ಶಿವಮೊಗ್ಗ : ಹಾಲಿನ ದರ ಹೆಚ್ಚಿಸಲು ಹಾಗೂ ಬಾಕಿ ಉಳಿದ ಪ್ರೋತ್ಸಾಹ ಧನ ಬಿಡುಗಡೆ ಮಾಡಲು ಆಗ್ರಹಿಸಿ ಶಿವಮೊಗ್ಗ ಜಿಲ್ಲಾ ಹಾಲು ಉತ್ಪಾದಕರ ಹಿತರಕ್ಷಣಾ ವೇದಿಕೆಯ ವತಿಯಿಂದ ಇಂದು ಅಮೀರ್ ಅಹ್ಮದ್ ಸರ್ಕಲ್ನಿಂದ ಡಿಸಿ ಕಛೇರಿಯವರೆಗೆ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಹಾಲು ಉತ್ಪಾದಕರ ಪ್ರೋತ್ಸಾಹ ಧನವನ್ನು ಸರ್ಕಾರ ನಮ್ಮ ಹೋರಾಟದ ಫಲವಾಗಿ ಸ್ವಲ್ಪ ಭಾಗ ಮಾತ್ರ ನೀಡಿದೆ. ಇನ್ನೂ ಐದು ತಿಂಗಳ ಹಣ ಬರಬೇಕಾಗಿದ್ದು, ಕೂಡಲೇ ಈ ಹಣವನ್ನು ಬಿಡುಗಡೆ ಮಾಡಬೇಕು ಮತ್ತು ಪ್ರೋತ್ಸಾಹ ಧನವನ್ನು ಹೆಚ್ಚಿಸಬೇಕು ಎಂದು ಆಗ್ರಹಿಸಿದರು.
ಹಾಲು ಉತ್ಪಾದಕರ ಒಳಿತಿಗಾಗಿ ಪ್ರತೀ ಲೀಟರ್ ಹಾಲಿಗೆ ೨೦ ರೂ. ಹಾಗೂ ಪ್ರೋತ್ಸಾಹ ಧನವನ್ನು ೫ ರೂ.ಗಳಿಂದ ೧೦ ರೂ.ಗಳಿಗೆ ಏರಿಸಬೇಕು. ಈಗಾಗಲೇ ಹಾಲು ಉತ್ಪಾದಕರಿಗೆ ಹೆಚ್ಚು ಖರ್ಚು ಆಗುತ್ತಿದ್ದು, ಖರ್ಚನ್ನು ಹೊಂದಾಣಿಕೆ ಮಾಡಲು ಸಾಧ್ಯವಾಗುತ್ತಿಲ್ಲ. ಹಿಂಡಿಯ ಬೆಲೆ ದುಪ್ಪಟ್ಟಾಗಿದೆ. ಜೊತೆಗೆ ಖರ್ಚು ಕೂಡ ಹೆಚ್ಚಾಗುತ್ತಿದೆ. ಕೊಟ್ಟಿಗೆ, ನೀರು, ವಿದ್ಯುತ್, ಹಾಲು ಕರೆಯುವ ಯಂತ್ರ, ಕೂಲಿಕಾರರ ವೇತನ ಇವೆಲ್ಲವೂ ಹೆಚ್ಚಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಇದರ ಜೊತೆಗೆ ಪ್ರಕೃತಿಯ ವಿಕೋಪ ಎಂಬಂತೆ ರಾಸುಗಳಿಗೆ ಅಪಘಾತಗಳು ಆಗುತ್ತಿವೆ. ಅನೇಕ ಬಾರಿ ರಾಸುಗಳು ಮರಣ ಹೊಂದುತ್ತಿವೆ. ಇದು ಅತ್ಯಂತ ಕಷ್ಠಕರವಾಗಿದೆ. ಹಾಗಾಗಿ ಶಿಮೂಲ್ ಅಧ್ಯಕ್ಷರಾದ ವಿದ್ಯಾಧರ್ ಅವರು ಈ ಬಗ್ಗೆ ಗಮನಹರಿಸಬೇಕು. ಮತ್ತು ಕೆಎಂಎಫ್ ಅಧ್ಯಕ್ಷರನ್ನು ಕೂಡಲೇ ನೇಮಕ ಮಾಡಬೇಕು ಎಂದು ಒತ್ತಾಯಿಸಿದರು.
