ಶಿವಮೊಗ್ಗ, ಜುಲೈ 09 : ಸುರಕ್ಷಿತ, ಸ್ನೇಹಪರ ವಾತಾವರಣದಲ್ಲಿ ಮಕ್ಕಳ ಸಮಸ್ಯೆಗಳಿಗೆ ನ್ಯಾಯ ಒದಗಿಸಲು ಉಚಿತ ಕಾನೂನು ಸಲಹಾ ಕೇಂದ್ರವನ್ನು ದೇಶದಲ್ಲೇ ಮೊಟ್ಟಮೊದಲ ಬಾರಿಗೆ ಜಿಲ್ಲೆಯಲ್ಲಿ ಸ್ಥಾಪಿಸಲಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಮಂಜುನಾಥ ಜಿ.ಎ ತಿಳಿಸಿದರು.
ರಾಷ್ಟ್ರೀಯ ಮತ್ತು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಹಯೋಗದಲ್ಲಿ ಮಕ್ಕಳ ಕಲ್ಯಾಣ ಸಮಿತಿಯಲ್ಲಿನ ಮಕ್ಕಳಿಗೆ ಮತ್ತು ಪೋಷಕರಿಗಾಗಿ ಸರ್ಕಾರಿ ಬಾಲಕಿಯರ ಬಾಲಮಂದಿರದಲ್ಲಿ ನೂತನವಾಗಿ ಸ್ಥಾಪಿಸಲಾಗಿರುವ ಉಚಿತ ಕಾನೂನು ಸಲಹಾ ಕೇಂದ್ರವನ್ನು ಗುರುವಾರದಂದು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬರ ಜೀವನದಲ್ಲಿ ಬಾಲ್ಯ ಅತಿ ಮುಖ್ಯ ಪಾತ್ರ ವಹಿಸುತ್ತದೆ. ಅದು ಮನುಷ್ಯನ ಜೀವನವನ್ನೇ ನಿರ್ಧರಿಸುತ್ತದೆಯಾದ್ದರಿಂದ ಮಕ್ಕಳಿಗೆ ಉತ್ತಮ ಬಾಲ್ಯ ಒದಗಿಸುವುದು ಅತ್ಯವಶ್ಯವಾಗಿದೆ. ಉತ್ತಮ ಬಾಲ್ಯ ಪಡೆದ ಮಕ್ಕಳು ಸರ್ವಾಂಗೀಣ ಅಭಿವೃದ್ದಿ ಹೊಂದಿ, ದೇಶದ ಪ್ರಗತಿಯಲ್ಲಿ ಕೊಡುಗೆ ನೀಡುವವರಾಗುತ್ತಾರೆ.

ಹಲವಾರು ಕಾರಣಗಳಿಂದ ಪೋಷಕರಿಂದ, ಕುಟುಂಬಗಳಿAದ ದೂರ ಉಳಿಯುವ ಪ್ರಸಂಗ ಒದಗಿ ಬರುವ ಮಕ್ಕಳಿಗೆ ಮಕ್ಕಳ ಕಲ್ಯಾಣ ಸಮಿತಿಯಲ್ಲಿ ಮಾರ್ಗದರ್ಶನ, ಕಾನೂನಿನ ನೆರವು ಒದಗಿಸುವ ಉದ್ದೇಶದಿಂದ ಉಚಿತ ಕಾನೂನು ಸಲಹಾ ಕೇಂದ್ರವನ್ನು ಸ್ಥಾಪನೆ ಮಾಡಲಾಗಿದ್ದು, ಸಮಿತಿ ಮುಂದೆ ಬರುವ ಮಕ್ಕಳಿಗೆ ಮತ್ತು ಅವರ ಪೋಷಕರಿಗೆ ಅವರ ಕಾನೂನುಬದ್ಧ ಹಕ್ಕುಗಳ ಬಗ್ಗೆ ಉಚಿತವಾಗಿ ಸಲಹೆ ನೀಡಲಾಗುವುದು ಎಂದರು.
