ಶಿವಮೊಗ್ಗ,ಜೂ.19:
ಸಹ್ಯಾದ್ರಿ ಕಾಲೇಜ್ ಕ್ಯಾಂಪಸ್‍ನಲ್ಲಿ ಯಾವುದೇ ಕಾರಣಕ್ಕೂ ವಿಶೇಷ ಕ್ರೀಡಾ ತರಬೇತಿ ಕೇಂದ್ರ ಸ್ಥಾಪಿಸಲು ಬಿಡುವುದಿಲ್ಲ ಎಂದು ಮತ್ತೆ ಮತ್ತೆ ಪ್ರಗತಿಪರರು, ವಿವಿಧ ಸಂಘಟನೆಗಳು, ಹಳೆ ವಿದ್ಯಾರ್ಥಿಗಳು ಇದಕ್ಕೆ ಅವಕಾಶ ನೀಡುವುದಿಲ್ಲ ಎಂದು ಒತ್ತಾಯಿಸುತ್ತಲೇ ಬಂದಿದ್ದಾರೆ ಮತ್ತು ಇದರ ವಿರುದ್ಧ ನಿರಂತರ ಹೋರಾಟ ಮಾಡುತ್ತೇವೆ ಎಂದು ಕಾಲೇಜಿನ ವಿದ್ಯಾರ್ಥಿಗಳು ಎಚ್ಚರಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿದ್ಯಾರ್ಥಿಗಳಾದ ವಿನಯ್ ಕಳಸ, ಅಭಿನಂದನ್, ವಿಧಾತ್ರಿ, ಯೋಗೀಶ್, ಅಭಿಗೌಡ, ಅಭಿಲಾಷ್, ಸಾಗರ್ ವಿರಾಜ್, ಅಭಿನಂದನ್, ವಿಜಯ್ ಸಿ.ಎಂ. ಮುಂತಾದ ಅನೇಕರು ಪ್ರಾತ್ಯಕ್ಷಿಕೆಯ ಮೂಲಕ ವಿವರ ನೀಡಿದರು.
ಜಯಚಾಮರಾಜೇಂದ್ರ ಒಡೆಯರ್ 1940ರಲ್ಲಿಯೇ 100 ಎಕರೆ ಜಾಗವನ್ನು ದೂರದೃಷ್ಟಿಯಿಂದ ನೀಡಿದ್ದರು. ಅದು ಈಗ ಒತ್ತುವರಿಯಾಗಿ ಕೇವಲ 76 ಎಕರೆ ಮಾತ್ರ ಉಳಿದುಕೊಂಡಿದೆ. ಈ ಜಾಗದಲ್ಲಿಯೂ ಕೂಡ ಈಗಾಗಲೇ 3 ಪ್ರತ್ಯೇಕ ಕಾಲೇಜುಗಳು ತಲೆ ಎತ್ತಿವೆ. ಸುಮಾರು ಆರುವರೆ ಸಾವಿರ ವಿದ್ಯಾರ್ಥಿಗಳು ಇಲ್ಲಿ ಕಲಿಯುತ್ತಿದ್ದಾರೆ. ಸ್ನಾತಕೋತ್ತರ ವಿಭಾಗ ಕೂಡ ಇಲ್ಲಿ ತೆರೆದಿದೆ. ಈಗಿರುವ ಜಾಗವು ಇಲ್ಲಿನ ವಿದ್ಯಾರ್ಥಿಗಳಿಗೆ ಸಾಕಾಗುವುದಿಲ್ಲ. ಹಾಗಾಗಿ ಖೇಲೋ ಇಂಡಿಯಾ ಅಥವಾ ಸಾಯಿ ಸಂಸ್ಥೆಗೆ ಕೊಡಲು ಬಿಡುವುದಿಲ್ಲ ಎಂದರು.
ಈಗಿರುವ ಜಾಗದಲ್ಲೇ ವಿದ್ಯಾರ್ಥಿನಿಯರ ಹಾಸ್ಟೆಲ್, ಲೈಬ್ರರಿ, ಕ್ರೀಡಾಂಗಣ, ಪ್ರಯೋಗಾಲಯ, ಆಡಿಟೋರಿಯಂ ಸೇರಿದಂತೆ ಅನೇಕ ಸೌಲಭ್ಯಗಳು ಬೇಕಾಗುತ್ತದೆ ಮತ್ತು ಜಾಗವೇ ಸಾಲದಾಗುತ್ತದೆ ಇಂತಹ ಸ್ಥಿತಿ ಸಹ್ಯಾದ್ರಿ ಕಾಲೇಜಿಗಿರುವಾಗ ಈಗ ಮತ್ತೆ 18 ಎಕರೆ ಜಾಗವನ್ನು ವಿಶೇಷ ಕ್ರೀಡಾ ತರಬೇತಿ ಕೇಂದ್ರಕ್ಕೆ ಬಿಟ್ಟುಕೊಡಲು ಸಾಧ್ಯವಿಲ್ಲ. ಇದು ಸಾಧುವೂ ಅಲ್ಲ. ನಾವು ವಿಶೇಷ ಕ್ರೀಡಾ ತರಬೇತಿ ಕೇಂದ್ರ ಸ್ಥಾಪನೆಗೆ ವಿರೋಧ ವ್ಯಕ್ತಪಡಿಸುತ್ತಿಲ್ಲ. ಆದರೆ ಸಹ್ಯಾದ್ರಿ ಕಾಲೇಜಿನ ಆವರಣದಲ್ಲಿ ಮಾತ್ರ ಬೇಡವೇ ಬೇಡ ಎಂಬುದಷ್ಟೆ ನಮ್ಮವಾದ. ಇದನ್ನು ಮೀರಿ ಜಿಲ್ಲಾಡಳಿತ ಅಥವಾ ಸಂಸದರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಇಲ್ಲಿಯೇ ಸ್ಥಾಪಿಸಲು ಮುಂದಾದರೆ ನಾವು ಸುಮ್ಮನಿರುವುದಿಲ್ಲ ಎಂದು ಎಚ್ಚರಿಸಿದರು.
