ಶಿವಮೊಗ್ಗ : ಮಳೆಯಿಂದ ಇಲ್ಲಿನ ನ್ಯೂ ಮಂಡ್ಲಿಯಲ್ಲಿ ಮನೆ ಕುಸಿದ ಸ್ಥಳಕ್ಕೆ ಶಾಸಕ ಎಸ್.ಎನ್. ಚನ್ನಬಸಪ್ಪ ಭೇಟಿ ನೀಡಿ ಸಂತ್ರಸ್ತರಿಗೆ ತಕ್ಷಣ ಪರಿಹಾರ ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಕ್ಷೇತ್ರದ ಸಾರ್ವಜನಿಕರ ದೈನಂದಿನ ಕಷ್ಟ-ಸುಖಗಳಿಗೆ ತಕ್ಷಣ ಸ್ಪಂದಿಸಿ, ನೈಸರ್ಗಿಕ ವಿಕೋಪಗಳಿಂದ ತೊಂದರೆಗೊಳಗಾದ ಕುಟುಂಬಗಳಿಗೆ ಮಾನವೀಯ ನೆಲೆಯಲ್ಲಿ ಆಸರೆಯಾಗುವುದು ನಮ್ಮ ಜವಾಬ್ದಾರಿಯಾಗಿದೆ ಎಂದ ಅವರು, ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಶಿವಮೊಗ್ಗ ನಗರದ ನ್ಯೂ ಮಂಡ್ಲಿ ಬಡಾವಣೆಯಲ್ಲಿ ಮನೆ ಕುಸಿದಿರುವ ಜಾಗಕ್ಕೆ ಶಾಸಕರು ಕಂದಾಯ ಇಲಾಖೆಯ ಅಧಿಕಾರಿಗಳೊಂದಿಗೆ ಇಂದು ಖುದ್ದಾಗಿ ಭೇಟಿ ನೀಡಿ ಜಂಟಿ ಪರಿಶೀಲನೆ ನಡೆಸಿದ ಬಳಿಕ ಪರಿಶೀಲನೆ ನಡೆಸಿದರು.

ಮನೆ ಹಾನಿಗೊಳಗಾಗಿ ಆಶ್ರಯ ಕಳೆದುಕೊಂಡಿರುವ ಕುಟುಂಬದ ಅಹವಾಲನ್ನು ಆಪ್ತವಾಗಿ ಆಲಿಸಿದ ಶಾಸಕರು, ಪರಿಸ್ಥಿತಿಯ ಗಾಂಭೀರ್ಯತೆಯನ್ನು ಮನಗಂಡು ಧೈರ್ಯ ತುಂಬಿದರು. ನಂತರ, ಸ್ಥಳದಲ್ಲಿದ್ದ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ ಶಾಸಕರು, ಮಳೆ ಹಾನಿ ಸಂತ್ರಸ್ತರಿಗೆ ಪರಿಹಾರ ವಿತರಿಸುವಲ್ಲಿ ಯಾವುದೇ ರೀತಿಯ ವಿಳಂಬ ಧೋರಣೆಯನ್ನು ಸಹಿಸುವುದಿಲ್ಲ. ತಕ್ಷಣವೇ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ, ಕುಟುಂಬಕ್ಕೆ ಗರಿಷ್ಠ ಮಟ್ಟದ ಪರಿಹಾರ ಸಿಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದರು.

ಈ ಸಂದರ್ಭದಲ್ಲಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಜಗನ್ನಾಥ್, ಪ್ರಮುಖರಾದ ವಿಜಯೇಂದ್ರ, ರಾಘವೇಂದ್ರ, ಮಹಾನಗರ ಪಾಲಿಕೆಯ ಅಧಿಕಾರಿಗಳು, ಕಂದಾಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.