ಶಿವಮೊಗ್ಗ,ಫೆ.07: ಮೂವತ್ತೇರಡು ವರ್ಷಗಳ ನಂತರ ಶಿವಮೊಗ್ಗ ನಗರದಲ್ಲಿ ಪಂಚಪೀಠ ಉತ್ಸವ ಹಾಗೂ ಪಂಚಪೀಠ ಶ್ರೀಗಳ ಅಡ್ಡಪಲ್ಲಕ್ಕಿ ಉತ್ಸವವನ್ನು ಅದ್ದೂರಿಯಾಗಿ ನಡೆಸಲು ನಿರ್ಧರಿಸಲಾಗಿದೆ.
ನಿನ್ನೆ ವೀರಶೈವ ಕಲ್ಯಾಣ ಮಂದಿರದಲ್ಲಿ ಯಡೆಯೂರು ಹಾಗೂ ಬಿಳಕಿ ಶ್ರೀಗಳ ಸಾನ್ನಿಧ್ಯದಲ್ಲಿ ನಡೆದ ವೀರಶೈವ ಲಿಂಗಾಯತ ಸಮಾಜದ ಪ್ರಮುಖರ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಯಿತು.
ಪಕ್ಷಾತೀತವಾಗಿ ಸಮಾಜದ ಎಲ್ಲರೂ ಒಂದಾಗಿ ಈ ಉತ್ಸವವನ್ನು ಯಶಸ್ವಿಯಾಗಿ ನಡೆಸಲು ಸಂಸದ ಬಿ.ವೈ. ರಾಘವೇಂದ್ರ ಅವರ ಗೌರವಾಧ್ಯಕ್ಷತೆಯಲ್ಲಿ ವಿವಿಧ ಸಮಿತಿಗಳನ್ನು ರಚಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.
ಮೇ. 16 ಮತ್ತು 17 ರಂದು ಎರಡು ದಿನಗಳ ಕಾಲ ಹಬ್ಬದ ರೀತಿಯಲ್ಲಿ ಈ ಉತ್ಸವ ನಡೆಯಬೇಕು ಎಂದು ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.
ಮಾಜಿ ಸಂಸದ ಆಯನೂರು ಮಂಜುನಾಥ್ ಮಾತನಾಡಿ, ೩೨ ವರ್ಷಗಳ ಹಿಂದೆ ಬಿ.ಎಸ್. ಯಡಿಯೂರಪ್ಪನವರು ವಿರೋಧ ಪಕ್ಷದ ನಾಯಕರಾಗಿದ್ದಾಗ ಪಂಚಪೀಠ ಶ್ರೀಗಳ ಉತ್ಸವವನ್ನು ಯಶಸ್ವಿಯಾಗಿ ಮಾಡಲಾಗಿತ್ತು. ಈಗ ಇಂದಿನ ಯುವ ಪೀಳಿಗೆಗೆ ಈ ಉತ್ಸವವನ್ನು ಪರಿಚಯಿಸುವ ನಿಟ್ಟಿನಲ್ಲಿ ಇನ್ನಷ್ಟು ವಿಜೃಂಭಣೆಯಿಂದ ಉತ್ಸವ ಹಮ್ಮಿಕೊಳ್ಳಲು ವಿವಿಧ ಸಮಿತಿ ರಚಿಸಿ ಅಚ್ಚುಕಟ್ಟಾಗಿ ನಡೆಸಲು ಸಲಹೆ ನೀಡಿದರು.
ಶ್ರೀ ಬಸವೇಶ್ವರ ಪಟ್ಟಣ ಪತ್ತಿನ ಸಹಕಾರ ಸಂಘ ಶತಮಾನೋತ್ಸವದ ಹಿನ್ನೆಲೆಯಲ್ಲಿ ಮೇ 16 ರಂದು ಪಂಚಪೀಠ ಶ್ರೀಗಳ ಸಾನ್ನಿಧ್ಯದಲ್ಲಿ ಧಾರ್ಮಿಕ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಹಾಗೂ ಮೇ 17ರಂದು ಹಾಗೂ ಸಮಾಜದಿಂದ ಪಂಚಪೀಠ ಶ್ರೀಗಳ ಅಡ್ಡಪಲ್ಲಕ್ಕಿ ಉತ್ಸವ ಹಾಗೂ ಧಾರ್ಮಿಕ ಸಭೆಯನ್ನು ನಡೆಸಲು ಸಭೆಯಲ್ಲಿ ಚರ್ಚಿಸಲಾಯಿತು.
ಅಡ್ಡಪಲ್ಲಕ್ಕಿ ಉತ್ಸವದ ಧಾರ್ಮಿಕ ಸಭೆಯನ್ನು ಎನ್ಇಎಸ್ ಮೈದಾನ ಅಥವಾ ಅಲ್ಲಮಪ್ರಭು ಮೈದಾನದಲ್ಲಿ ೧೫ ರಿಂದ ೨೦ ಸಾವಿರ ಜನರು ಸೇರುವಂತೆ ವ್ಯವಸ್ಥಿತವಾಗಿ ಆಯೋಜಿಸಲು ಹಾಗೂ ಅಡ್ಡಪಲ್ಲಕ್ಕಿ ಉತ್ಸವವನ್ನು ಗಾಂದಿ ಬಜಾರ್ನಿಂದ ಪ್ರಾರಂಭಿಸಿ ಧಾರ್ಮಿಕ ಸಭೆಯ ವೇದಿಕೆ ವರೆಗೂ ಪೂರ್ಣಕುಂಬದೊಂದಿಗೆ ಸಾಗಲು ತೀರ್ಮಾನಿಸಲಾಯಿತು.
