
ನೆಗಿಟೀವ್ ಥಿಂಕಿಂಗ್
ವಾರದ ಅಂಕಣ- 70
ಗಜೇಂದ್ರಸ್ವಾಮಿ ಎಸ್.ಕೆ., ಶಿವಮೊಗ್ಗ,
(ಅರಹತೊಳಲು, ಭದ್ರಾವತಿ)
ಈ ಜಗತ್ತಲ್ಲಿ ನಾವುಗಳೆಲ್ಲಾ ಕನಿಷ್ಟ ತಪ್ಪುಗಳನ್ನಾದರೂ ಮಾಡಿರುತ್ತೇವೆ. ಆದರೆ, ಕೆಲವರಿಗೆ ಅದು ಕಾಡುತ್ತೆ, ಆ ಕಾಡುವುದೇ ಮೊದಲನೇ ತಪ್ಪು, ಏಕೆಂದರೆ ತಪ್ಪು ಮಾಡೋದು ಸಹಜ, ಅದನ್ನ ಮುಂದೆ ತಿದ್ದಿಕೊಂಡು ನಡೆಯೋದು ಮನುಜಗುಣವಾಗಬೇಕು, ಬರೀ ಅದೇ ಹಳೆ ತಪ್ಪುಗಳನ್ನ ನೆನಪಿಸಿಕೊಳ್ಳಬಾರದು. ಈ ವಿಷಯವೇ ಈ ವಾರದ ನೆಗಿಟೀವ್ ಥಿಂಕಿಂಗ್ ಅಂಕಣ.

ತಪ್ಪು ಮಾಡದಿದ್ರೆ ಮನುಜಾಗಿ ಹುಟ್ಟಿದ್ದೇ ತಪ್ಪು..!, ತಪ್ಪು ಮಾಡೋಣ ಬನ್ನಿ ಏನಂತೀರಿ?
ಯಂಡಮೂರಿ ವೀರೇಂದ್ರನಾಥ್ ಅವರ “ತಪ್ಪು ಮಾಡೋಣ ಬನ್ನಿ” ಎಂಬ ಪುಸ್ತಕದ ಮೇಲೆ ಕಣ್ಣಾಡಿಸಿದಾಗ ಕಂಡ ಪದಗಳು ಮೈ ನವಿರೇಳಿಸಿದವು.
ಅವರು ಆರಂಭದಲ್ಲೇ ತಪ್ಪು ಮಾಡೋಣ ಬನ್ನಿ ಎಂದ ಕೂಡಲೇ ಯಾವುದೋ ಕರಾಳ ತಪ್ಪಿನ ಕುರಿತು ಯೋಚಿಸುವುದೇ ಮೊದಲನೇ ತಪ್ಪು ಎಂಬ ವಾಕ್ಯ ಅತ್ಯಂತ ಗಂಭೀರವಾಗಿ ನಾಟಿತು. ಸಾಕಷ್ಟು ಉದಾಹರಣೆಗಳ ಸಹಿತ ಪುಸ್ತಕದ ಬಹುತೇಕ ಭಾಗಗಳಲ್ಲಿ ತಪ್ಪು ಹೇಗೆ? ಹೇಗೆ ಅದರಿಂದ ಹೊರಬರಬೇಕು? ಹೇಗೆ ನಮ್ಮಿಂದ ತಪ್ಪಾಗುತ್ತದೆ? ತಪ್ಪುಗಳನ್ನು ನಾವು ನಿರ್ದಿಷ್ಟವಾಗಿ ಗಮನಿಸುವುದು ಹೇಗೆ ಎಂಬ ಅಂಶ ಆ ಪುಸ್ತಕದ ಅಡಿಯಲ್ಲಿ ನಿಜಕ್ಕೂ ಮೂಡಿ ಬಂದಿದ್ದು ಒಂದು ಅತ್ಯುತ್ತಮ ಬದುಕ ಬರಹ ಇದಾಗಿದೆ ಎಂದರೆ ತಪ್ಪಾಗಲಿಕ್ಕಿಲ್ಲ.

