ಶಿವಮೊಗ್ಗ : ಶಿವಮೊಗ್ಗ ನಗರದಲ್ಲಿ ಕಳೆದ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ತೊಂದರೆಗೊಳಗಾದ ಶ್ರೀ ರಾಮನಗರ, ಕೆಂಚಪ್ಪ ಬಡಾವಣೆ ಹಾಗೂ ಶರಾವತಿ ನಗರದ ವಿವಿಧ ಭಾಗಗಳಿಗೆ ಶಾಸಕರಾದ ಶ್ರೀ ಎಸ್.ಎನ್. ಚನ್ನಬಸಪ್ಪ ಅವರು ಇಂದು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.

ಬಡಾವಣೆಗಳಲ್ಲಿ ಮಳೆನೀರು ಸರಾಗವಾಗಿ ಹರಿಯದೆ ಸಾರ್ವಜನಿಕರ ಆಸ್ತಿಪಾಸ್ತಿಗಳಿಗೆ ಹಾನಿಯಾಗಿರುವುದನ್ನು ಗಮನಿಸಿದ ಶಾಸಕರು, ತಕ್ಷಣವೇ ಕಾರ್ಯಪ್ರವೃತ್ತರಾಗುವಂತೆ ಮಹಾನಗರ ಪಾಲಿಕೆ ಹಾಗೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಶಾಸಕರ ಪ್ರಮುಖ ಸೂಚನೆಗಳು : ಶಾಶ್ವತ ಪರಿಹಾರ : ಮುಂಬರುವ ಮಳೆಗಾಲದ ವೇಳೆಗೆ ಯಾವುದೇ ಬಡಾವಣೆಯಲ್ಲಿ ನೀರು ನಿಲ್ಲದಂತೆ ರಾಜಕಾಲುವೆ ಹಾಗೂ ಚರಂಡಿಗಳ ದುರಸ್ತಿಯನ್ನು ಕಾರ್ಯವನ್ನು ಕೈಗೊಳ್ಳಬೇಕು. ಹೂಳೆತ್ತುವ ಕಾರ್ಯ: ಮಳೆಗಾಲಕ್ಕೂ ಮುನ್ನವೇ ನಗರದ ಪ್ರಮುಖ ಚರಂಡಿಗಳಲ್ಲಿ ಹೂಳೆತ್ತುವ ಪ್ರಕ್ರಿಯೆ ಪೂರ್ಣಗೊಳ್ಳಬೇಕು. ತ್ವರಿತ ಸ್ಪಂದನೆ: ಮಳೆಯಿಂದಾಗಿ ಸಾರ್ವಜನಿಕರಿಗೆ ತೊಂದರೆಯಾದಲ್ಲಿ ತಕ್ಷಣದ ಪರಿಹಾರ ಕಾರ್ಯಗಳಿಗೆ ವಿಶೇಷ ತಂಡಗಳನ್ನು ರಚಿಸಬೇಕು. ಬಳಿಕ ಮಾತನಾಡಿದ ಶಾಸಕರು, “ಜನಸಾಮಾನ್ಯರು ಮಳೆಯಿಂದಾಗಿ ಸಂಕಷ್ಟಕ್ಕೀಡಾಗುತ್ತಿರುವುದು ವಿಷಾದನೀಯ. ಈ ಸಮಸ್ಯೆಗೆ ತಾಂತ್ರಿಕ ಪರಿಹಾರ ಕಂಡುಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಜನರ ಸುರಕ್ಷತೆಯ ವಿಷಯದಲ್ಲಿ ಯಾವುದೇ ನಿರ್ಲಕ್ಷ್ಯವನ್ನು ಸಹಿಸುವುದಿಲ್ಲ,” ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಬಡಾವಣೆಯ ಪ್ರಮುಖರು ಉಪಸ್ಥಿತರಿದ್ದರು.
