ಶಿವಮೊಗ್ಗ : ಕಳೆದ ೩ ತಿಂಗಳಿನಿಂದ ಮಹಾರಾಷ್ಟ್ರದಲ್ಲಿ ರಾಜ್ಯದ ಅಡಿಕೆ ಲಾರಿಗಳನ್ನು ಎಫ್ಎಸ್ಎಸ್ಐಎಲ್ ಅಧಿಕಾರಿಗಳು ತಡೆ ಹಿಡಿದಿದ್ದಿರಿಂದ ಜಿಲ್ಲೆಯ ಅಡಿಕೆ ಬೆಳೆಗಾರರಲ್ಲಿ ಅಲ್ಲೋಲ-ಕಲ್ಲೋಲವಾಗಿ ಆತಂಕ ಉಂಟಾಗಿತ್ತು. ಈ ಹಿನ್ನಲೆಯಲ್ಲಿ ಸಂಸದ ಬಿ.ವೈ. ರಾಘವೇಂದ್ರ ಹಾಗೂ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿಯವರ ವಿಶೇಷ ಪ್ರಯತ್ನದಿಂದ ಸಮಸ್ಯೆ ಪರಿಹಾರವಾಗಿದೆ ಎಂದು ಅಡಿಕೆ ಮಾರಾಟ ಸಹಕಾರ ಸಂಘಗಳ ಮಹಾಮಂಡಲದ ಅಧ್ಯಕ್ಷರಾದ ಶಾಸಕ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

ಅವರು ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಿನ್ನೆ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿಯವರ ಗೃಹ ಕಛೇರಿಯಲ್ಲಿ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ಬರಮಾಡಿಕೊಂಡು, ಅವರ ಸಮ್ಮುಖದಲ್ಲಿ ಮಹಾರಾಷ್ಟ್ರದ ಅಧಿಕಾರಿಗಳು ೫೦ಕ್ಕೂ ಹೆಚ್ಚು ಅಡಿಕೆ ಲಾರಿಗಳನ್ನು ತಡೆದು ವಶಕ್ಕೆ ಪಡೆದಿದ್ದರಿಂದ ಕಳೆದ ೪ ತಿಂಗಳಿನಿಂದ ಜಿಲ್ಲೆಯ ಅಡಿಕೆಯನ್ನು ಬೇರೆ ರಾಜ್ಯಗಳಿಗೆ ಕೊಂಡೊಯ್ಯಲು ಲಾರಿ ಮಾಲೀಕರು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಅಡಿಕೆ ಮಂಡಿ ವರ್ತಕರು ಖರೀದಿ ನಿಲ್ಲಿಸಿದ್ದಾರೆ. ಬೆಲೆ ನಿಗಧಿಪಡಿಸುತ್ತಿಲ್ಲ. ಜಿಲ್ಲೆಯಿಂದ ಹೊರಗೆ ಅಡಿಕೆ ಹೋಗುತ್ತಿಲ್ಲ. ಪರಿಣಾಮ ಅಡಿಕೆಗೆ ಬೆಲೆ ಇಲ್ಲದೆ ಬೆಳೆಗಾರರು ಕಂಗಾಲಾಗಿದ್ದಾರೆ. ವಾಸ್ತವವಾಗಿ ಇದು ಮಹಾರಾಷ್ಟ್ರಕ್ಕೆ ಹೋಗುತ್ತಿರುವ ಅಡಿಕೆಯಲ್ಲ, ಮಹಾರಾಷ್ಟ್ರದ ಮೂಲಕ ದೆಹಲಿ, ಗುಜರಾತ್, ರಾಜಸ್ಥಾನ ಮತ್ತು ಉತ್ತರ ಪ್ರದೇಶಕ್ಕೆ ಈ ವೇಬಿಲ್ ಮೂಲಕ ನೇರವಾಗಿ ಬೇರೆ ರಾಜ್ಯಗಳಿಗೆ ಹೋಗುತ್ತಿರುವುದರಿಂದ ಮಹಾರಾಷ್ಟ್ರಕ್ಕೆ ಅನ್ವಯವಾಗುತ್ತಿಲ್ಲ. ಮತ್ತು ಅಡಿಕೆಯ ಬಗ್ಗೆ ಅದನ್ನು ಅವಲಂಭಿಸಿದ ಬೆಳೆಗಾರರ ಬಗ್ಗೆ ಹಾಗೂ ರಾಷ್ಟ್ರಕ್ಕೆ ಅಡಿಕೆ ವ್ಯವಹಾರದಿಂದ ಸಲ್ಲುತ್ತಿರುವ ತೆರಿಗೆ ಹಾಗೂ ೧೦ ಜಿಲ್ಲೆಗಳಲ್ಲಿ ಅಡಿಕೆ ಬೆಳೆಗಾರರ ಸಂಕಷ್ಟಗಳು ಇನ್ನಿತರ ವಿವರವನ್ನು ಮಹಾರಾಷ್ಟ್ರ ಮುಖ್ಯಮಂತ್ರಿಗಳಿಗೆ ನೀಡಲಾಯಿತು. ಕೂಡಲೇ ಅವರು ಪ್ರತಿಕ್ರಿಯಿಸಿ ಈಗಾಗಲೇ ನಾನು ಮಹಾರಾಷ್ಟ್ರದ ಅಧಿಕಾರಿಗಳಿಗೆ ಈ ಬಗ್ಗೆ ಸೂಚನೆ ನೀಡಿದ್ದೇನೆ. ವಶಕ್ಕೆ ಪಡೆದ ಲಾರಿಗಳನ್ನು ಬಿಡಲಾಗುವುದು. ಎಫ್ಐಆರ್ ಆಗಿದ್ದರೆ ಕೋರ್ಟ್ನಿಂದ ಬಿಡಿಸಲು ಕೂಡ ನೆರವಿನ ಭರವಸೆ ನೀಡಿದ್ದಾರೆ. ಇನ್ನು ಮುಂದೆ ಅಡಿಕೆ ಲಾರಿಗಳಿಗೆ ಯಾವುದೇ ತೊಂದರೆಯಾದರೆ ಹಿರಿಯ ಐಎಎಸ್ ಅಧಿಕಾರಿ ಲೋಕೇಶ್ ಚಂದ್ರ ಅವರನ್ನು ಸಂಪರ್ಕಿಸುವಂತೆ ತಿಳಿಸಿದ್ದಾರೆ. ಇದು ನಮ್ಮ ಮಹಾಮಂಡಲಕ್ಕೆ ಸಿಕ್ಕ ಜಯವಾಗಿದೆ ಎಂದರು.

