ಶಿವಮೊಗ್ಗ : ಯುವಕರು ಸ್ಪರ್ಧಾ ಮನೋಭಾವ ಬೆಳೆಸಿಕೊಳ್ಳಬೇಕು. ದುಶ್ಚಟಗಳನ್ನು ಬಿಟ್ಟು ಕ್ರೀಡೆಗಳಲ್ಲಿ ಭಾಗವಹಿಸಬೇಕು ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ಅವರು ಇಂದು ನಗರದ ಎನ್ಇಎಸ್ ಕ್ರೀಡಾಂಗಣದಲ್ಲಿ ತಮ್ಮ ಪುತ್ರ ಕೆ.ಈ. ಕಾಂತೇಶ್ ಅವರ ಹುಟ್ಟುಹಬ್ಬದ ಅಂಗವಾಗಿ ಅಭಿಮಾನಿ ಬಳಗದಿಂದ ಹಮ್ಮಿಕೊಂಡಿದ್ದ ಎರಡು ದಿನಗಳ ಕ್ರಿಕೆಟ್ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದರು. ಈ ಬಾರಿ ಕ್ರಿಕೇಟ್ ಪಂದ್ಯಾವಳಿಯಲ್ಲಿ ೧೮ ತಂಡಗಳು ಉತ್ಸಾಹದಿಂದ ಭಾಗವಹಿಸಲಿದ್ದು ಸಂತೋಷದ ವಿಚಾರವಾಗಿದೆ. ಯುವಕರಲ್ಲಿ ಕ್ರೀಡಾಸಕ್ತಿ ಇರಬೇಕು. ಹೆಚ್ಚು ಹೆಚ್ಚಾಗಿ ಭಾಗವಹಿಸಬೇಕು ಸೋಲು-ಗೆಲುವು ಸ್ಪರ್ಧೆಯಲ್ಲಿ ಸ್ವಾಭಾವಿಕ. ಕ್ರೀಡಾಕೂಟಗಳು ಭ್ರಾತೃತ್ವವನ್ನು ಬೆಳೆಸುತ್ತದೆ. ಎಲ್ಲರೂ ಅಣ್ಣ-ತಮ್ಮಂದಿರಂತೆ ಖುಷಿಯಾಗಿ ಆಟದಲ್ಲಿ ಸ್ಪರ್ಧಾ ಮನೋಭಾವದಿಂದ ಭಾಗವಹಿಸಿದಾಗ ದೈಹಿಕ ಮತ್ತು ಮಾನಸಿಕ ಆರೋಗ್ಯ ಹೆಚ್ಚಾಗುತ್ತದೆ ಎಂದರು.

ಜಿ.ಪಂ. ಮಾಜಿ ಸದಸ್ಯ ಕೆ.ಈ. ಕಾಂತೇಶ್ ಮಾತನಾಡಿ, ನನ್ನ ಮೇಲಿನ ಅಭಿಮಾನದಿಂದ ಇಷ್ಟೊಂದು ಯುವಕರು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿದ್ದೀರಿ. ಯಾರೇ ಗೆದ್ದರೂ ಕಪ್ ನಮ್ಮದೇ. ಶಿವಮೊಗ್ಗ ಧಾರ್ಮಿಕ, ಸಾಂಸ್ಕೃತಿಕ, ರಾಜಕೀಯ ಮತ್ತು ಕ್ರೀಡಾ ಕ್ಷೇತ್ರಗಳಲ್ಲಿ ಯಾವಾಗಲೂ ಮುಂದಿದೆ. ನಿಮ್ಮೆಲ್ಲರ ಆಶೀರ್ವಾದ ನನ್ನ ಮೇಲೆ ಇರಲಿ. ನಾನು ನಿಮ್ಮಲ್ಲಿ ಒಬ್ಬನಾಗಿ ಸದಾ ಜೊತೆಯಲ್ಲಿರುತ್ತೇನೆ ನನ್ನನ್ನು ಬೆಳೆಸಿ ಎಂದರು.
ಮಾಜಿ ಕಾರ್ಪೋರೇಟರ್ ಈ. ವಿಶ್ವಾಸ್ ಮಾತನಾಡಿ, ನಾಳೆ ಯುವ ನಾಯಕ ಕೆ.ಈ. ಕಾಂತೇಶ್ ಅವರ ಹುಟ್ಟುಹಬ್ಬದ ಅಂಗವಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ. ಬೆಳಿಗ್ಗೆ ಶಿವಾಲಯದಲ್ಲಿ ೮ಗಂಟೆಗೆ ಗೋಪೂಜೆ, ೮.೩೦ಕ್ಕೆ ಬೆಕ್ಕಿನ ಕಲ್ಮಠದಲ್ಲಿ ಗದ್ದುಗೆಗೆ ಶಂಕುಸ್ಥಾಪನೆ ಮತ್ತು ರಕ್ತದಾನ ಶಿಬಿರ, ಆರೋಗ್ಯ ಶಿಬಿರ, ಸಂಜೆ ಶುಭ ಮಂಗಳದಲ್ಲಿ ಬಿಗ್ಬಾಸ್ ಖ್ಯಾತಿಯ ಗಿಲ್ಲಿನಟ ಆಗಮಿಸಲಿದ್ದು, ಕ್ರಿಕೇಟ್ ವಿಜೇತರಿಗೆ ನಾಳೆ ಅವರ ಕೈಯಲ್ಲೇ ಟ್ರೋಫಿ ವಿತರಿಸಲಾಗುವುದು. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಎಲ್ಲಾ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ವಿನಂತಿಸಿದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ನಾಗಣ್ಣ, ಚಟ್ನಳ್ಳಿ ರಮೇಶ್ ಮತ್ತಿತರರಿದ್ದರು.