ಶಿವಮೊಗ್ಗ : ಜಿಲ್ಲೆಯಲ್ಲೇ ಮೊದಲ ಬಾರಿಗೆ ಕೇಂದ್ರ ಸರ್ಕಾರದ ಅನುದಾನದಲ್ಲಿ ಸಂಚಾರಿ ವಿಧಿ-ವಿಜ್ಞಾನ ಪ್ರಯೋಗಾಲಯ ಇರುವ ವಾಹನ ಪೊಲೀಸ್ ಇಲಾಖೆಗೆ ಬಂದಿದ್ದು ಜಿಲ್ಲಾ ರಕ್ಷಣಾಧಿಕಾರಿ ನಿಖಿಲ್ ಬಿ.ಅವರು ಡಿಎಆರ್ ಆವರಣದಲ್ಲಿ ಚಾಲನೆ ನೀಡಿ ಮಾತನಾಡಿದರು.
ಈ ವಾಹನದಲ್ಲಿ ಅತ್ಯಾಧುನಿಕ ಸಲಕರಣೆಗಳಿದ್ದು, ಯಾವುದೇ ಕ್ರಿಮಿನಲ್ ಅಪರಾಧ ಸಂಭವಿಸಿದಾಗ ಅದರ ಪತ್ತೆಗೆ ಬೇಕಾಗುವ ಎಲ್ಲಾ ಅತ್ಯಾಧುನಿಕ ಸಲಕರಣೆಗಳು ಆ ವಾಹನದಲ್ಲಿ ಇದ್ದು ಅಪರಾಧಿಗಳನ್ನು ಬಂಧಿಸಲು ಸಾಕ್ಷಿಯನ್ನು ಅದು ಒದಗಿಸಲಿದೆ. ಅಲ್ಲದೆ ಶಿಕ್ಷೆಯ ಪ್ರಮಾಣ ಕೂಡ ಇದರಿಂದ ಜಾಸ್ತಿಯಾಗಲಿದೆ. ನುರಿತ ವಿಧಿವಿಜ್ಞಾನ ತಜ್ಞರ ತಂಡ ಈ ವಾಹನದಲ್ಲಿರುತ್ತಾರೆ. ಯಾವುದೇ ಕೃತ್ಯ ಸಂಭವಿಸಿದಾಗ ಸ್ಥಳೀಯ ಪೊಲೀಸರು ಮಾಹಿತಿ ನೀಡಿದ ತಕ್ಷಣ ಇವರು ಸ್ಥಳಕ್ಕೆ ದಾವಿಸಿ ನೆರವು ನೀಡಲಿದ್ದಾರೆ ಎಂದರು.

ಯಾವುದೇ ಕ್ರೈಮ್ ಸಂಭವಿಸಿದಾಗ ಸ್ಥಳದಲ್ಲಿ ಸಾಕ್ಷಿನಾಶವಾಗದಂತೆ ನೋಡಿಕೊಳ್ಳಬೇಕು. ಬೇರೆ ಯಾರೂ ಅಲ್ಲಿ ಹೋಗದಂತೆ ಎಚ್ಚರವಹಿಸಿ, ಸೂಕೋ ಟೀಮನ್ನು ಅಲ್ಲಿಯೇ ಕರೆಯಿಸಿ ಮಾಹಿತಿ ನೀಡಬೇಕು. ಅಧಿಕಾರಿಗಳು ಮೊದಲು ಕೃತ್ಯನಡೆದ ಸ್ಥಳದಲ್ಲಿ ಭದ್ರತೆ ಒದಗಿಸಿ ಸುತ್ತಲೂ ಟೇಲ್ ಕಟ್ಟಿ ವಿಧಿ-ವಿಜ್ಞಾನ ತಂಡವನ್ನು ಕರೆಯಿಸಿಕೊಳ್ಳಬೇಕು. ಇಡೀ ದೇಶದಲ್ಲೇ ಪೊಲೀಸ್ ಇಲಾಖೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಈ ಅತ್ಯಾಧುನಿಕ ವಾಹನವನ್ನು ನೀಡುತ್ತಿದೆ. ರಾಜ್ಯದಲ್ಲಿ ಶಿವಮೊಗ್ಗ ಜಿಲ್ಲೆಗೆ ಮೊದಲು ಈ ವಾಹನ ಸಿಕ್ಕಿದೆ. ಅಧಿಕಾರಿಗಳು ಕಾಟಾಚಾರಕ್ಕೆ ಕರ್ತವ್ಯವನ್ನು ಮಾಡದೆ ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಬೇಕು. ಹೈಕೋರ್ಟ್ ನೀಡಿದ ಮಾಹಿತಿಯಂತೆ ನಮ್ಮ ರಾಜ್ಯದಲ್ಲಿ ಶಿಕ್ಷೆಯ ಪ್ರಮಾಣ ಕೇವಲ ೧೮ರಷ್ಟು ಮಾತ್ರ ಇದೆ. ಕಾರಣ ಹಲವು ಪ್ರಮುಖ ಅಪರಾಧಗಳಲ್ಲಿ ಸಾಕ್ಷಿಗಳು ನಾಶವಾಗಿರುತ್ತದೆ. ಅದಕ್ಕಾಗಿ ಸುಸಜ್ಜಿತ ಸೂಕೋ ತಂಡ ಮತ್ತು ಫಾರೆನ್ಸಿಕ್ ವಾಹನವನ್ನು ನೀಡಲಾಗಿದೆ.

ಇದರ ಸದುಪಯೋಗ ಮಾಡಿಕೊಂಡು ಆರೋಪಿಗಳಿಗೆ ಶಿಕ್ಷೆ ನೀಡುವಲ್ಲಿ ಪಾತ್ರ ವಹಿಸಿ ಎಂದರು.
ಇದಕ್ಕೂ ಮುನ್ನ ಡಿಎಆರ್ ಸಭಾಂಗಣದಲ್ಲಿ ವಿಧಿ-ವಿಜ್ಞಾನ ಪ್ರಯೋಗಾಲಯದ ಸಂಪೂರ್ಣ ಮಾಹಿತಿ ಉಳ್ಳ ಪ್ರಾತ್ಯಕ್ಷಿಕೆಯನ್ನು ತಜ್ಞರು ನೆರವೇರಿಸಿದರು. ಈ ಸಂದರ್ಭದಲ್ಲಿ ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಕಾರ್ಯಪ್ಪ ಎ.ಜಿ., ಡಿವೈಎಸ್ಪಿಗಳಾದ ಶೀಲವಂತ ಹೊಸ್ಮನಿ, ಸಂಜೀವ್ಕುಮಾರ್ ಹಾಗೂ ನಗರದ ಇನ್ಸ್ಪೆಕ್ಟರ್ಗಳು, ಅಧಿಕಾರಿಗಳು, ಸೂಕೋ ಅಧಿಕಾರಿಗಳು, ವಿಧಿ-ವಿಜ್ಞಾನ ತಂಡದ ಅಧಿಕಾರಿಗಳು ಮತ್ತು ಪೊಲೀಸ್ ಸಿಬ್ಬಂದಿಗಳು ಉಪಸ್ಥಿತರಿದ್ದರು.