ಶಿವಮೊಗ್ಗ : ಪರಿಸರ ಮಾರಕ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಪರವಾಗಿ ನಿಯಾಸ್(ನ್ಯಾಷನಲ್ ಇನ್ಸಿಟ್ಯೂಟ್ ಆಫ್ ಅಡ್ವಾನ್ಸಡ್ ಸ್ಟಡೀಸ್, ಬೆಂಗಳೂರು) ಸಂಸ್ಥೆ ವರದಿ ನೀಡಿದೆ ಎಂದು ಕೆಪಿಸಿಎಲ್ ಅಧಿಕಾರಿಗಳು ಸಾರ್ವಜನಿಕರು ಹಾಗೂ ನ್ಯಾಯಾಲಯವನ್ನು ದಾರಿತಪ್ಪಿಸುತ್ತಿದ್ದಾರೆ ಎಂದು ರಾಷ್ಟ್ರಭಕ್ತರ ಬಳಗದ ಪ್ರಮುಖ ಶ್ರೀಕಾಂತ್ ಆರೋಪಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಿಯಾಸ್ ಒಂದು ಸ್ವಾಯತ್ತ ಸಂಸ್ಥೆಯಾಗಿದ್ದು ಇದರ ವರದಿಗೆ ಯಾವುದೇ ಕಾನೂನು ಮಾನ್ಯತೆ ಇಲ್ಲ. ಕೇಂದ್ರ ಸರ್ಕಾರದ ಪರಿಸರ ಇಲಾಖೆಯ ಡಾ.ಎಚ್.ಎಸ್.ಸಿಂಗ್ ಮತ್ತು ಪ್ರೊ.ಸುಕುಮಾರನ್ ನೀಡಿರುವ ವರದಿಯಲ್ಲಿ ಈ ಯೋಜನೆಯ ಬಗ್ಗೆ ಸ್ಪಷ್ಟವಾದ ವಿರೋಧ ವ್ಯಕ್ತವಾಗಿದೆ. ಕೇಂದ್ರ ಸರ್ಕಾರದ ಪರಿಸರ ಇಲಾಖೆಯ ಹಿರಿಯ ಅಧಿಕಾರಿ ಪ್ರಣೀತಾ ಕೌಲ್ ಅವರೂ ಈ ಯೋಜನೆ ಪರಿಸರಕ್ಕೆ ಮಾರಕ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ. ಹೀಗಿದ್ದಾಗ ಪರಿಸರದ ಬಗ್ಗೆ ವರದಿ ನೀಡಲು ಯಾವುದೇ ಕಾನೂನು ಮಾನ್ಯತೆ ಇಲ್ಲದ ನಿಯಸ್ನಿಂದ ಕೆಪಿಸಿಎಲ್ ವರದಿ ತರಿಸಿಕೊಂಡಿದ್ದಾದರೂ ಏಕೆ ಎಂದು ಕಾರವಾಗಿ ಪ್ರಶ್ನಿಸಿದರು.

ಕೇಂದ್ರ ವನ್ಯಜೀವಿ ಮಂಡಳಿಯ ೮೫ನೇ ಸ್ಥಾಯಿಸಮಿತಿ ಸಭೆಯಲ್ಲಿ ಸಮಿತಿ ಸದಸ್ಯರೇ ಈ ಯೋಜನೆಗೆ ವಿರೋಧ ವ್ಯಕ್ತಪಡಿಸಿದ ಸಲುವಾಗಿ ಸ್ಥಳ ಪರಿಶೀಲನೆ ನಡೆಸಲು ನಿಯಸ್ ಸಂಸ್ಥೆಗೆ ಸೂಚಿಸಲು ರಾಜ್ಯ ಸರ್ಕಾರಕ್ಕೆ ಎನ್ಬಿಡಬ್ಲ್ಯೂಎಲ್ನವರು ಸೂಚಿಸಿದ್ದರು. ನಿಯಾಸ್ ಯಾವಾಗ ಯೋಜನಾ ಪ್ರದೇಶಕ್ಕೆ ಭೇಟಿನೀಡಿ, ಪರಿಶೀಲನೆ ನಡೆಸಿದೆ ಎಂಬ ಬಗ್ಗೆ ಮಾಹಿತಿ ನೀಡಬೇಕು. ಜೂನ್ ೨೩ರಂದು ನಿಯಾಸ್ ವರದಿ ರಾಜ್ಯ ಸರ್ಕಾರಕ್ಕೆ ಸಲ್ಲಿಕೆಯಾಗಿದೆ ಎಂಬ ಮಾಹಿತಿ ಬಂದಿದೆ. ಆದರೆ ಕೆಪಿಸಿಎಲ್ ಈ ವರದಿಯನ್ನು ಸಾರ್ವಜನಿಕರಿಗೆ ಬಿಡುಗಡೆಗೊಳಿಸಿಲ್ಲ. ರಾಜ್ಯ ಸರ್ಕಾರವೇ ನಿಯಾಸ್ನಿಂದ ತನಗೆ ಬೇಕಾದ ಹಾಗೆ ವರದಿಗಳನ್ನು ತಯಾರಿಸಿಕೊಂಡಿದೆ. ಈ ಯೋಜನೆಯಿಂದ ಪರಿಸರಕ್ಕೆ ಆಗುವ ಸಾಧಕ-ಬಾಧಕಗಳ ಬಗ್ಗೆ ಪರಿಶೀಲಿಸಿರುವ ಬಗ್ಗೆ ಯಾವುದೇ ಖಾತ್ರಿ ಇಲ್ಲ ಎಂದರು.

