“
ಬೆಳಗಾವಿ/ಶಿವಮೊಗ್ಗ, ಜೂನ್ 10: ತಾಯಿಯ ಮಡಿಲಿಗೆ ಮಗು ಬಂದಾಗ ಅದು ಗಂಡೋ, ಹೆಣ್ಣೋ ಎಂಬ ಪ್ರಶ್ನೆಗಿಂತ ಅದು ಬದುಕಿನ ಹೊಸ ಬೆಳಕು ಎನ್ನುವುದು ಸಮಾಜದ ಮೌಲ್ಯವಾಗಬೇಕು. ಆದರೆ, ಇನ್ನೂ ಕೆಲ ಕುಟುಂಬಗಳಲ್ಲಿ ಹೆಣ್ಣು ಮಗುವಿನ ಜನನವೇ ಮಹಿಳೆಯ ಪಾಲಿಗೆ ಶಾಪವಾಗಿ ಪರಿಣಮಿಸುತ್ತಿದೆ ಎಂಬುದಕ್ಕೆ ಈ ಘಟನೆ ಮತ್ತೊಂದು ನೋವಿನ ಉದಾಹರಣೆಯಾಗಿದೆ.
ಮೂರು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದ ಕಾರಣಕ್ಕೆ ಪತ್ನಿಗೆ ನಿರಂತರ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿದ ಆರೋಪದಡಿ ಶಿವಮೊಗ್ಗ ಮೂಲದ ಪತಿ ಸೇರಿದಂತೆ ಐವರ ವಿರುದ್ಧ ಬೆಳಗಾವಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬೆಳಗಾವಿಯ ಶಾಸ್ತ್ರಿನಗರ ನಿವಾಸಿ ಸುಮನ್ ಪ್ರಸಾದ್ ವಾಕುಡೆ (26) ಅವರು ನೀಡಿದ ದೂರಿನ ಪ್ರಕಾರ, 2021ರ ಏಪ್ರಿಲ್ 22ರಂದು ಶಿವಮೊಗ್ಗ ಮೂಲದ ಪ್ರಸಾದ್ ನಾರಾಯಣ ವಾಕುಡೆ ಅವರೊಂದಿಗೆ ವಿವಾಹವಾಗಿತ್ತು. ಆರಂಭದಲ್ಲಿ ದಾಂಪತ್ಯ ಜೀವನ

ಸುಗಮವಾಗಿದ್ದರೂ, 2022ರ ಜುಲೈ 31ರಂದು ಅವಳಿ ಹೆಣ್ಣು ಮಕ್ಕಳಾದ ಮೇಘಾ ಮತ್ತು ಮೇಘನಾ ಜನಿಸಿದ ಬಳಿಕ ಪತಿಯ ವರ್ತನೆ ಬದಲಾಗತೊಡಗಿತು ಎಂದು ಆರೋಪಿಸಲಾಗಿದೆ.
“ನಮ್ಮ ಮನೆತನದಲ್ಲಿ ಎಲ್ಲರಿಗೂ ಗಂಡು ಮಕ್ಕಳು ಹುಟ್ಟಿದ್ದಾರೆ. ನಿನಗೆ ಮಾತ್ರ ಹೆಣ್ಣು ಮಕ್ಕಳು ಹುಟ್ಟಿದ್ದಾರೆ” ಎಂದು ಅವಮಾನಿಸಿ, ಮದ್ಯಪಾನ ಮಾಡಿ ಬಂದು ಜಗಳವಾಡುವುದು, ಅವಾಚ್ಯ ಶಬ್ದಗಳಿಂದ ನಿಂದಿಸುವುದು, ಹಲ್ಲೆ ನಡೆಸುವುದು ಸಾಮಾನ್ಯವಾಗಿತ್ತು ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.
