ಶಿವಮೊಗ್ಗ : ಪ್ಲಾಸ್ಟಿಕ್ ಸರ್ಜರಿ ವೈದ್ಯಕೀಯ ವಿಜ್ಞಾನವು ಎಷ್ಟೋ ಜನರ ಪಾಲಿಗೆ ಮರುಜೀವ ನೀಡುವ ಸಂಜೀವಿನಿಯಾಗಿದ್ದರೂ, ಇದರ ಬಗ್ಗೆ ಜನಸಾಮಾನ್ಯರಲ್ಲಿ ಇಂದಿಗೂ ಅನೇಕ ತಪ್ಪು ಕಲ್ಪನೆಗಳಿವೆ. ಪ್ಲಾಸ್ಟಿಕ್ ಸರ್ಜರಿ ಎಂದರೆ ಕೇವಲ ಬಾಹ್ಯ ಸೌಂದರ್ಯವಷ್ಟೇ, ಕಾಸ್ಮೆಟಿಕ್ ಸರ್ಜರಿ ಎಂದು ತಪ್ಪು ಕಲ್ಪನೆ ಇದೆ, ಕಾಸ್ಮೆಟಿಕ್ ಸರ್ಜರಿ ಪ್ಲಾಸ್ಟಿಕ್ ಸರ್ಜರಿಯ ಒಂದು ಭಾಗ ಅಷ್ಟೇ ಎಂದು ಸರ್ಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಪ್ಲಾಸ್ಟಿಕ್ ಶಸ್ತ್ರಚಿಕಿತ್ಸಾ ತಜ್ಞರಾದ ಡಾ.ಚೇತನ್ ಕುಮಾರ್ ನವಿಲೇಹಾಳ್ ಹೇಳಿದರು.

ನಗರದ ಸರ್ಜಿ ಸೂಪರ್ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ವಿಶ್ವ ಪ್ಲಾಸ್ಟಿಕ್ ಸರ್ಜರಿ ದಿನಾಚರಣೆಯ ಅಂಗವಾಗಿ ಬುಧವಾರ ಹಮ್ಮಿಕೊಂಡಿದ್ದ ವಿಶ್ವ ಪ್ಲಾಸ್ಟಿಕ್ ಸರ್ಜರಿ ದಿನ ಕಾರ್ಯಕ್ರಮದಲ್ಲಿ ಮಾತನಾಡಿ, ವಾಸ್ತವದಲ್ಲಿ, ಈ ಚಿಕಿತ್ಸೆಯು ಜನ್ಮಜಾತ ನ್ಯೂನತೆಗಳಾದ ಸೀಳು ತುಟಿ, ಸೀಳು ಅಂಗಳದಂತಹ ಹುಟ್ಟು ದೋಷಗಳನ್ನು ಸರಿಪಡಿಸಿ ಮಕ್ಕಳಿಗೆ ಸಹಜ ಜೀವನ ನೀಡುವುದು, ಅಪಘಾತದ ಗಾಯಗಳಾದ ರಸ್ತೆ ಅಪಘಾತಗಳಲ್ಲಿ ಅಥವಾ ಯಂತ್ರಗಳ ಬಳಿ ಕೆಲಸ ಮಾಡುವಾಗ ಹಾನಿಗೊಳಗಾದ ಮುಖ, ಕೈ, ಕಾಲು, ಬೆರಳುಗಳನ್ನು ಮರುನಿರ್ಮಾಣ ಮಾಡುವುದು. ಬೆಂಕಿಯಿಂದ ಅಥವಾ ರಾಸಾಯನಿಕಗಳಿಂದ ಸುಟ್ಟು ವಿರೂಪಗೊಂಡ ಚರ್ಮವನ್ನು ಸರಿಪಡಿಸುವುದು, ಕ್ಯಾನ್ಸರ್ ಗಡ್ಡೆಗಳನ್ನು ತೆಗೆದ ನಂತರ ದೇಹದಲ್ಲಿ ಉಂಟಾಗುವ ವಿಕಾರಗಳನ್ನು ಸರಿಪಡಿಸಿ, ಮೊದಲಿನ ರೂಪಕ್ಕೆ ತರುವುದು . ಅನೇಕ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಹೋಗಲಾಡಿಸಲು ಬಳಕೆಯಾಗುತ್ತಿದೆ