ಮಕ್ಕಳ ಜೊತೆ ಶಿಕ್ಷಕರ ಸಂಭಾಷಣೆ ನಡೆಸುವ ಸಾಲುಗಳು ಅತ್ಯಂತ ವಿಶೇಷವಾಗಿವೆ. 12 ಆದಮೇಲೆ ಎಷ್ಟು ಬರುತ್ತದೆ ಎಂದು ವಿದ್ಯಾರ್ಥಿ ಓರ್ವನಿಗೆ ಶಿಕ್ಷಕರು ಪ್ರಶ್ನಿಸಿದಾಗ ಆತ ಒಂದಿಷ್ಟು ಯೋಚಿಸದೆ ಒಂದು ಎಂದ. ಅಲ್ಲಪ್ಪ 12 ಆದಮೇಲೆ 13 ಬರಬೇಕಲ್ವೇನೋ? ಇಷ್ಟು ಸಣ್ಣ ಲೆಕ್ಕಾನೆ ತಪ್ಪು ತಪ್ಪಾಗಿ ಮಾಡಿದರೆ ಮುಂದೆ ಹೇಗೆ ನೀ ಉದ್ದಾರವಾಗುತ್ತೀಯಾ? ಆ ವಿದ್ಯಾರ್ಥಿ ಒಂದಿಷ್ಟು ಯೋಚಿಸದೆ ಸರ್ ಗಡಿಯಾರದಲ್ಲಿ 12 ಆದ ಮೇಲೆ ಒಂದೇ ಬರುತ್ತದೆ ಎಂದ. ಇಲ್ಲಿ ತಪ್ಪು ಯಾರದು? ಶಿಕ್ಷಕರು ಅನುಕ್ರಮದ ಬಗ್ಗೆ ಕೇಳಿದರೆ ವಿದ್ಯಾರ್ಥಿ ಗಡಿಯಾರದ ಬಗ್ಗೆ ಹೇಳಿದ. ಅನುಕ್ರಮ ಅಥವಾ ವರಸೆ ಕ್ರಮ ಅಂದರೆ ಇದೇನಾ?
ಏಕೆಂದರೆ ನಂತರ ಶಿಕ್ಷಕರು ಎಲ್ಲಾ ವಿದ್ಯಾರ್ಥಿಗಳಿಗೆ ಇದೇ ಪ್ರಶ್ನೆ ಕೇಳಿದಾಗ ಅವರು ಒಟ್ಟಾಗಿ 13 ಎಂದರು. ಯಾರ ತಪ್ಪು ಇಲ್ಲಿ ಕಾಣುತ್ತದೆ. ಕೆಲವೊಮ್ಮೆ ತಪ್ಪುಗಳು ಒಪ್ಪಾಗುವುದು ಇದೇ ದಾಟಿಯಲ್ಲಿ ಅಲ್ಲವೇ?

ಹೊಗೆದ ಬೇಗ ಒಣಗಲು ಏನು ಮಾಡಬೇಕು ಎಂಬ ಪ್ರಶ್ನೆಗೆ ಬಿಸಿಲಿನಲ್ಲಿ ಒಣಗಿಸಬೇಕು, ಇಸ್ತ್ರೀ ಪಟ್ಟಿಗೆಯಲ್ಲಿ ಬಿಸಿ ಮಾಡಬೇಕು, ಮನೆಯನ್ನು ಸೂರ್ಯನ ಕಡೆ ತಿರುಗಿಸಬೇಕು ಎಂಬ ಮೂರು ಉತ್ತರಗಳಿದ್ದವು. ನಾವೇನಾದರೂ ಮನೆಯನ್ನು ಸೂರ್ಯನ ಕಡೆಗೆ ತಿರುಗಿಸಬೇಕು ಎಂದು ಟಿಕ್ ಮಾಡಿದರೆ ಪಕ್ಕದವರೇ ನಗುತ್ತಾರೆ. ಆದರೆ ಬ್ರೆಜಿಲ್ ದೇಶದ ಪ್ರತಿಭಾ ಪಟ್ಟಣದಲ್ಲಿ ಒಂದು ಟವರ್ ಇದೆ. ಅದರ ಪ್ರತಿ ಅಂತಸ್ತು ಸ್ವಿಚ್ ಹಾಕಿದರೆ ನಮಗೆ ಬೇಕಾದ ದಿಕ್ಕಿಗೆ ತಿರುಗುತ್ತದೆ. ಅಲ್ಲಿನ ವ್ಯವಸ್ಥೆ ಈ ಉತ್ತರಕ್ಕೆ ತಾಳೆಯಾಗುತ್ತದೆ.

