ಶಿವಮೊಗ್ಗ: ರಾಜ್ಯ ಸರ್ಕಾರ ತನ್ನ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯಲ್ಲಿ ಸುಮಾರು ೧.೨೫ ಲಕ್ಷ ಮಹಿಳೆಯರು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೇ ಮಾಹಿತಿ ನೀಡಿದ್ದು, ಈ ಭ್ರಷ್ಟಾಚಾರದ ವಿರುದ್ಧ ಸಮಗ್ರ ತನಿಖೆ ನಡೆಸಬೇಕು ಎಂದು ಸಂಸದ ಬಿ.ವೈ.ರಾಘವೇಂದ್ರ ಸರ್ಕಾರವನ್ನು ಆಗ್ರಹಿಸಿದರು.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಮೂರು ವರ್ಷಗಳಿಂದ ಗ್ಯಾರಂಟಿ ಯೋಜನೆಗಳಲ್ಲಿ ಇನ್ನಿಲ್ಲದ ಭ್ರಷ್ಟಾಚಾರ ನಡೆಯುತ್ತಾ ಬಂದಿದ್ದರೂ ಸರ್ಕಾರಕ್ಕೆ ಈಗ ಜ್ಞಾನೋದಯವಾಗಿದೆ. ಬೆಂಗಳೂರಿನ ಕಸ ವಿಲೇವಾರಿಯಲ್ಲಿ ೩೦ ಸಾವಿರ ಕೋಟಿ ರೂ. ಟೆಂಡರ್ನಲ್ಲಿ ಭ್ರಷ್ಟಾಚಾರ, ಬಿಡದಿ ಟೌನ್ಶಿಪ್ ನಿರ್ಮಾಣದಲ್ಲಿಯೂ ಭ್ರಷ್ಟಾಚಾರ ಎದ್ದು ಕಾಣುತ್ತಿದೆ. ಇವುಗಳ ಬಗ್ಗೆ ಸಮಗ್ರ ಚರ್ಚೆ ಆಗಬೇಕು ಎಂದು ಒತ್ತಾಯಿಸಿದರು.

ಕಾಂಗ್ರೆಸ್ ಹೈಕಮಾಂಡ್ ಸೂಚನೆಯ ಮೇರೆಗೆ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗಿದ್ದು, ಸಿಎಂ ಬದಲಾವಣೆ ಸದ್ಯಕ್ಕೆ ಇಲ್ಲ ಎಂಬುದು ಮೇಲ್ನೋಟಕ್ಕೆ ಕಾಣುತ್ತಿದೆ ಎಂದು ವ್ಯಂಗ್ಯವಾಡಿದ ಅವರು ಕಾಂಗ್ರೆಸ್ ಪಟ್ಟಕ್ಕೆ ಬರುವ ಸಂದರ್ಭದಲ್ಲಿ ನೀಡಿದ ಯುವನಿಧಿ ಯೋಜನೆ ಕೇವಲ ಶೇ. ೨೫ರಷ್ಟು ಯುವಕರಿಗೆ ಮಾತ್ರ ತಲುಪುತ್ತಿದ್ದು, ಈಗ ಎಲ್ಲಾ ಗ್ಯಾರಂಟಿಗಳ ಪರಿಷ್ಕರಣೆ ನೆಪದಲ್ಲಿ ಜನರಿಗೆ ಮೋಸ ಮಾಡುತ್ತಿದೆ ಎಂದು ಟೀಕಿಸಿದರು.

ಹಾಲಿ ಬಿಜೆಪಿ ರಾಜ್ಯಾಧ್ಯಕ್ಷ ವಿ.ವೈ. ವಿಜಯೇಂದ್ರ ಉತ್ತಮ ಕಾರ್ಯನಿರ್ವಹಿಸುತ್ತಿದ್ದು, ರಾಜ್ಯಾಧ್ಯಕ್ಷರಾಗಿ ಮುಂದುವರೆಯುತ್ತಾರೆಂಬ ವಿಶ್ವಾಸವಿದೆ. ಬಿಡದಿ ಟೌನ್ಶಿಪ್ ಬಗ್ಗೆ ಪ್ರಧಾನಿ ಮೋದಿ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂಬ ವರದಿ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರಧಾನಿ -ಮುಖ್ಯಮಂತ್ರಿ ನಡುವೆ ಏನು ಮಾತುಕತೆ ಆಗಿದೆ ಎಂಬುದು ನಮಗೆ ತಿಳಿದಿಲ್ಲ. ಆದರೆ, ತಮಗೆ ಅನುಕೂಲವಾಗುವಂತೆ ಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆ ನೀಡುತ್ತಿರಬಹುದು ಎಂಬ ಅಭಿಪ್ರಾಯ ನನ್ನದು ಎಂದ ಅವರು, ಕೇಂದ್ರದಿಂದ ರಾಜ್ಯಕ್ಕೆ ಅಗತ್ಯವಿರುವಷ್ಟು ಯೂರಿಯಾ ರಸಗೊಬ್ಬರ ಸರಬರಾಜಾಗುತ್ತಿದ್ದು, ರಾಜ್ಯದಲ್ಲಿ ರಸಗೊಬ್ಬರದ ಕೃತಕ ಅಭಾವ ಎದ್ದು ಕಾಣುತ್ತಿದೆ ಎಂದರು.