ಶಿವಮೊಗ್ಗ: ಯುವ ಸಮೂಹ ಆವಿಷ್ಕಾರಿ ಯೋಜನೆಗಳ ಸೃಷ್ಟಿಯ ಜೊತೆಗೆ ಅವುಗಳನ್ನು ಕಾನೂನು ಬದ್ದವಾಗಿ ರಕ್ಷಿಸಿ ವಾಣಿಜ್ಯೀಕರಣಗೊಳಿಸುವತ್ತ ಕೇಂದ್ರಿಕರಿಸಬೇಕಿದೆ ಎಂದು ಪೇಟೆಂಟ್ಗಳು ಮತ್ತು ಬೌದ್ಧಿಕ ಆಸ್ತಿ ಹಕ್ಕುಗಳ ತಜ್ಞ (ಐಪಿಆರ್) ಡಾ.ವಿವೇಕ್ ಆನಂದಸಾಗರ್ ಹೇಳಿದರು.
ನಗರದ ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಬುಧವಾರ ಎಐಸಿಟಿಇ ಐಡಿಯಾ ಲ್ಯಾಬ್, ವಿಟಿಯು ಬೆಳಗಾವಿ, ಎರಾ ಫೌಂಡೇಶನ್ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಅಂತರಶಾಖಾ ಪ್ರಾಜೆಕ್ಟ್ ಆಧಾರಿತ ಕಲಿಕೆಯ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಕಾಲೇಜುಗಳಲ್ಲಿ ಬೌದ್ಧಿಕ ಸ್ವತ್ತು ಹಕ್ಕುಗಳ (IPR) ಕೇಂದ್ರಗಳನ್ನು ಸ್ಥಾಪಿಸುವುದು, ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಅತ್ಯಂತ ಅಗತ್ಯವಾದ ಅಂಶವಾಗಿದೆ. ಇವು ವಿದ್ಯಾರ್ಥಿಗಳಲ್ಲಿರುವ ಸೃಜನಶೀಲತೆ ಮತ್ತು ಹೊಸ ಆವಿಷ್ಕಾರಗಳನ್ನು ಗುರುತಿಸಿ, ಅವುಗಳನ್ನು ಸರಿಯಾದ ಮಾರ್ಗದಲ್ಲಿ ಮುಂದುವರಿಸಲು ವೇದಿಕೆಯನ್ನು ಒದಗಿಸುತ್ತವೆ. ಸಾಮಾನ್ಯವಾಗಿ ವಿದ್ಯಾರ್ಥಿಗಳು ಹಲವಾರು ನವೀನ ಆಲೋಚನೆಗಳನ್ನು ರೂಪಿಸುತ್ತಾರೆ, ಆದರೆ ಅವುಗಳನ್ನು ಪೇಟೆಂಟ್ ರೂಪದಲ್ಲಿ ನೋಂದಾಯಿಸುವ ವಿಧಾನಗಳ ಅರಿವಿನ ಕೊರತೆಯಿಂದ, ಅವುಗಳು ಕೇವಲ ಪ್ರಾಜೆಕ್ಟ್ ಮಟ್ಟದಲ್ಲೇ ಉಳಿಯುತ್ತವೆ.
ವಿಶ್ವ ಬೌದ್ಧಿಕ ಸ್ವತ್ತು ಸಂಸ್ಥೆ (WIPO) ಪ್ರಕಟಿಸುವ ಜಾಗತಿಕ ನಾವೀನ್ಯತೆ ಸೂಚ್ಯಂಕದಲ್ಲಿ ಭಾರತವು 42ನೇ ಸ್ಥಾನದಲ್ಲಿದೆ. ನಮ್ಮ ದೇಶದಲ್ಲಿ ಇನ್ನಷ್ಟು ಸಂಶೋಧನೆ ಮತ್ತು ಪೇಟೆಂಟ್ ಸಲ್ಲಿಕೆಗಳ ಅಗತ್ಯವಿದೆ. ಈ ಸ್ಥಾನವನ್ನು ಉತ್ತಮಗೊಳಿಸಲು, ಶಿಕ್ಷಣ ಸಂಸ್ಥೆಗಳು, ಸಂಶೋಧಕರು ಮತ್ತು ವಿದ್ಯಾರ್ಥಿಗಳು ಒಟ್ಟಾಗಿ ಕಾರ್ಯನಿರ್ವಹಿಸಿ, ಹೆಚ್ಚಿನ ಪ್ರಮಾಣದಲ್ಲಿ ನವೀನ ಆವಿಷ್ಕಾರಗಳನ್ನು ಅಭಿವೃದ್ಧಿಪಡಿಸಿ, ಅವುಗಳನ್ನು ಪೇಟೆಂಟ್ ಮೂಲಕ ರಕ್ಷಿಸಬೇಕು ಎಂದು ಹೇಳಿದರು.
ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ಎನ್.ನಾಗರಾಜ ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿ ವಿಭಾಗಗಳ ನಡುವಿನ ಸೀಮಿತತೆಯ ಆಚೆಗೆ ಉಪನ್ಯಾಸಕ ವರ್ಗ ಯೋಚಿಸಬೇಕಿದೆ. ಪ್ರಾಜೆಕ್ಟ್ ಆಧಾರಿತ ಕಲಿಕೆ ಮೂಲಕ ನವೀನತೆ, ಡಿಸೈನ್ ಥಿಂಕಿಂಗ್, ಸಹಾನುಭೂತಿ, ಮೂಲ ಮಾದರಿಗಳ ಅಭಿವೃದ್ಧಿಯಂತಹ ಸೃಜನಶೀಲತೆಯಲ್ಲಿ ತೊಡಗಿಸಿಕೊಳ್ಳಬಹುದಾಗಿದೆ ಎಂದು ಹೇಳಿದರು.
ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ.ವೈ.ವಿಜಯಕುಮಾರ್ ಮಾತನಾಡಿದರು. ಸಂಶೋಧನಾ ಡೀನ್ ಡಾ.ಎಸ್.ವಿ.ಸತ್ಯನಾರಾಯಣ, ಎಐಸಿಟಿಇ ಐಡಿಯಾ ಲ್ಯಾಬ್ ಸಂಯೋಜಕ ಡಾ.ಎಂ.ಎಚ್.ಮೋಯಿನುದ್ದಿನ್ ಖಾನ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.