ಶಿವಮೊಗ್ಗ : ರಸ್ತೆಯಲ್ಲಿ ವಾಹನ ನಿಲ್ಲಿಸಿ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದ ಅಬಕಾರಿ ಇಲಾಖೆಯ ವಾಹನದ ವಿರುದ್ಧ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ದಂಡ ಹಾಕಿದ ಘಟನೆ ನಡೆದಿದೆ.
ಅಬಕಾರಿ ಇಲಾಖೆಗೆ ಸಂಬಂಧಿಸಿದ ವಾಹನ ಸಂಖ್ಯೆ ಕೆ.ಎ.೦೧ಜಿ-೫೭೮೭ರ ವಾಹನ ವಾಹನ ಚಾಲಕ ಸಾಗರ ರಸ್ತೆಯ ಆಯನೂರು ಗೇಟ್ ಸರ್ಕಲ್ ಬಳಿ ರಸ್ತೆಯಲ್ಲಿಯೇ ಗಾಡಿ ನಿಲ್ಲಿಸಿ ಸಂಚರಿಸುವ ಇತರೆ ವಾಹನಗಳಿಗೆ ತಡೆಯನ್ನೊಡ್ಡಿದ್ದು ಸಾರ್ವಜನಿಕರು ಈ ಬಗ್ಗೆ ಪ್ರಶ್ನೆ ಮಾಡಿದಾಗ ಉಡಾಫೆಯ ಉತ್ತರ ಕೊಟ್ಟು ಇದು ಸರ್ಕಾರಿ ವಾಹನ, ಅಧಿಕಾರಿಗಳು ಪರಿಶೀಲನೆಗೆ ಹೋಗಿದ್ದಾರೆ. ಅವರು ಬರುವವರೆಗೆ ವಾಹನ ತೆಗೆಯುವುದಿಲ್ಲವೆಂದು ಮೊಂಡಾಟ ಮಾಡಿದ. ಸರ್ಕಾರಿ ವಾಹನ ಆದರೇನಂತೆ ಸಾರ್ವಜನಿಕರಿಗೆ ತೊಂದರೆ ಕೊಡಬಾರದಲ್ಲವೇ ಎಂದು ಹೇಳಿದರೂ ಕೂಡ ಆತ ವಾಹನ ತೆಗೆಯಲಿಲ್ಲ.

ಇದರಿಂದ ಬೇಸರಗೊಂಡ ಸಾರ್ವಜನಿಕರು ತಕ್ಷಣವೇ ಸಂಚಾರಿ ಪೊಲೀಸ್ ಠಾಣೆಗೆ ಸುದ್ದಿ ಮುಟ್ಟಿಸಿದರು. ಸುದ್ದಿ ತಿಳಿದು ೫ ನಿಮಿಷದಲ್ಲಿಯೇ ಟ್ರಾಫಿಕ್ ಇನ್ಸ್ಪೆಕ್ಟರ್ ದೇವರಾಜು ಅವರು ಸ್ಥಳಕ್ಕೆ ಬಂದು ವಾಹನವನ್ನು ತೆಗೆಸಿದ್ದೂ ಅಲ್ಲದೆ, ಆತನಿಗೆ ಸ್ಥಳದಲ್ಲಿಯೇ ದಂಡ ಹಾಕಿದರು. ಇನ್ಸ್ಪೆಕ್ಟರ್ ದೇವರಾಜು ಅವರು ಈ ಕಾರ್ಯಕ್ಷಮತೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.