ಜಿಲ್ಲಾಧಿಕಾರಿಗಳು ಸಭೆ ಕರೆದಾಗ ಈ ಎಲ್ಲಾ ವಿಷಯಗಳನ್ನು ಕೂಲಕಂಷವಾಗಿ ತಿಳಿಸಿದ್ದೇವೆ. ಆದರೆ ಅವರು ನಮ್ಮ ಮಾತನ್ನೇ ಕೇಳುವ ಸ್ಥಿತಿಯಲ್ಲಿಲ್ಲ. ಈಗಾಗಲೇ 18 ಎಕರೆ ಜಾಗವನ್ನು ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಗೆ ಹಸ್ತಾಂತರಿಸುವಂತೆ ಪತ್ರ ಬರೆದಿದ್ದಾರೆ. ಒಳಗೊಳಗೆ ಕ್ರೀಡಾ ತರಬೇತಿ ಕೇಂದ್ರ ಸ್ಥಾಪನೆಗೆ ಅನುಮೋದನೆ ನೀಡಿರುವ ಬಗ್ಗೆ ನಮಗೆ ಅನುಮಾನವಿದೆ ಮತ್ತು ಮಾಹಿತಿಯನ್ನು ಸರಿಯಾಗಿ ಅವರು ನೀಡುತ್ತಿಲ್ಲ. ಒಮ್ಮೆ 18 ಎಕರೆ ಎನ್ನುತ್ತಾರೆ ಮತ್ತೊಮ್ಮೆ 28 ಎಕರೆ ಎನ್ನುತ್ತಾರೆ ಎಂದು ಕಿಡಿಕಾರಿದರು.
ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಎಂ.ಗುರುಮೂರ್ತಿ ಮಾತನಾಡಿ, ಜನರನ್ನು ಮೂರ್ಖರನ್ನಾಗಿ ಮಾಡಲು ಜಿಲ್ಲಾಡಳಿತ ಮತ್ತು ಸರ್ಕಾರ ಹೊರಟಿದೆ. ವಿಶೇಷ ಕ್ರೀಡಾ ತರಬೇತಿ ಕೇಂದ್ರಕ್ಕೆ ಈ ಹಿಂದೆಯೇ 2013ರಲ್ಲಿ ಆಯನೂರು ಬಳಿ ಸರ್ವೇ ನಂ. 129 ರಲ್ಲಿ 50 ಎಕರೆ ಜಾಗವನ್ನು ಈಗಾಗಲೆ ಮೀಸಲಿಡಲಾಗಿತ್ತು. ಅದನ್ನು ಬಿಟ್ಟು ಏಕೆ ಸಹ್ಯಾದ್ರಿ ಕಾಲೇಜಿಗೆ ಬಂದರೋ ಗೊತ್ತಿಲ್ಲ. ಅಲ್ಲದೆ ಮಾಜಿ ಶಾಸಕ ಕುಮಾರಸ್ವಾಮಿಯವರು ಕೂಡ ಇದನ್ನು ವಿರೋಧಿಸಿ ಪತ್ರ ಬರೆದಿದ್ದಾರೆ. ಎಲ್ಲರಿಗೂ ಒಪ್ಪಿತವಾಗದ ವಿರೋಧ ವ್ಯಕ್ತಪಡಿಸುವ ಈ ಕ್ರೀಡಾ ತರಬೇತಿ ಕೇಂದ್ರವನ್ನು ಸಹ್ಯಾದ್ರಿ ಕಾಲೇಜ್ ಆವರಣದಲ್ಲಿಯೇ ಸ್ಥಾಪಿಸಬೇಕು ಎನ್ನುವುದು ವಿದ್ಯಾರ್ಥಿ ವಿರೋಧಿ ನೀತಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರೊ.ಸಣ್ಣರಾಮ, ಕೆ.ಪಿ. ಶ್ರೀಪಾಲ್, ವಿಧಾತ್ರಿ ಸೇರಿದಂತೆ ಹಲವರು ಮಾತನಾಡಿ, ಕ್ರೀಡಾ ಕೇಂದ್ರ ಸ್ಥಾಪನೆಗೆ ವಿರೋಧ ವ್ಯಕ್ತಪಡಿಸಿದರು. ಅಣ್ಣಾ ಹಜಾರೆ ಹೋರಾಟ ಸಮಿತಿಯ ಅಶೋಕ್ ಯಾಧವ್ ಈ ಯೋಜನೆಯ ಹಿಂದೆ ಭಾರಿ ಭ್ರಷ್ಟಾಚಾರವಿದೆ ಎಂದು ಆರೋಪಿಸಿದರು.

By admin

ನಿಮ್ಮದೊಂದು ಉತ್ತರ

You missed

error: Content is protected !!