ಶಿಮುಲ್ ಮಾಜಿ ಅಧ್ಯಕ್ಷ ಜಗದೀಶ್ ಮಾತನಾಡಿ, ಬಾಕಿ ಇರುವ ಪ್ರೋತ್ಸಾಹ ಧನವನ್ನು ಕೂಡಲೇ ಸರ್ಕಾರ ಬಿಡುಗಡೆ ಮಾಡಬೇಕು. ಖಾಸಗಿ ಹಾಲು ಮಾರಾಟಗಾರರು ತಾಲ್ಲೂಕು ಒಂದರಲ್ಲೇ ಎರಡು ಖಾಸಗಿ ಕಂಪನಿಗಳು ರೈತರಿಗೆ ಆಮಿಷ ತೋರಿಸಿ ಹಾಲು ಹಾಕಿಸಿಕೊಳ್ಳುತ್ತಿದ್ದಾರೆ. ಹೆಚ್ಚಿನ ದರದ ಆಮಿಷಕ್ಕೆ ರೈತರು ಅವರಿಗೆ ಹಾಲು ಕೊಡುತ್ತಿದ್ದಾರೆ. ಆದರೆ ನಿಜವಾಗಿ ರೈತರಿಗೆ ಸಿಗುವ ಸೌಲಭ್ಯಗಳು ಇನ್ನು ಮುಂದೆ ಈ ರೀತಿಯಾದರೆ ಸಿಗುವುದಿಲ್ಲ. ಖಾಸಗಿಯವರು ಹಾಲಿನ ದರ ಈಗಾಗಲೇ ಹೆಚ್ಚಿಸಿದ್ದಾರೆ. ಕೆಎಂಎಫ್ ದರ ಹೆಚ್ಚಿಸಿಲ್ಲ. ಉತ್ಪಾದನೆಗೆ ತಕ್ಕ ಬೆಲೆ ಸಿಗುತ್ತಿಲ್ಲ. ಅನೇಕರು ಹಸುವನ್ನು ಮಾರಾಟ ಮಾಡುತ್ತಿದ್ದಾರೆ. ಇದು ನಗರದ ಜನರಿಗೆ ಅರ್ಥವಾಗಬೇಕು. ಬ್ರ್ಯಾಂಡಿ, ವಿಸ್ಕಿ, ಕುಡಿಯುವ ನೀರಿಗೂ ಜನ ಬೆಲೆ ಕೊಡುತ್ತಾರೆ. ಆದರೆ ಗುಣಮಟ್ಟದ ಹಾಲಿಗೆ ಬೆಲೆ ಹೆಚ್ಚಳ ಆದಾಗ ಮಾಧ್ಯಮದವರೂ ಸೇರಿದಂತೆ ಹಂಗಾಮ ಎಬ್ಬಸುತ್ತಾರೆ. ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿ ಇಲ್ಲ. ಇನ್ನು ಸುಮ್ಮನಿರಲು ಸಾಧ್ಯವಿಲ್ಲ. ಮುಖ್ಯಮಂತ್ರಿಗಳು ಕೂಡಲೇ ಗಮನಹರಿಸಬೇಕು ಎಂದರು. ಈ ಸಂದರ್ಭದಲ್ಲಿ ಹಲವಾರು ಮುಖಂಡರು ಹಾಲು ಉತ್ಪಾದಕರ ಸಮಸ್ಯೆಗಳ ಬಗ್ಗೆ ಗಮನ ಸೆಳೆದರು.

ಪ್ರತಿಭಟನೆಯಲ್ಲಿ ವೇದಿಕೆಯ ಅಧ್ಯಕ್ಷ ಕರಕುಚ್ಚಿ ಲೋಕೇಶ್ ಜಿ., ಶಿಮೂಲ್ ಅಧ್ಯಕ್ಷ ವಿದ್ಯಾಧರ್, ಮಾಜಿ ಅಧ್ಯಕ್ಷ ಆನಂದ್, ಶಿಮೂಲ್ ವ್ಯವಸ್ಥಾಪಕರು, ಪ್ರಮುಖರಾದ ತಿಮ್ಲಾಪುರ ಲೋಕೇಶ್, ಸಂಘಟನಾ ಕಾರ್ಯದರ್ಶಿ ಮೂರ್ತಿ, ಗಜೇಂದ್ರ ಭದ್ರಾವತಿ, ಮೂರ್ತಿ ಎಸ್., ಮಂಜುನಾಥ್, ಕಿರಣ್, ಅಯೂಬ್, ಪ್ರಭು, ದಿನೇಶ್, ನಾಗರಾಜ್, ಅರುಣಾದೇವಿ, ಮಂಜುನಾಥ್, ರುದ್ರೇಶ್ ಚಟ್ನಳ್ಳಿ, ಜಯರಾಂ ಗೋಂಧಿ, ಸೀಮಾಬಾಯಿ, ವಿವಿಧ ಸ್ತ್ರೀಶಕ್ತಿ ಸಂಘಟನೆಗಳು, ದಲಿತ ಸಂಘಟನೆಯ ಮುಖಂಡರು, ಮುಂತಾದವರಿದ್ದರು.