ಅಡಿಕೆ ಮಹಾಮಂಡಲ ರೈತರ, ಅಡಿಕೆ ಬೆಳೆಗಾರರ ಸುರಕ್ಷಾ ಚಕ್ರವಾಗಿ ಕೆಲಸ ಮಾಡುತ್ತಿದೆ. ಅಡಿಕೆಗೆ ಬೆಲೆ ಬಂದ ಮೇಲೆ ೧೦ ಜಿಲ್ಲೆಗಳ ರೈತರು ನೆಮ್ಮದಿಯ ಬದುಕು ಸಾಗಿಸುತ್ತಿದ್ದು, ಜಿಲ್ಲೆಯಲ್ಲಿ ಅಭಿವೃದ್ಧಿಯಾಗಿದೆ. ಅಡಿಕೆ ಸುಲಿಯುವ ಯಂತ್ರಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಸಬ್ಸಿಡಿ ನೀಡುತ್ತದೆ. ಆದರೆ ಯಂತ್ರದಲ್ಲಿ ಸುಲಿಯುವಾಗ ಅಡಿಕೆಗೆ ಗಚ್ಚು ಬೀಳುತ್ತಿದ್ದು, ಅದನ್ನು ಆಹಾರ ಅಧಿಕಾರಿಗಳು ೨ನೇ ದರ್ಜೆಯ ಅಡಿಕೆ ಎಂದು ಭಾವಿಸುತ್ತಿದ್ದಾರೆ. ಅವರಿಗೆ ಈ ಬಗ್ಗ ಅರಿವಿಲ್ಲ. ಮತ್ತು ಈ ವೇಬಿಲ್ ಸಮಸ್ಯೆ ಕೂಡ ಇತ್ತು. ಗುಣಮಟ್ಟದ ಅಡಿಕೆ ನೀಡಲು ಕೂಡ ರೈತರ ಮತ್ತು ವರ್ತಕರ ಸಭೆ ಕರೆದು ಜಾಗೃತಿ ಮೂಡಿಸಲಾಗಿದೆ. ಗುಣಮಟ್ಟ ಕಳಪೆ ಬಗ್ಗೆ ಎಚ್ಚರಿಕೆ ನೀಡಲಾಗಿದೆ. ಅಡಿಕೆ ಒಂದು ವೇಳೆ ಕಳಪೆ ಗುಣಮಟ್ಟದಿಂದಾಗಿ ಅಥವಾ ರಾಸಾಯನಿಕ ಬೆರಕೆಯಿಂದ ಬ್ಯಾನ್ ಆದರೆ ಮತ್ತೆ ಏನೂ ಮಾಡಲಾಗುವುದಿಲ್ಲ. ಈ ಬಗ್ಗೆ ಎಚ್ಚರವಹಿಸಬೇಕು ಎಂದರು ಮತ್ತು ನಿನ್ನೆ ದೆಹಲಿಯಲ್ಲಿ ನಡೆದ ಸಭೆಯಲ್ಲಿ ಸಂಸದರಾದ ಬಿ.ವೈ.ರಾಘವೇಂದ್ರ, ಕ್ಯಾಪ್ಟನ್ ಬ್ರಿಜೇಶ್ ಪಟೇಲ್, ಶ್ರೀನಿವಾಸ್ ಪೂಜಾರಿ, ಬಂಟ್ವಾಳ ಶಾಸಕ ರಾಜೇಶ್ ನಾಯಕ್, ಮ್ಯಾಮ್ಕೋಸ್ ಉಪಾಧ್ಯಕ್ಷ ಮಹೇಶ್ ಹೆಚ್.ಎಸ್., ಶ್ರೀಕಾಂತ್ ಬರುವೆ, ಪದ್ಮರಾಜ್, ಡಾ.ಬಿ.ವಿ. ಸತ್ಯನಾರಾಯಣ್, ತುಮ್ಕೋಸ್ನ ಶಿವಕುಮಾರ್ ಹೆಚ್.ಎಸ್. ಇದ್ದರು.

ಅವರೆಲ್ಲರ ನಿಯೋಗ ಹೋಗಿ ಅಡಿಕೆ ಬೆಳೆಗಾರರ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸಿದ್ದೇವೆ. ಉತ್ತಮ ಫಲಿತಾಂಶ ಬಂದಿದೆ. ಎಲ್ಲರಿಗೂ ಮಹಾಮಂಡಲದ ವತಿಯಿಂದ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಹೇಶ್ ಹೆಚ್.ಎಸ್., ಸೂರ್ಯನಾರಾಯಣ, ಶ್ರೀಕಾಂತ್ ಬರುವೆ, ಶರ್ಮಾ ಮತ್ತಿತರರಿದ್ದರು.