ಶಿವಮೊಗ್ಗ : ರಾಜ್ಯದಲ್ಲಿ ಡಿ.ಕೆ.ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಜಕೀಯ ವಿರೋಧಿಗಳನ್ನು ಮಟ್ಟ ಹಾಕಲು ಹಾಗೂ ಬೆದರಿಸಲು ಪೊಲೀಸ್ ಬಲವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಬೆಳಗಾವಿಯಲ್ಲಿ ಸಿ.ಟಿ.ರವಿ ಅವರನ್ನು ದೈಹಿಕವಾಗಿ ಮುಗಿಸಲು ಯತ್ನಿಸಲಾಗಿತ್ತು. ಹೀಗಿರುವಾಗ ಪ್ರಸ್ತುತ ಅವರ ಮೇಲೆ ಸುಳ್ಳು ಕೇಸ್ಗಳನ್ನು ಹಾಕುವುದು ನಮಗೆ ಯಾವುದೇ ಆಶ್ಚರ್ಯ ತಂದಿಲ್ಲ. ಹಿಂದೆ ೨೦೧೬-೧೭ರ ಅವಧಿಯಲ್ಲೂ ಕಾಂಗ್ರೆಸ್ ಸರ್ಕಾರ ಸುಮಾರು ೨೩ ಸಾವಿರ ಬಿಜೆಪಿ ಹಾಗೂ ಆರ್ಎಸ್ಎಸ್ ಕಾರ್ಯಕರ್ತರ ಮೇಲೆ ರೌಡಿಶೀಟರ್ ಓಪನ್

ಮಾಡಿ ಕಿರುಕುಳ ನೀಡಿತ್ತು. ನಮ್ಮನ್ನು ರಾಜಕೀಯವಾಗಿ ಹಾಗೂ ಸೈದ್ಧಾಂತಿಕವಾಗಿ ಎದುರಿಸಲಿ, ಅದಕ್ಕೆ ನಮ್ಮ ಅಭ್ಯಂತರವಿಲ್ಲ. ಅದನ್ನು ಬಿಟ್ಟು ಪೊಲೀಸರನ್ನು ಇಟ್ಟುಕೊಂಡು ಹೆದರಿಸುವ ಕೆಲಸಕ್ಕೆ ಕೈಹಾಕಿರುವುದು ಕಾಂಗ್ರೆಸ್ ನಾಯಕರ ಹತಾಶೆಯನ್ನು ಎತ್ತಿ ತೋರಿಸುತ್ತದೆ ಎಂದರು.
ಇತ್ತೀಚೆಗೆ ಬಿಜೆಪಿ ನಾಯಕರಾದ ಯಶ್ಪಾಲ್ ಸುವರ್ಣ ಅವರಿಗೆ ನೋಟಿಸ್ ನೀಡಲಾಗಿದ್ದು, ಸಿ.ಟಿ.ರವಿ ಅವರ ಮೇಲಂತೂ ಅತ್ಯಂತ

ಪ್ರಬಲವಾಗಿ ಕೇಸ್ಗಳನ್ನು ಹಾಕಲಾಗುತ್ತಿದೆ. ಆದರೆ, ಇಲಾಖೆಯನ್ನು ಸುಧಾರಿಸುವ ಬಗ್ಗೆ ಯೋಚಿಸದ ಸರ್ಕಾರ, ರಾಜ್ಯದಲ್ಲಿ ದಿನನಿತ್ಯ ಅಪರಾಧ ಪ್ರಕರಣಗಳು ಹೆಚ್ಚುತ್ತಿದ್ದರೂ ಅದನ್ನು ನಿಯಂತ್ರಿಸಲು ಯಾವುದೇ ಆಸಕ್ತಿ ತೋರುತ್ತಿಲ್ಲ. ರಾಜಕೀಯ ವಿರೋಧಿಗಳ ಮೇಲೆ ಪೊಲೀಸರನ್ನು ಎತ್ತಿಕಟ್ಟುವ ಕೆಲಸ ಮಾಡಲಾಗುತ್ತಿದೆ. ಸಚಿವರ ಮಾತಿಗೆ ಓಗೊಟ್ಟು ಪೊಲೀಸ್ ಅಧಿಕಾರಿಗಳು ಇದೇ ರೀತಿ ನಡೆದುಕೊಂಡರೆ ಮುಂದಿನ ದಿನಗಳಲ್ಲಿ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.