿದರು.
ಸಂದ ಪ್ರಶಸ್ತಿಗಳು :
2003ರಲ್ಲಿ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಅತ್ಯುತ್ತಮ ಗ್ರಾಮಾಂತರ ವರದಿಗಾರಿಕೆಗೆ ನೀಡಲ್ಪಡುವ ಡಾ. ಜಿ. ನಾರಾಯಣ ಸ್ವಾಮಿ ಪ್ರಶಸ್ತಿ ಪುರಸ್ಕಾರ. ೨೦೦೨ರಲ್ಲಿ ಪ್ರಜಾವಾಣಿಯ ಕರ್ನಾಟಕ ದರ್ಶನ ಪುರವಣಿಯಲ್ಲಿ ಪ್ರಕಟವಾಗಿದ್ದ “ಭದ್ರೆಯ ಸುಭದ್ರ ಬಾಹುಗಳಲ್ಲಿ ಅರಳಿದ ಹೂವುಗಳ ಹಳ್ಳಿ” ನುಡಿ ಚಿತ್ರಕ್ಕೆ ಈ ಪ್ರಶಸ್ತಿ ಲಭಿಸಿತ್ತು.೨೦೦೪ರಲ್ಲಿ ಪ್ರಜಾವಾಣಿಯ ಸಾಪ್ತಾಹಿಕ ಪುರವಣಿಯಲ್ಲಿ ಪ್ರಕಟವಾಗಿದ್ದ “ಮುಪ್ಪಾನೆ” ಕುರಿತ ಲೇಖನಕ್ಕೆ ೨೦೦೫ರಲ್ಲಿ ಅತ್ಯುತ್ತಮ ಅರಣ್ಯ ವರದಿ ಪಶಸ್ತಿ ಸಂದಿದೆ.
೨೦೨೦ರಲ್ಲಿ ಬೆಂಗಳೂರು ಕನ್ನಡ ಸಾಹಿತ್ಯ ಪರಿಷತ್ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ.
ಹಲವಾರು ಸ್ಥಳೀಯ ಸಂಘ- ಸಂಸ್ಥೆಗಳು ನಿರಂತರವಾಗಿ ಸನ್ಮಾನಿಸಿ, ಅಭಿನಂದಿಸಿವೆ.
ಪ್ರಸ್ತುತ ಪತ್ನಿ ವೀಣಾರಾಣಿ, ಪುತ್ರ ದರ್ಶನ್ ಜಿ ಸ್ವಾಮಿ, ಪುತ್ರಿ ದೀಪಿಕ ಜಿ ಸ್ವಾಮಿ ಅವರ ಜೊತೆ ಸವಾಲಿನ ಹೆಜ್ಜೆಯನ್ನು ಸಮರ್ಥವಾಗಿ ನಿಬಾಯಿಸುತ್ತಿದ್ದಾರೆ. ರೈತಾಪಿ ಬದುಕು, ಪರಿಸರದ ಕಾಳಜಿ ಜೊತೆ ಹೆಜ್ಜೆ ಹಾಕುತ್ತಿರುವ ಗಜೇಂದ್ರಸ್ವಾಮಿ ಸಾಧನೆ…, ಬೆಳೆದು ಬಂದ ರೀತಿಯ ತುಣುಕುಗಳಿವು.