ಈ ಉತ್ಸವ ಯಶಸ್ವಿಯಾಗಿ ನಡೆಸಲು ಸಮಾಜದ ಹಿರಿಯರು ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಕೆಆರ್ಡಿಎಲ್ ಅಧ್ಯಕ್ಷ ಸಂಗಮೇಶ್ ಸೇರಿದಂತೆ ಪಕ್ಷಾತೀತವಾಗಿ ಸಮಾಜದ ಪ್ರಮುಖರ ಮಾರ್ಗದರ್ಶನ ಸಲಹೆ ಸಹಕಾರ ಪಡೆಯಲು ಚರ್ಚಿಸಲಾಯಿತು ಹಾಗೂ ಸ್ವಾಗತ ಸಮಿತಿ, ವೇದಿಕೆ ಸಮಿತಿ, ಹಣಕಾಸು ಸಮಿತಿ, ಮೆರವಣಿಗೆ ಸಮಿತಿ, ಪ್ರಚಾರ ಸಮಿತಿ, ದಾಸೋಹ ಸಮಿತಿ ಹೀಗೆ ವಿವಿಧ ಸಮಿತಿಗಳನ್ನು ರಚಿಸಲು ನಿರ್ಧರಿಸಲಾಯಿತು.
ಶ್ರೀ ಬಸವೇಶ್ವರ ವೀರಶೈವ ಲಿಂಗಾಯತ ಸಮಾಜ ಸೇವಾ ಸಂಘದ ಅಧ್ಯಕ್ಷ ಎಸ್.ಎಸ್. ಜ್ಯೋತಿ ಪ್ರಕಾಶ್ ಹಾಗೂ ಕಾರ್ಯದರ್ಶಿ ಎಸ್.ಪಿ. ದಿನೇಶ್ ಸಭೆಯಲ್ಲಿ ಮಾತನಾಡಿ, ಪಂಚಪೀಠ ಶ್ರೀಗಳ ಅಡ್ಡಪಲ್ಲಕ್ಕಿ ಉತ್ಸವದ ಜವಾಬ್ದಾರಿಯನ್ನು ಎಲ್ಲರ ಸಹಕಾರದೊಂದಿಗೆ ನಿರ್ವ ಹಿಸುವುದಾಗಿ ಘೋಷಿಸಿದರು.
ಶಾಸಕ ಎಸ್.ಎನ್. ಚನ್ನಬಸಪ್ಪ ಮಾತನಾಡಿ, ಮೂವತ್ತೆರಡು ವರ್ಷಗಳ ನಂತರ ಹಮ್ಮಿಕೊಳ್ಳುತ್ತಿರುವ ಅಡ್ಡ ಪಲ್ಲಕ್ಕಿ ಉತ್ಸವ ಇಡೀ ನಗರವನ್ನು ಶೃಂಗರಿಸಿ ಅದ್ದೂರಿಯಾಗಿ ಮಾಡೋಣ ಎಂದರು.
ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ, ಕಾಂಗ್ರೆಸ್ ಮುಖಂಡ ಹೆಚ್.ಸಿ. ಯೋಗೀಶ್, ಸಮಾಜದ ಪ್ರಮುಖರಾದ ರುದ್ರಮುನಿ ಸಜ್ಜನ್, ಹೆಚ್.ವಿ. ಮಹೇಶ್ವರಪ್ಪ, ವಿರುಪಾಕ್ಷಪ್ಪ, ಚಂದ್ರಯ್ಯ, ಬೆನಕಪ್ಪ, ಎಂ.ಆರ್. ಪ್ರಕಾಶ್ ಮತಿತ್ತರರು ಸಭೆಯಲ್ಲಿ ಉಪಸ್ಥಿತರಿದ್ದು ಉತ್ಸವಕ್ಕೆ ಸಲಹೆ ಸೂಚನೆ ನೀಡಿದರು.
ಪೆಬ್ರವರಿ 19 ರಂದು ಈ ಕುರಿತು ಎರಡನೇ ಸಭೆ ನಡೆಸಲು ತೀರ್ಮಾನಿಸಲಾಯಿತು.
- ಸಂಸದ ಬಿವೈಆರ್ ಗೌರವಾಧ್ಯಕ್ಷತೆಯಲ್ಲಿ ವಿವಿಧ ಸಮಿತಿ ರಚನೆ.
- ಮೇ 16-17 ಎರಡು ದಿನ ಅದ್ದೂರಿ ಕಾರ್ಯಕ್ರಮಗಳು.
- 20 ಸಾವಿರ ವೀರಶೈವ ಲಿಂಗಾಯತರು ಪಾಲ್ಗೊಳ್ಳುವ ನಿರೀಕ್ಷೆ.
- ಇಡೀ ನಗರವನ್ನು ಶೃಂಗರಿಸಲು ನಿರ್ಧಾರ.
- ಪಕ್ಷಾತೀತವಾಗಿ ಸಮಾಜ ಬಾಂಧವರ ನೇತೃತ್ವ.