ಶಿವಮೊಗ್ಗ : ರಾಜ್ಯ ಸರ್ಕಾರ ಕೂಡಲೇ ತನ್ನ ಆರ್ಥಿಕ ಪರಿಸ್ಥಿತಿಯ ಬಗ್ಗೆ ಶ್ವೇತಪತ್ರ ಹೊರಡಿಸಬೇಕೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ಅವರು ಇಂದು ನಗರದ ಮಲ್ನಾಡ್ ಶೈರ್ ರೆಸಾರ್ಟ್ನಲ್ಲಿ ಬಿಜೆಪಿ ಚಿತ್ರದುರ್ಗ ಜಿಲ್ಲಾ ಪ್ರಶಿಕ್ಷಣ ವರ್ಗದಲ್ಲಿ ಭಾಗವಹಿಸಲು ಬಂದಾಗ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಗ್ಯಾರೆಂಟಿ ಯೋಜನೆಯ ಲಕ್ಷಾಂತರ ಫಲಾನುಭವಿಗಳಿಗೆ ರಾಜ್ಯ ಸರ್ಕಾರ ಅನ್ಯಾಯಮಾಡಿದೆ. ಹೊಸದಾಗಿ ದಾಖಲೆ ನೀಡಬೇಕು ಎಂಬು ಸಬೂಬು ಹೇಳುವ ಮೂಲಕ ಯೋಜನೆಯನ್ನು ರದ್ದುಮಾಡಿದೆ. ಇದು ಚುನಾವಣಾ ಪೂರ್ವದಲ್ಲಿ ನೀಡಿದ ಭರವಸೆಗಳಿಗೆ ತದ್ವಿರುದ್ಧವಾಗಿದೆ. ಆಗ ಯಾರ್ಯಾರಿಗೆ ಗ್ಯಾರೆಂಟಿ ಕೊಡುತ್ತೇವೆಂದು ಹೇಳಿದ್ದರೂ ಅವರೆಲ್ಲರಿಗೂ ಈ ಯೋಜನೆಯ ಲಾಭ ನೀಡಲೇಬೇಕು. ಎಲ್ಲೋ ಒಂದು ಕಡೆ ಕುಂಟುನೆಪ ಹೇಳಿ ಕತ್ತರಿಹಾಕುವ ಕೆಲಸಬೇಡ. ಅದರ ಬದಲು ರಾಜ್ಯದ ಆರ್ಥಿಕ ಸ್ಥಿತಿಗತಿಯ ಬಗ್ಗೆ ಸತ್ಯವನ್ನು ಜನರ ಮುಂದಿಡಿ ಎಂದರು.

ಈಗಾಗಲೇ ಗ್ಯಾರೆಂಟಿ ಯೋಜನೆಯ ಭರವಸೆ ನೀಡಿದ ಹಿಮಾಚಲ ಪ್ರದೇಶ, ತೆಲಂಗಾಣದಲ್ಲಿ ಸರ್ಕಾರಿ ನೌಕರರಿಗೂ ಸಂಬಳ ಸಿಗುತ್ತಿಲ್ಲ. ಇಲ್ಲಿಯೂ ಕೂಡ ಅದೇ ಪರಿಸ್ಥಿತಿ ಬರಲಿದೆ. ಸ್ವಾತಂತ್ರ್ಯ ಸಿಕ್ಕಿದ ನಂತರ ೫೫ ವರ್ಷ ಆಳಿದ ಕಾಂಗ್ರೆಸ್ ಮತಕ್ಕಾಗಿ ಗ್ಯಾರೆಂಟಿಗಳನ್ನು ಘೋಷಿಸಿ ಈಗ ಅದಕ್ಕೆ ಕತ್ತರಿಹಾಕಿ ಕುಂಟುನೆಪ ಹೇಳುತ್ತಾ, ಮೈಲುದ್ದ ಕ್ಯೂನಲ್ಲಿ ನಿಲ್ಲಿಸುತ್ತಿರುವುದು ಸರ್ಕಾರಕ್ಕೆ ಶೋಭೆಯಲ್ಲ, ಇದು ಜನರಿಗೆ ಮಾಡುತ್ತಿರುವ ಮೋಸ ಎಂದರು.
