ಶಿವಮೊಗ್ಗ: ದತ್ತಿ ಉಪನ್ಯಾಸಗಳು ವಿದ್ಯಾರ್ಥಿಗಳಲ್ಲಿ ಸೃಜನಶೀಲ ಅಭಿವ್ಯಕ್ತಿ, ಸಾಮಾಜಿಕ ಹೊಣೆಗಾರಿಕೆ ಮತ್ತು ವಿಚಾರಶೀಲತೆಯನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಿ. ಮಂಜುನಾಥ ಹೇಳಿದರು.
ನಗರದ ಅಕ್ಷರ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಅಕ್ಷರ ಪದವಿ ಪೂರ್ವ ಕಾಲೇಜು, ಭಾರತೀಯ ವೈದ್ಯಕೀಯ ಸಂಘ ಹಾಗೂ ಕ್ಷೇಮಾ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ನಡೆದ ದತ್ತಿ ನಿಧಿ ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ದತ್ತಿ ದಾನಿಗಳು ತಮಗೆ ಆದರ್ಶರಾದ ವ್ಯಕ್ತಿಗಳ ಸ್ಮರಣಾರ್ಥ ಆಯೋಜಿಸುವ ದತ್ತಿ ಉಪನ್ಯಾಸಗಳು ಸಮಾಜಕ್ಕೆ ಅಗತ್ಯವಾದ ಮೌಲ್ಯಗಳು, ಚಿಂತನೆಗಳು ಮತ್ತು ಜಾಗೃತಿಯನ್ನು ಹೊಸ ತಲೆಮಾರಿಗೆ ತಲುಪಿಸುವ ಮಹತ್ವದ ವೇದಿಕೆಗಳಾಗಿವೆ ಎಂದು ಹೇಳಿದರು.

ರಾಮಭಟ್ಟ ಮತ್ತು ದೇವಕಮ್ಮ ಸ್ಮಾರಕ ದತ್ತಿ ಅಂಗವಾಗಿ ದತ್ತಿದಾನಿ ಡಾ.ಕೆ.ಆರ್. ಶ್ರೀಧರ್ ಮಾತನಾಡಿ, ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಆರೋಗ್ಯ ಮತ್ತು ಪರಿಸರ ಎರಡೂ ಸಮಾನವಾಗಿ ಮುಖ್ಯವಾಗಿವೆ. ಶುದ್ಧ ಗಾಳಿ, ಶುದ್ಧ ನೀರು ಮತ್ತು ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದರ ಜೊತೆಗೆ ತುರ್ತು ಸಂದರ್ಭಗಳಲ್ಲಿ ಸಂಕಷ್ಟಕ್ಕೆ ಸಿಲುಕಿದವರನ್ನು ರಕ್ಷಿಸುವ ಮಾನವೀಯತೆ ಪ್ರತಿಯೊಬ್ಬರಲ್ಲೂ ಇರಬೇಕು ಎಂದು ಹೇಳಿದರು.
ಮನೋವೈದ್ಯ ಡಾ. ಹೆಚ್.ಎಲ್. ಶಶಿಧರ ಹಾಗೂ ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯದ ಡಾ. ಅನುಪ್ ರಾವ್ ಅವರು ಪ್ರಾತ್ಯಕ್ಷಿಕೆಯ ಮೂಲಕ ಪ್ರಥಮ ಚಿಕಿತ್ಸೆಯ ಮಹತ್ವವನ್ನು ವಿವರಿಸಿದರು. ಹೃದಯಾಘಾತ, ಅಪಘಾತ ಅಥವಾ ಆಕಸ್ಮಿಕವಾಗಿ ಯಾರಾದರೂ ಕುಸಿದು ಬಿದ್ದಾಗ, ಗಾಬರಿಯಾಗದೆ ಯಾವ ಕ್ರಮಗಳನ್ನು ಕೈಗೊಳ್ಳಬೇಕು, ರೋಗಿಯನ್ನು ಹೇಗೆ ಸುರಕ್ಷಿತವಾಗಿ ನಿರ್ವಹಿಸಬೇಕು ಎಂಬುದನ್ನು ಪ್ರಾಯೋಗಿಕವಾಗಿ ತೋರಿಸಿದರು. ವಿದ್ಯಾರ್ಥಿಗಳಲ್ಲಿ ಉಪವಾಸ, ಒತ್ತಡ ಅಥವಾ ಆರೋಗ್ಯ ಸಮಸ್ಯೆಯಿಂದ ಅಸ್ವಸ್ಥತೆ ಉಂಟಾದಾಗ ನೀಡಬೇಕಾದ ತುರ್ತು ನೆರವಿನ ಬಗ್ಗೆ ಮಾಹಿತಿ ನೀಡಿದರು.

ದೇವಂಗಿ ಶ್ರೀನಿವಾಸ ಗೌಡ ಸ್ಮಾರಕ ದತ್ತಿ ಅಂಗವಾಗಿ ಪದ್ಮಾವತಿ ಶ್ರೀನಿವಾಸಗೌಡ ಅವರ ಆಶಯದಂತೆ ‘ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರ ಸಾಹಿತ್ಯದಲ್ಲಿ ಪರಿಸರ ಪ್ರಜ್ಞೆ’ ವಿಷಯ ಕುರಿತು ಪ್ರವೀಣ್ ಬಿ.ಎನ್ ಮಾತನಾಡಿ, ಪ್ರಕೃತಿಯ ನಿಗೂಢತೆ ಮತ್ತು ವಿಸ್ಮಯವನ್ನು ಸಾಹಿತ್ಯದ ಮೂಲಕ ಜನಸಾಮಾನ್ಯರಿಗೆ ತಲುಪಿಸಿ ಪರಿಸರ ಸಂರಕ್ಷಣೆಯ ಕುರಿತು ಜಾಗೃತಿ ಮೂಡಿಸಿದ ಮಹತ್ವದ ಸಾಹಿತಿ ತೇಜಸ್ವಿಯವರು ಎಂದು ಹೇಳಿದರು.

ಅಕ್ಷರ ಶಿಕ್ಷಣ ಸಂಸ್ಥೆಯ ಶೈಕ್ಷಣಿಕ ಮುಖ್ಯಸ್ಥ ಹೆಚ್.ಟಿ. ಗಿರೀಶ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅಕ್ಷರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ನಂದೀಶ್ ಎಚ್.ಬಿ., ಸಾಹಿತಿ ವಿಜಯಾ ಶ್ರೀಧರ್, ಕಸಾಪ ಕಾರ್ಯದರ್ಶಿ ಬಾಲರಾಜ್ ಚುರ್ಚುಗುಂಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಉಪನ್ಯಾಸಕ ಧರ್ಮಪ್ಪ ನಿರೂಪಿಸಿ, ತೇಜಸ್ ಸ್ವಾಗತಿಸಿದರು.