ಇದರಿಂದಲೂ ನೋವು ಕಡಿಮೆಯಾಗದೇ, ಎರಡನೇ ಬಾರಿ ಗರ್ಭಿಣಿಯಾಗಿದ್ದಾಗಲೂ “ಈ ಮಗುವೂ ಹೆಣ್ಣೇ ಆಗಬಹುದು” ಎಂದು ಮಾನಸಿಕವಾಗಿ ಹಿಂಸೆ ನೀಡಲಾಗುತ್ತಿತ್ತು ಎನ್ನಲಾಗಿದೆ. 2024ರ ಡಿಸೆಂಬರ್ 2ರಂದು ಮತ್ತೊಂದು ಹೆಣ್ಣು ಮಗುವಿಗೆ ಜನ್ಮ ನೀಡಿದ ಬಳಿಕ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿತು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಪತಿ ಪ್ರಸಾದ್ ವಾಕುಡೆ, ಮಾವ ನಾರಾಯಣ ಯಲ್ಲಪ್ಪ ವಾಕುಡೆ, ಪತಿಯ ಸಂಬಂಧಿಕರಾದ ವೀಣಾ, ಜ್ಯೋತಿ ಹಾಗೂ ಲಕ್ಷ್ಮಣ ಶಿಂಧೆ ಅವರು ಸೇರಿ ಪತಿಗೆ ಎರಡನೇ ಮದುವೆ ಮಾಡಿಸಿಕೊಳ್ಳುವಂತೆ ಪ್ರೇರೇಪಿಸಿ, “ಒಪ್ಪಿಗೆ ಪತ್ರಕ್ಕೆ ಸಹಿ ಹಾಕಿ ಮನೆ ಬಿಟ್ಟು ಹೋಗು” ಎಂದು ಒತ್ತಾಯಿಸಿ ಮಾನಸಿಕ ಕಿರುಕುಳ ನೀಡಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.
2025ರ ಜುಲೈನಲ್ಲಿ ಮಹಿಳೆಯನ್ನು ಮೂರು ಪುಟ್ಟ ಹೆಣ್ಣು ಮಕ್ಕಳೊಂದಿಗೆ ತವರು ಮನೆಗೆ ಬಿಟ್ಟು ಬಂದ ಪತಿ, ಬಳಿಕ ಅವರ ಯೋಗಕ್ಷೇಮ ವಿಚಾರಿಸಿಲ್ಲ. ಮಕ್ಕಳ ಪೋಷಣೆ, ಶಿಕ್ಷಣ ಹಾಗೂ ಜೀವನ ನಿರ್ವಹಣೆಗೆ ಅಗತ್ಯವಾದ ವೆಚ್ಚವನ್ನೂ ನೀಡಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಸಂಬಂಧ ಮಹಿಳೆ ಈಗಾಗಲೇ ಎರಡು ಬಾರಿ ಮಹಿಳಾ ಪೊಲೀಸ್ ಠಾಣೆಯ ಮೊರೆ ಹೋಗಿದ್ದರು. ಕುಟುಂಬದ ಹಿರಿಯರ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವುದಾಗಿ ಪತಿ ಭರವಸೆ ನೀಡಿದ್ದರೂ, ಯಾವುದೇ ಪರಿಹಾರ ದೊರಕದ ಹಿನ್ನೆಲೆಯಲ್ಲಿ ಇದೀಗ ಅಧಿಕೃತ ದೂರು ದಾಖಲಿಸಿ ನ್ಯಾಯಕ್ಕಾಗಿ ಮನವಿ ಮಾಡಿದ್ದಾರೆ.
ಹೆಣ್ಣು ಮಗು ಇನ್ನೂ ಭಾರವೇ?
ಸರ್ಕಾರ “ಮಗಳನ್ನು ಉಳಿಸಿ, ಮಗಳನ್ನು ಬೆಳೆಸಿ” ಎಂಬ ಘೋಷಣೆಗಳನ್ನು ನೀಡುತ್ತಿರುವ ಈ ಕಾಲದಲ್ಲಿಯೂ, ಹೆಣ್ಣು ಮಕ್ಕಳ ಜನನವನ್ನು ಅವಮಾನವಾಗಿ ಕಾಣುವ ಮನಸ್ಥಿತಿ ಸಮಾಜದಲ್ಲಿ ಇನ್ನೂ ಜೀವಂತವಾಗಿರುವುದು ವಿಷಾದನೀಯ. ಮಗುವಿನ ಲಿಂಗ ನಿರ್ಧಾರದಲ್ಲಿ ಮಹಿಳೆಯ ಪಾತ್ರವಿಲ್ಲ ಎಂಬ ವೈಜ್ಞಾನಿಕ ಸತ್ಯ ತಿಳಿದಿದ್ದರೂ, ಅನೇಕ ಮಹಿಳೆಯರು ಇಂದಿಗೂ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ ಕಾರಣಕ್ಕೆ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ.
ಒಬ್ಬ ತಾಯಿಯ ಕಣ್ಣೀರು, ಮೂರು ಪುಟ್ಟ ಹೆಣ್ಣು ಮಕ್ಕಳ ಭವಿಷ್ಯದ ಆತಂಕ ಮತ್ತು ನ್ಯಾಯಕ್ಕಾಗಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ ಮಹಿಳೆಯ ಹೋರಾಟವು ಸಮಾಜದ ಮನಸ್ಸನ್ನು ಪ್ರಶ್ನಿಸುವಂತಿದೆ.