ಶಿವಮೊಗ್ಗ, ಜು.08:
ಸರ್ಕಾರಿ ಮತ್ತು ಅನುದಾನಿತ ಶಾಲಾ ಶಿಕ್ಷಕರನ್ನು ವಿಶೇಷ ಸಮಗ್ರ ಮತಪಟ್ಟಿ ಪರಿಷ್ಕರಣೆ (ಎಸ್ಐಆರ್) ಕಾರ್ಯಕ್ಕೆ ನಿಯೋಜಿಸಿರುವುದನ್ನು ಮಾಜಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ತೀವ್ರವಾಗಿ ವಿರೋಧಿಸಿದ್ದಾರೆ.
ಶಿಕ್ಷಕರಿಗೆ ಶಾಲೆಯಲ್ಲಿ ಪಾಠ ಮಾಡುವುದು ಬಿಟ್ಟು ಬೇರೆ ಕೆಲಸ ವಹಿಸುವುದು ಸರಿಯಲ್ಲ. ಇದರಿಂದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡಿದಂತಾಗುತ್ತದೆ. ಇದು ಸರ್ಕಾರಿ ಶಾಲೆಗಳಲ್ಲಿನ ಶಿಕ್ಷಣದ ಗುಣಮಟ್ಟ ಕುಸಿತಕ್ಕೂ ಕಾರಣವಾಗಲಿದೆ.

ಈ ಹಿಂದೆ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ʻಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆʼಗೆ ಶಿಕ್ಷಕರನ್ನು ಬಳಕೆ ಮಾಡಿಕೊಳ್ಳುವುದನ್ನು ಶಿಕ್ಷಣ ಸಚಿವನಾಗಿದ್ದ ನಾನು ವಿರೋಧಿಸಿದ್ದೆ. ಯಾವುದೇ ಕಾರಣಕ್ಕೂ ಶಿಕ್ಷಕರಿಗೆ ಅನ್ಯ ಒತ್ತಡದ ಕೆಲಸ ನೀಡಲೇಬಾರದು ಎಂದು ಹೇಳಿದ್ದೆ. ಎಸ್ಐಆರ್ನ ಸಂದರ್ಭದಲ್ಲಿ ಬಿಎಲ್ಒಗಳು ಯಾವ ರೀತಿಯ ಒತ್ತಡಕ್ಕೆ ಒಳಗಾಗುತ್ತಿದ್ದಾರೆ ಎಂಬುದು ಈಗಾಗಲೇ ಎಲ್ಲರಿಗೂ ತಿಳಿದ ಸಂಗತಿ. ಈ ಕಾರ್ಯವನ್ನು ಶಿಕ್ಷಕರಿಗೆ ನೀಡಿದರೆ ಖಂಡಿತವಾಗಿಯೂ ಅವರು ಶಾಲೆಯಲ್ಲಿ ಸರಿಯಾಗಿ ಪಾಠ ಮಾಡಲು ಸಾಧ್ಯವೇ ಇಲ್ಲ. ಒಂದು-ಒಂದೂವರೆ ತಿಂಗಳು ಶಾಲೆಗಳಲ್ಲಿ ಪಾಠ ತಪ್ಪಿದರೆ ವಿದ್ಯಾರ್ಥಿಗಳಿಗೆ ಆಗುವ ಅನ್ಯಾಯಕ್ಕೆ ಯಾರು ಹೊಣೆ? ಚುನಾವಣಾ ಆಯೋಗ ಕೂಡಲೇ ಎಸ್ಐಆರ್ ಚಟುವಟಿಕೆಗೆ ಶಿಕ್ಷಕರ ಬಳಸಿಕೊಳ್ಳುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದ್ದಾರೆ.

ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯುವಂತೆ ನೋಡಿಕೊಳ್ಳುವುದು ಶಿಕ್ಷಣ ಇಲಾಖೆಯ ಆದ್ಯ ಕರ್ತವ್ಯ. ಹೀಗಾಗಿ ಎಸ್ಐಆರ್ನಲ್ಲಿ ತೊಡಗಿರುವ ಶಿಕ್ಷಕರೂ ನಿಯಮಿತವಾಗಿ ಪಾಠ ಮಾಡಬೇಕೆಂದು ಶಿಕ್ಷಣ ಇಲಾಖೆಯು ಹೊರಡಿಸಿರುವ ಆದೇಶದಲ್ಲಿ ಯಾವುದೇ ತಪ್ಪಿಲ್ಲ.
ಪಾಠ ಮಾಡಬೇಕಾದ ಶಿಕ್ಷಕರನ್ನು ಬೋಧಕೇತರ ಕಾರ್ಯಗಳಿಗೆ ನಿಯೋಜಿಸುವುದನ್ನು ತಡೆಯುವ ಉದ್ದೇಶದಿಂದ ನಾನು ಸಚಿವನಾಗಿದ್ದಾಗ ʻಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು (ಶಿಕ್ಷಕರ ವರ್ಗಾವಣೆ ನಿಯಂತ್ರಣ) (ತಿದ್ದುಪಡಿ) ಮಸೂದೆʼಯನ್ನು ಜಾರಿಗೆ ತಂದಿದ್ದೆ. ನಮ್ಮ ಶಿಕ್ಷಕರನ್ನು ಸಮೀಕ್ಷಕರನ್ನಾಗಿಸುವುದನ್ನು ತಡೆಯಲು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕಾದ ಅಗತ್ಯವಿದೆ ಎಂದಿದ್ದಾರೆ.