ಪ್ಲಾಸ್ಟಿಕ್ ಸರ್ಜರಿ ಎನ್ನುವುದು ಕೇವಲ ದೇಹದ ಹೊರಗಿನ ರೂಪವನ್ನು ಬದಲಾಯಿಸುವ ಚಿಕಿತ್ಸೆಯಲ್ಲ; ಅದು ಅಪಘಾತ, ಕಾಯಿಲೆ ಅಥವಾ ಹುಟ್ಟು ನ್ಯೂನತೆಗಳಿಂದ ಆತ್ಮವಿಶ್ವಾಸ ಕಳೆದುಕೊಂಡವರಲ್ಲಿ ಹೊಸ ಭರವಸೆಯನ್ನು ತುಂಬಿ, ಅವರಿಗೆ ಮರು ಜನ್ಮ ನೀಡುವ ಕಲೆ ಮತ್ತು ವಿಜ್ಞಾನ. ಈ ಬಗ್ಗೆ ಯಾವುದೇ ತಪ್ಪು ಕಲ್ಪನೆಗಳು ಬೇಡ. ಸೂಕ್ತ ಸಮಯದಲ್ಲಿ ತಜ್ಞ ವೈದ್ಯರನ್ನು ಸಂಪರ್ಕಿಸಿ ಎಂದು ಹೇಳಿದರು

ಸರ್ಜಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಪ್ರಶಾಂತ್ ವೀರಯ್ಯ ಮಾತನಾಡಿ ಪ್ಲಾಸ್ಟಿಕ್ ಸರ್ಜರಿ ಎಂಬ ಪದದಲ್ಲಿ ಪ್ಲಾಸ್ಟಿಕ್ ಇರುವುದನ್ನು ನೋಡಿ ನಮ್ಮಲ್ಲಿ ಹಲವರು ಪ್ಲಾಸ್ಟಿಕ್ ಸರ್ಜರಿಗೆ ಪ್ಲಾಸ್ಟಿಕ್ ಬಳಸುತ್ತೇವೆ ಎಂದುಕೊಂಡಿದ್ದಾರೆ, ಆದರೆ ಪ್ಲಾಸ್ಟಿಕ್ ಸರ್ಜರಿ ಎಂಬ ಪದ ಗ್ರೀಕ್ ಭಾಷೆಯ ‘ಪ್ಲಾಸ್ಟಿಕೋಸ್’ ಎಂಬುದರಿಂದ ಬಂದಿದೆ. ಇದರ ಅರ್ಥ ‘ಬೇಕಾದಂತಹ ಆಕೃತಿಗೆ ತರುವುದು’ ಅಥವಾ ‘ಮರುರೂಪ ನೀಡುವುದು’ ಈ ಚಿಕಿತ್ಸೆಯಲ್ಲಿ ನಾವು ದಿನಬಳಕೆಯಲ್ಲಿ ಉಪಯೋಗಿಸುವ ಕ್ಯಾರಿ ಬ್ಯಾಗ್ ಅಥವಾ ಸಿಂಥೆಟಿಕ್ ವಸ್ತುಗಳನ್ನು ಬಳಸಲಾಗುತ್ತದೆ ಎಂಬುದು ಅನೇಕರ ತಪ್ಪು ಕಲ್ಪನೆ. ಆದರೆ ಇದಕ್ಕೂ, ಸಾಮಾನ್ಯ ಬಳಕೆಯ ಪ್ಲಾಸ್ಟಿಕ್ಗೂ ಯಾವುದೇ ಸಂಬಂಧವಿಲ್ಲ. ಪ್ಲಾಸ್ಟಿಕ್ ಸರ್ಜರಿ ತಜ್ಞರಾದ ಡಾ. ಚೇತನ್ ಅವರು ಸರ್ಜಿ ಆಸ್ಪತ್ರೆಯಲ್ಲಿ ನಾವು ನೋಡಿದ ಹಾಗೆ ಬಹಳ ಕಷ್ಟಕರ ಪ್ರಕರಣಗಳನ್ನು ಯಶಸ್ವಿಯಾಗಿ ನಿರ್ವಹಣೆ ಮಾಡಿದ್ದಾರೆ ಎಂದು ಹೇಳಿದರು.
ಈ ವೇಳೆ ಸರ್ಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ವಾದಿರಾಜ್ ಕುಲಕರ್ಣಿ ಅವರು, ಸರ್ಜಿ ಆಸ್ಪತ್ರೆಯ ಆಡಳಿತಾಧಿಕಾರಿಗಳಾದ ಮುರಳಿಧರ್ ರಾವ್ ಕುಲಕರ್ಣಿ ಅವರು, ಸರ್ಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಅರವಳಿಕೆ ತಜ್ಞರಾದ ಅರ್ಜುನ್ ಭಾಗವತ್ ಅವರು ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.