ಸಿಎಂ ಡಿಕೆಶಿಯವರ ತಾಳ್ಮೆಗೆ ನಾನು ಅಭಿನಂದಿಸುತ್ತೇನೆ. ಎಲ್ಲಿ ಸಿದ್ಧರಾಮಯ್ಯನವರು ಕುರ್ಚಿ ಬಿಡುವುದಿಲ್ಲವೋ ಎಂಬ ಪ್ರಶ್ನೆ ಇತ್ತು. ಕೊನೆಗೂ ಡಿ.ಕೆ.ಶಿವಕುಮಾರ್ ಕುರ್ಚಿ ಕಿತ್ತುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ನಿನ್ನೆ ಅಧಿಕಾರಿ ಪತ್ರಿಕಾಗೋಷ್ಠಿ ನಡೆಸಿ ಭ್ರಷ್ಟಾಚಾರ ಸಹಿಸಿಕೊಳ್ಳುವುದಿಲ್ಲ ಎಂದಿದ್ದಾರೆ. ಆದರೆ ಇದು ಹಾಸ್ಯಾಸ್ಪದವಾಗಿದೆ ಭ್ರಷ್ಟಾಚಾರಕ್ಕೂ ಕಾಂಗ್ರೆಸ್ ಪಕ್ಷಕ್ಕೂ ಅವಿನಾಭಾವ ಸಂಬಂಧವಿದೆ. ನಾನು ಈಗಲೇ ಸಿಎಂ ಬಗ್ಗೆ ಮಾತನಾಡುವುದಿಲ್ಲ. ಆದರೆ ರಾಜ್ಯದ ಜನತೆಯ ಹೇಳಿಕೆಗಳ ಪ್ರಕಾರ ಈ ಸರ್ಕಾರ ಅಭಿವೃದ್ಧಿಶೂನ್ಯ ಸರ್ಕಾರವಾಗಿದೆ. ಆಡಳಿತದಲ್ಲಿ ವೈಫಲ್ಯ ಖಂಡಿದೆ. ಡಿ.ಕೆ.ಶಿವಕುಮಾರ್ ಸಿಎಂ ಆಗಿರುವಷ್ಟು ದಿನವಾದರೂ ಒಳ್ಳೆಯ ಆಡಳಿತ ನೀಡಲಿ ಎಂದರು.

ಬಿಡದಿ ರೈತರನ್ನು ಒಕ್ಕಲೆಬ್ಬಿಸುತ್ತಿರುವುದು ಅಕ್ಷಮ್ಯ ಅಪರಾಧವಾಗಿದೆ. ಕನಿಷ್ಠ ೭೦ಶೇ. ರೈತರು ಯೋಜನೆಗೆ ಒಪ್ಪಿಗೆ ಸೂಚಿಸಬೇಕು. ಇಲ್ಲಿ ಶೇ.೯೦ರಷ್ಟು ರೈತರು ವಿರೋಧಿಸುತ್ತಿದ್ದಾರೆ. ಒತ್ತಾಯಪೂರ್ವಕವಾಗಿ ಜಮೀನು ಖರೀದಿ ಮಾಡುತ್ತಿರುವುದು ಸರಿಯಲ್ಲ, ನಿನ್ನೆ ರಾಹುಲ್ಗಾಂಧಿಗೆ ಕೂಡ ನಾನು ಪತ್ರ ಬರೆದು ರೈತರ ಭೂಸ್ವಾಧೀನ ಪ್ರಕ್ರಿಯೆ ಕೈಬಿಡುವಂತೆ ತಾಕೀತು ಮಾಡಲು ಸರ್ಕಾರಕ್ಕೆ ಸೂಚನೆ ನೀಡುವಂತೆ ಹೇಳಿದ್ದೇನೆ ಎಂದರು.
ಈ ಸಂದರ್ಭದಲ್ಲಿ ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ, ಸಂಸದ ಗೋವಿಂದ ಕಾರಜೋಳ ಸೇರಿದಂತೆ ಆ ಭಾಗದ ಪ್ರಮುಖರು ಉಪಸ್ಥಿತರಿದ್ದರು.