ಮಕ್ಕಳು ಮತ್ತು ಮಹಿಳೆಯರ ಹಕ್ಕುಗಳ ಸಂರಕ್ಷಣೆಯಲ್ಲಿ ಕಾನೂನು ಸೇವೆಗಳ ಪ್ರಾಧಿಕಾರ ಸದಾ ಮುಂದಿರುತ್ತದೆ ಎಂದ ಅವರು ಸಂಘರ್ಷಕ್ಕೆ ಒಳಗಾದ, ಕಾನೂನಿನ ಅವಶ್ಯಕತೆ ಇರುವ ಮಕ್ಕಳಿಗೆ ಕೇಂದ್ರದ ವತಿಯಿಂದ ಉತ್ತಮ ಸಲಹೆ, ಸೌಲಭ್ಯಗಳನ್ನು ಸಮರ್ಪಕವಾಗಿ ಒದಗಿಸುವಂತೆ ತಿಳಿಸಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಸಂತೋಷ್ ಎಂ. ಎಸ್. ಪ್ರಾಸ್ತಾವಿಕ ನುಡಿಗಳನ್ನಾಡಿ, ಮನೆ ಮನೆಗೆ ನ್ಯಾಯ ಒದಗಿಸಬೇಕು ಹಾಗೂ ಎಲ್ಲ ಜನರನ್ನು ತಲುಪಬೇಕೆಂಬ ಉದ್ದೇಶದಿಂದ ರಾಷ್ಟಿçÃಯ ಕಾನೂನು ಸೇವೆಗಳ ಪ್ರಾಧಿಕಾರ ಕಾರ್ಯ ನಿರ್ವಹಿಸುತ್ತಿದೆ. ಪ್ರಾಧಿಕಾರವು ಮಕ್ಕಳ ಸ್ನೇಹಿ ಕಾನೂನು ಸೇವೆ 2024 ನ್ನು ಸಹ ಒದಗಿಸಿದ್ದು ಆರೈಕೆ ಮತ್ತು ರಕ್ಷಣೆ ಅಗತ್ಯವಿರುವ ಮಕ್ಕಳಿಗೆ ಸಲಹೆ, ಸಲವತ್ತುಗಳು ಮತ್ತು ಉಚಿತವಾಗಿ ಕಾನೂನು ನೆರವು ನೀಡಲಾಗುತ್ತದೆ.
ಉಚಿತ ಕಾನೂನು ಸಲಹಾ ಕೇಂದ್ರದಲ್ಲಿ ಆರೈಕೆ, ರಕ್ಷಣೆ ಅಗತ್ಯವಿರುವ ಮಕ್ಕಳ ಹಕ್ಕುಗಳನ್ನು ಎತ್ತಿ ಹಿಡಿಯುವುದಕ್ಕಾಗಿ ಹಾಗೂ ಕಾನೂನು ಪ್ರಕ್ರಿಯೆಗಳ ಬಗ್ಗೆ ಅರಿವಿಲ್ಲದ ಬಡ ಮತ್ತು ಅಸಹಾಯಕ ಮಕ್ಕಳಿಗೆ ಸುಲಭವಾಗಿ ನ್ಯಾಯ ಸಿಗುವಂತೆ ಮಾಡಲು ಉಚಿತ ಕಾನೂನು ಸಲಹಾ ಕೇಂದ್ರವನ್ನು ಸ್ಥಾಪಿಸಲಾಗಿದೆ.

ಕೇಂದ್ರವು ಮಕ್ಕಳ ಕಲ್ಯಾಣ ಸಮಿತಿ ಮುಂದೆ ಬರುವ ಮಕ್ಕಳಿಗೆ ಮತ್ತು ಅವರ ಪೋಷಕರಿಗೆ ಅವರ ಕಾನೂನುಬದ್ಧ ಹಕ್ಕುಗಳ ಬಗ್ಗೆ ಉಚಿತವಾಗಿ ಸಲಹೆ ನೀಡುವುದು. ನ್ಯಾಯಾಲಯಗಳಲ್ಲಿ ಅಥವಾ ಇತರ ಪ್ರಾಧಿಕಾರಗಳ ಮುಂದೆ ಮಕ್ಕಳ ಪರವಾಗಿ ವಾದಿಸಲು ಉಚಿತ ಸರ್ಕಾರಿ ವಕೀಲರನ್ನು ನಿಯೋಜಿಸಲಾಗುವುದು. ಪೋಕ್ಸೋ ಪ್ರಕರಣದಲ್ಲಿ ನೆರವು, ಲೈಂಗಿಕ ದೌರ್ಜನ್ಯಕ್ಕೊಳಗಾದ ಮಕ್ಕಳಿಗೆ ತಕ್ಷಣದ ಕಾನೂನು ರಕ್ಷಣೆ, ಪರಿಹಾರ ಮತ್ತು ನ್ಯಾಯಾಲಯದ ಪ್ರಕ್ರಿಯೆಗಳಲ್ಲಿ ವಿಶೇಷ ಕಾಳಜಿಯೊಂದಿಗೆ ಸಹಾಯ ಮಾಡುವುದು ಸೇರಿದಂತೆ ಮಕ್ಕಳ ಹಕ್ಕುಗಳ ರಕ್ಷಣೆಯಲ್ಲಿ ನೆರವಾಗಲಿದೆ ಎಂದ ಅವರು ರಾಷ್ಟಿçÃಯ ಕಾನೂನು ಸೇವಾ ಸಹಾಯವಾಣಿ ಸಂಖ್ಯೆ 15100 ನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಕರೆ ನೀಡಿದರು.
ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರಾದ ತಾಜುದ್ದೀನ್ ಖಾನ್ ಮಾತನಾಡಿ, ಉಚಿತ ಕಾನೂನು ಸಲಹಾ ಕೇಂದ್ರವು ರಾಷ್ಟçದಲ್ಲೇ ಮೊಟ್ಟಮೊದಲ ಬಾರಿಗೆ ನಮ್ಮ ಜಿಲ್ಲೆಯಲ್ಲಿ ಸ್ಥಾಪನೆಯಾಗುತ್ತಿದ್ದು, ಕಾನೂನಿನ ಅರಿವಿಲ್ಲದೆ, ಶೋಷಣೆಗೆ ಒಳಗಾಗುತ್ತಿರುವ ಮಕ್ಕಳಿಗೆ ನೆರವು, ರಕ್ಷಣೆ ನೀಡಲಿದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಕೈಜೋಡಿಸಿದಾಗ ಮಕ್ಕಳ ಹಕ್ಕುಗಳ ರಕ್ಷಣೆ ಸಾಧ್ಯವಾಗುತ್ತದೆ ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿಗಳು ಹಾಗೂ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳಾದ ಶಶಿರೇಖಾ ಮಾತನಾಡಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳು ಪ್ರತಿ ದಿನ ಜಿಲ್ಲೆಯಾದ್ಯಂತ ಮಹಿಳೆಯರು ಮತ್ತು ಮಕ್ಕಳ ಹಕ್ಕುಗಳ ರಕ್ಷಣೆಯ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಮಹಿಳೆಯರು ಮತ್ತು ಮಕ್ಕಳನ್ನು ಎಲ್ಲರೂ ಗೌರವಯುತವಾಗಿ ಕಂಡಲ್ಲಿ ಅಪರಾಧಗಳೇ ಕಡಿಮೆಯಾಗುತ್ತವೆ ಎಂದ ಅವರು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರವು ಮಹಿಳೆಯರು ಮತ್ತು ಮಕ್ಕಳ ರಕ್ಷಣೆಯಲ್ಲಿ ಸದಾ ಬೆಂಬಲವಾಗಿ, ಸಹಕಾರ ನೀಡುತ್ತಾ ಬಂದಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಪ್ಯಾನಲ್ ವಕೀಲರಾದ ವನಿತ ಎನ್.ಎಸ್., ಮಕ್ಕಳ ಕಲ್ಯಾಣ ಸಮಿತಿ, ಬಾಲ ನ್ಯಾಯ ಮಂಡಳಿಯ ಸದಸ್ಯರು, ವಿವಿಧ ಇಲಾಖಾ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಸರ್ಕಾರಿ ಬಾಲಕಿಯರ ಬಾಲಮಂದಿರದ ಅಧೀಕ್ಷಕರಾದ ಜ್ಯೋತಿಕಲಾ ಸ್ವಾಗತಿಸಿದರು. ಸರ್ಕಾರಿ ಬಾಲಕರ ಬಾಲಮಂದಿರದ ಅಧೀಕ್ಷಕರಾದ ಸಾವಿತ್ರಾ ತುಮರಿಕೊಪ್ಪ ವಂದನಾರ್ಪಣೆ ಮಾಡಿದರು.