ಸುಪ್ರೀಂಕೋರ್ಟ್ನ ಅಡಿಯಲ್ಲಿ ಕಾರ್ಯನಿರ್ವಹಿಸುವ ಸಿಇಸಿ ಸದಸ್ಯರು ಸುಮೋಟೋ ಸ್ಥಳ ಪರಿಶೀಲನೆ ನಡೆಸಿದ್ದರು ವರದಿಯನ್ನು ಇನ್ನೂ ಬಹಿರಂಗಪಡಿಸಿಲ್ಲ. ಅಲ್ಲದೆ ಕೇಂದ್ರ ಸರ್ಕಾರವೂ ಈ ಯೋಜನೆಗೆ ಕೇಂದ್ರ ತಜ್ಞರ ತಂಡ ಒಪ್ಪಿಗೆ ಸೂಚಿಸಿಲ್ಲ ಎಂದು ಇತ್ತೀಚೆಗೆ ಹೈಕೋರ್ಟ್ಗೆ ಅಫಿಡವಿಟ್ ಸಲ್ಲಿಸಿದೆ. ತರಾತುರಿಯಲ್ಲಿ ರಾಜ್ಯ ಸರ್ಕಾರ ನಿಯಾಸ್ನಿಂದ ವರದಿ ತರಿಸಿಕೊಂಡು ತಮಗೆ ಪೂರಕವಾಗುವ ರೀತಿಯಲ್ಲಿ ಮಾಧ್ಯಮಗಳಿಗೆ ಹೇಳಿಕೆಗಳನ್ನು ಬಿಡುಗಡೆಗೊಳಿಸಿದೆ. ಕೆಪಿಸಿಎಲ್ ನಿಯಾಸ್ನ ಸಂಪೂರ್ಣ ವರದಿಯನ್ನು ಮೊದಲು ಸಾರ್ವಜನಿಕಗೊಳಿಸಬೇಕು ಎಂದು ಆಗ್ರಹಿಸಿದರು.
ರಾಷ್ಟ್ರಭಕ್ತ ಬಳಗದ ಮುಖಂಡ ಕೆ.ಎಸ್.ಈಶ್ವರಪ್ಪ ಮಾತನಾಡಿ, ಯಾವುದೇ ಕಾರಣಕ್ಕೂ ಈ ಯೋಜನೆ ಆಗಲು ಬಿಡುವುದಿಲ್ಲ. ಈಗಾಗಲೇ ೭೫ ಸಾವಿರ ಜನರು ಲಿಖಿತವಾಗಿ ಇದನ್ನು ವಿರೋಧಿಸಿದ್ದಾರೆ. ಮಠಾಧೀಶರು, ಪರಿಸರ ತಜ್ಞರು, ಸಾರ್ವಜನಿಕರು ಈ ಯೋಜನೆಯನ್ನು ಈಗಾಗಲೇ ಕಟುವಾಗಿ ವಿರೋಧಿಸಿದ್ದಾರೆ. ಈ ಮಧ್ಯೆ ಶಾಸಕ ಬೇಳೂರು ಗೋಪಾಲಕೃಷ್ಣ, ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯನ್ನು ಮಾಡೇ ಮಾಡ್ತೀವಿ ಎಂದಿದ್ದಾರೆ. ಇವರು ಸಚಿವರೂ ಅಲ್ಲ, ಪರಿಸರ ತಜ್ಞರೂ ಅಲ್ಲ, ಕೇವಲ ಶಾಸಕರು. ಎಲ್ಲರೂ ಬೇಡವೆನ್ನುತ್ತಿರುವಾಗ ಇವರದ್ದೇನು ? ಎಂದು ಪ್ರಶ್ನಿಸಿದ ಅವರು ಸಚಿವ ಜಾರ್ಜ್ ಕುಣಿದಂತೆ ನೀವು ಕುಣಿಯಬೇಡಿ ಎಂದು ವ್ಯಂಗ್ಯವಾಡಿದರು.

ಎಸ್ಐಆರ್ ಪ್ರಕ್ರಿಯೆಯಲ್ಲಿ ಬಿಎಲ್ಓ, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಹಗಲಿರುಳೆನ್ನದೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರ ಸಂಭಾವನೆ, ಭತ್ಯೆ, ಇತ್ಯಾದಿಗಳನ್ನು ಹೆಚ್ಚಿಸಬೇಕು ಎಂದು ಚುನಾವಣಾ ಆಯೋಗವನ್ನು ಒತ್ತಾಯಿಸಿದರು.
