ಶಿವಮೊಗ್ಗ : ರಾಜ್ಯದಲ್ಲಿ ಎಸ್ಐಆರ್ ನಡೆಯುತ್ತಿದೆ. ಬಿಜೆಪಿಯವರು ಅದನ್ನು ಬೇರೆ ರೀತಿಯಲ್ಲಿ ಬಳಸಿಕೊಳ್ಳುತ್ತಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬ ಮತದಾರನಿಗೂ ಮತದಾನದ ಹಕ್ಕು ಇದ್ದು, ಅದನ್ನು ಕೊಡಿಸಬೇಕಾಗಿದೆ ಎಂದು ಮಾಜಿ ಸಚಿವ ಎಸ್. ಮಧುಬಂಗಾರಪ್ಪ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ೨ನೇ ಪಟ್ಟಿಯಲ್ಲಿ ನನ್ನನ್ನು ಸಂಪುಟಕ್ಕೆ ತೆಗೆದುಕೊಳ್ಳುವುದು ಹೈಕಮಾಂಡ್ಗೆ ಬಿಟ್ಟದ್ದು. ಹೈಕಮಾಂಡ್ ನಿರ್ಧಾರಕ್ಕೆ ನಾವೆಲ್ಲರೂ ಬದ್ಧರಾಗಬೇಕು. ಜೂನ್೧೮ರಂದು ರಾಜ್ಯಸಭೆ ಮತ್ತು ವಿಧಾನ ಪರಿಷತ್ ಚುನಾವಣೆಯ ನಂತರ ತೀರ್ಮಾನ ಮಾಡುತ್ತಾರೆ. ಶಿಕ್ಷಣ ಇಲಾಖೆಯಲ್ಲಿ ಯಾವುದೇ ಹಿನ್ನಡೆಯಾಗಿಲ್ಲ. ಶಿಕ್ಷಣ ಇಲಾಖೆ ಈಗ ಸಿಎಂ ಕೈಯಲ್ಲೇ ಇದ್ದು ಮೊದಲ ದಿನವೇ ವಿದ್ಯಾರ್ಥಿಗಳಿಗೆ ಉಚಿತ ಬಸ್ಪಾಸ್ ನೀಡಿ, ಕ್ರಾಂತಿ ಮಾಡಿದ್ದಾರೆ ಎಂದರು.

ಪಬ್ಲಿಕ್ ಶಾಲೆಯ ಉದ್ಘಾಟನಾ ಸಮಾರಂಭದ ಬಗ್ಗೆ ಕೇಳಿದ ಪ್ರಶ್ನೆಗೆ ಆ ಕಾರ್ಯಕ್ರಮ ನಿಂತ್ತಿಲ್ಲ. ೧೦೦೦ ಕೆಪಿಎಸ್ ಶಾಲೆಗಳು ಆಗುತ್ತದೆ. ಶಿವಮೊಗ್ಗದಿಂದಲೇ ಉದ್ಘಾಟನಾ ಕಾರ್ಯಕ್ರಮ ನಡೆಯುತ್ತದೆ. ಈ ಬಾರಿಯ ಸಿಇಟಿ ಫಲಿತಾಂಶ ನೋಡಿದಾಗ ನಿಮಗೆ ರಾಜ್ಯದ ಶಿಕ್ಷಣ ಗುಣಮಟ್ಟದ ಅರಿವಾಗಿರಬಹುದು ಎಂದರು.

ಜಿ. ಪರಮೇಶ್ವರ್ ಮತ್ತು ಸತೀಶ್ ಜಾರಕಿಹೋಳಿ ಸೇರಿದಂತೆ ಹಿರಿಯ ನಾಯಕರ ಅಸಮಾಧಾನದ ಪ್ರಶ್ನೆಗೆ ನೀವು ಅವರಿಗೇ ಕೇಳಬೇಕು. ಪಕ್ಷದಲ್ಲಿ ಯಾವುದೇ ಸಮಸ್ಯೆ ಇದ್ದರೂ ಹೈಕಮಾಂಡ್ ಬಗೆಹರಿಸುತ್ತದೆ. ಆಸೆ ಎಲ್ಲರಿಗೂ ಇದೆ ಎಂದರು.
ದೇವೇಗೌಡರಿಗೆ ರಾಜ್ಯಸಭಾ ಟಿಕೇಟ್ ನೀಡದೇ ಇರುವುದಕ್ಕೆ ಪ್ರತಿಕ್ರಿಯಿಸಿದ ಅವರು, ಅದು ದೊಡ್ಡ ದುರಂತ. ನಂಬಿದವರಿಗೆ ಕೈಕೊಡುವುದು ಬಿಜೆಪಿಯ ಚಾಳಿ. ಜೆಡಿಎಸ್ನವರಿಗೆ ಬಿಜೆಪಿ ಸಹವಾಸದ ಪರಿಣಾಮ ಈಗ ಗೊತ್ತಾಗಿದೆ ಎಂದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.