ಆಯುಕ್ತರು ಹೇಳಿದ್ದೇನು
ಮಹಾನಗರ ಪಾಲಿಕೆ ಆಯುಕ್ತರಾದ ಮಾಯಣ್ಣಗೌಡರು ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ ಒಂದು ವಾರದಿಂದ ಅಕಾಲಿಕ ಮಳೆ ಸುರಿಯುತ್ತಿದ್ದು, ರಭಸವಾಗಿ ಸುರಿದ ಮಳೆಗೆ ತಗ್ಗು ಪ್ರದೇಶಗಳಲ್ಲಿ ಹಾನಿಯಾಗಿದೆ. ನಾವು ನಿನ್ನೆ ಪಾಲಿಕೆವತಿಯಿಂದ ರಾತ್ರಿಯಿಡಿ ಮಳೆಪೀಡಿತ ಪ್ರದೇಶಗಳಿಗೆ ಭೇಟಿನೀಡಿ, ತತ್ಕ್ಷಣಕ್ಕೆ ಬೇಕಾದ ಕ್ರಮಗಳನ್ನು ಕೈಗೊಂಡಿದ್ದೇವೆ. ಉರುಳಿದ ಮರಗಳನ್ನು ತೆರವುಗೊಳಿಸಿದ್ದೇವೆ. ಅದಕ್ಕಾಗಿಯೇ ರ್ಯಾಪಿಡ್ ಆಕ್ಷನ್ ಫೋರ್ಸ್ ರೀತಿಯ ಟಾಸ್ಕ್ ಫೋರ್ಸ್ ರಚನೆ ಮಾಡಿದ್ದೇವೆ. ೨೪ಘಿ೭ ಈ ಸೇವಾ ಕೇಂದ್ರ ತೆರೆದಿದ್ದು ಮಳೆಹಾನಿ ಸಂಭವಿಸಿದರೆ ಕೂಡಲೇ ಹೆಲ್ಪ್ಲೈನ್ ಸಂಖ್ಯೆ ೧೮೦೦೪೨೫೭೬೭೭ಕ್ಕೆ ಸಾರ್ವಜನಿಕರು ಸಂಪರ್ಕಿಸುವಂತೆ ಅವರು ಕೋರಿದರು.
ಯುಟಿಪಿ ಚಾನಲ್ಗಳಿಂದ ಮೊದಲ ಮಳೆಗೆ ರಭಸವಾಗಿ ಹರಿದ ನೀರು ಕಸ-ಕಡ್ಡಿಯ ಜೊತೆಗೆ ಕೆಲವು ಮನೆಗಳಿಗೆ ನುಗ್ಗಿದೆ ಅದನ್ನೆಲ್ಲಾ ತೆರವುಗೊಳಿಸಿದ್ದೇವೆ. ಏಪ್ರಿಲ್ ೧೫ರಿಂದ ೩೦ರ ವರೆಗೆ ಎಲ್ಲಾ ಚರಂಡಿ, ಕಾಲುವೆಯ ಹೂಳೆತ್ತಲು ಟೆಂಡರ್ ಆಗಿದೆ. ಈ ಬಾರಿ ಅಕಾಲಿಕ ಮಳೆಯಿಂದ ಈ ರೀತಿ ತೊಂದರೆಯಾಗಿದೆ. ಪಾಲಿಕೆ ಅಧಿಕಾರಿಗಳು ಮತ್ತು ತಹಶೀಲ್ದಾರ್ ನೇತೃತ್ವದ ತಂಡ ಮಳೆಹಾನಿಯ ಅಂದಾಜು ಮಾಡಲಿದ್ದಾರೆ. ಆರ್ಎಂಎಲ್ ನಗರ, ಸೀಗೆಹಟ್ಟಿ, ಅಶ್ವತ್ಥ್ನಗರ, ಚಾಲುಕ್ಯನಗರ, ಕೃಷಿನಗರ, ಶರಾವತಿನಗರ ಮೊದಲಾದೆಡೆ ಮನೆಗಳಿಗೆ ನೀರು ನುಗ್ಗಿದ್ದು ರಾತ್ರಿ ಅಧಿಕಾರಿಗಳು ಸ್ಥಳಕ್ಕೆ ಭೇಟಿನೀಡಿದ್ದಾರೆ ಎಂದರು.