ಖ್ಯಾತ ಪರಿಸರ ತಜ್ಞ ಪ್ರೊ.ಬಿ.ಎಂ.ಕುಮಾರಸ್ವಾಮಿ ಮಾತನಾಡಿ, ಕೆಪಿಸಿಎಲ್ ಅವರು ಹೇಳಿಕೊಟ್ಟ ಗಿಣಿಪಾಠವನ್ನು ನಿಯಾಸ್ ಮಾಡಿದೆ. ಅದರಂತೆ ಮಾಧ್ಯಮಗಳಲ್ಲಿ ಪ್ರಕಟವಾಗುವಂತೆ ನೋಡಿಕೊಳ್ಳಲಾಗಿದೆ. ವನ್ಯಜೀವಿ, ಪರಿಸರ ನಾಶ, ಮೊದಲಾದವುಗಳ ಬಗ್ಗೆ ನಿಯಾಸ್ ಯಾವುದೇ ಅಧ್ಯಯನವನ್ನೂ ಮಾಡಿಲ್ಲ. ಕೆಪಿಸಿಎಲ್ ನಿಯಾಸ್ ಮೂಲಕ ಸಾರ್ವಜನಿಕರಿಗೆ ಹಸಿ ಸುಳ್ಳು ಹೇಳಿಸುತ್ತಿದೆ. ವನ್ಯಜೀವಿ ಸಂರಕ್ಷಿತ ಪ್ರದೇಶದಲ್ಲಿಯೇ ಪರಿಸರ ಮಾರಕ ಯೋಜನೆ ಜಾರಿಗೊಳಿಸುತ್ತೇವೆ ಎಂಬ ಹಠ ಕೆಪಿಸಿಎಲ್ ಮತ್ತು ರಾಜ್ಯ ಸರ್ಕಾರಕ್ಕೆ ಏಕೆ ಎಂದು ವಾಗ್ಧಾಳಿ ನಡೆಸಿದರು.
ಪ್ರತಿಕಾಗೋಷ್ಠಿಯಲ್ಲಿ ರಾಷ್ಟ್ರಭಕ್ತ ಬಳಗದ ಪ್ರಮುಖರಾದ ಕೆ.ಈ.ಕಾಂತೇಶ್, ಎಸ್.ಬಿ.ಅಶೋಕ್ಕುಮಾರ್, ಎಂ.ಜಿ.ಬಾಲು, ಶಿವಾಜಿ, ಜನಾರ್ಧನ್ ಪೈ, ಪರಿಸರ ರಮೇಶ್, ಶ್ರೀಕಾಂತ್, ಮೋಹನ್ ಜಾದವ್, ಕಾರ್ಣಿಕ್, ಪ್ರಕಾಶ್ ಮೊದಲಾದವರಿದ್ದರು.
ಎಸ್ಐಆರ್ ಪ್ರಕ್ರಿಯೆ ಸುಗಮಕ್ಕೆ ರಾಷ್ಟ್ರಭಕ್ತರ ಬಳಗದಿಂದ ಜುಲೈ ೧೬ರಂದು ಬೆಳಿಗ್ಗೆ ೧೦ ಗಂಟೆಗೆ ನಗರದ ಎಸ್ಪಿಎಂ ರಸ್ತೆಯಲ್ಲಿ ಎರಡನೇ ಸೇವಾ ಕೇಂದ್ರವನ್ನು ಆರಂಭಿಸಲಾಗುವುದು. ಈಗಾಗಲೇ ಶುಭ ಮಂಗಳ ಸಮುದಾಯ ಭವನದಲ್ಲಿ ಮೊದಲನೇ ಸೇವಾ ಕೇಂದ್ರ ಆರಂಭವಾಗಿ ಸಾರ್ವಜನಿಕರಿಂದ ಅಭೂತಪೂರ್ವ ಬೆಂಬಲ ದೊರೆಯುತ್ತಿದೆ. ಕೇವಲ ನಮ್ಮ ಜಿಲ್ಲೆಯವರಷ್ಟೇ ಅಲ್ಲ, ಹೊರಗಿನ ಜಿಲ್ಲೆಯವರು, ನೆರೆಯ ರಾಜ್ಯದವರೂ ಈ ಸೇವಾ ಕೇಂದ್ರದಿಂದ ಮಾಹಿತಿಯನ್ನು ಪಡೆದು, ಎಸ್ಐಆರ್ ಪ್ರಕ್ರಿಯೆಯಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳುತ್ತಿದ್ದಾರೆ. ಬಸವ ಕೇಂದ್ರದ ಶ್ರೀಗಳು ಸೇವಾ ಕೇಂದ್ರವನ್ನು ಉದ್ಘಾಟಿಸಲಿದ್ದಾರೆ. ರಾಷ್ಟ್ರಭಕ್ತರ ಬಳಗದ ಅಧ್ಯಕ್ಷರಾದ ಕೆ.ಎಸ್.ಈಶ್ವರಪ್ಪ ಈ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.
-ಕೆ.ಈ.ಕಾಂತೇಶ್, ರಾಷ್ಟ್ರಭಕ್ತರ ಬಳಗದ ಮುಖಸ್ಥ