ನಮ್ಮ ಬದುಕಿನ ಇಂದಿನ ಅಗತ್ಯಗಳು ಬೆಳೆದ ಹಾಗೆ ಆಲೋಚನೆಗಳು ಸಹ ಬದಲಾಗುತ್ತಿವೆ. ಕೊಳ್ಳುವವರು ಅಭಿರುಚಿಯನ್ನು ಹೇಗೆ ಬದಲಾಯಿಸಿಕೊಳ್ಳುತ್ತಾರೋ ಹಾಗೆಯೇ ವ್ಯಾಪಾರಿಗಳು ಸಹ ಅದೇ ರೀತಿಯಲ್ಲಿ ಹೊಸ ಬಗೆಯ ವ್ಯವಹಾರ ಮಾಡುತ್ತಾರೆ. ನ್ಯಾಯ, ಅನ್ಯಾಯ ನೈತಿಕತೆ ಮತ್ತು ಅನೈತಿಕತೆಗಳ ನಡುವೆ ಇದ್ದ ಅಂತರವು ಕಡಿಮೆಯಾಗುತ್ತಿದೆ ಇಲ್ಲಿ ತಪ್ಪು ಮಾಡೋದು ಸಹಜವಲ್ಲವೇ? ಆ ಪುಸ್ತಕದ ಪ್ರತಿ ಹಾಳೆಗಳನ್ನು ಅವಲೋಕಿಸಿದಾಗ ಅತ್ಯಂತ ಸೂಕ್ಷ್ಮ ಸೂಕ್ಷ್ಮ ವಿಷಯಗಳು ನಮಗೆ ಕಣ್ಣಿಗೆ ಬೀಳುತ್ತವೆ. ಬೇರೆಯವರಿಂದ ನೀನು ಯಾವುದಾದರೂ ಸಹಾಯ ಅಥವಾ ಕೆಲಸವನ್ನು ಅಪೇಕ್ಷಿಸಿದಾಗ ನಿನ್ನ ಮತ್ತು ಅವರ ಸ್ನೇಹದ ಪ್ರಸ್ತಾಪ ಮಾಡಬೇಡ. ತಕ್ಷಣ ಅವರು ನಿನ್ನ ಸ್ನೇಹದಿಂದ ಅವರಿಗೆ ಆಗಿರುವ ಲಾಭವೇನು ಎಂದು ಯೋಚಿಸುತ್ತಾರೆ. ಹಾಗೆ ಮಾಡದೆ ನಿನಗೆ ಸಹಾಯ ಮಾಡುವುದರಿಂದ ಅವರಿಗೆ ಆಗುವ ಲಾಭವೇನೆಂಬುದನ್ನು ಪರೋಕ್ಷವಾಗಿ ಹೇಳು ಅವರು ಖಂಡಿತ ಸಹಾಯ ಮಾಡುತ್ತಾರೆ ಎಂಬ ವಾಕ್ಯದ ನಡುವೆ ನಮ್ಮಲ್ಲಿ ಸುಳ್ಳು ಹೇಳಿ ಮೋಸ ಮಾಡುವ ವಂಚಿಸುವ ಮನಸುಗಳು ತಪ್ಪು ಮಾಡದೆ ಬಿಡುತ್ತವೆಯೇ ಎಂಬ ಪ್ರಶ್ನೆ ಅತಿ ದೊಡ್ಡದಾಗಿ ಮನದೊಳಗೆ ನಿಂತುಬಿಡುತ್ತದೆ ಅಲ್ಲವೇ?

ಸಹಾಯ ಎಂಬುದು ಯಾವುದಕ್ಕೆ, ಎಲ್ಲಿ, ಹೇಗೆ ಎಂಬುದನ್ನು ಅವಲೋಕಿಸುವ ಅಥವಾ ಚಿಂತಿಸುವ ವ್ಯವಧಾನ ನಮ್ಮಲ್ಲಿ ಅತ್ಯಂತ ದೊಡ್ಡ ಪ್ರಮಾಣದಲ್ಲಿ ಕಡಿಮೆಯಾಗುತ್ತಿರುವುದು ಇತ್ತೀಚಿನ ಬದಲಾವಣೆಯೇ ಹೌದಲ್ಲವೇ? ಯಾಕೆ ಮಾಡಬೇಕು ಮಾಡಿದರೆ ಏನು ಲಾಭ ಎಂದು ಯೋಚಿಸುವ ಮನೋಸ್ಥಿತಿ ನಮ್ಮ ನಡುವೆ ಬೆಳೆಯಲು ನಮ್ಮ ನಮ್ಮ ಇತ್ತೀಚಿನ ಬದುಕುಗಳ ದಾರಿಗಳು ಹಾಗೂ ನಮ್ಮ ಆಲೋಚನೆಗಳು ಮತ್ತು ಜಾಗ ತೋರಿಸಿದ ಜಗತ್ತು ತೋರಿದ ಹೊಸಹೊಸ ಬಗೆಯ ಬದುಕಿನ ಶೈಲಿಗಳು ಎಂದರೆ ತಪ್ಪಾಗಲಿಕ್ಕಿಲ್ಲ ಅಲ್ಲವೇ? ಹಾಗಾಗಿಯೇ ತಪ್ಪು ಮಾಡೋದು ಸಹಜ ಏನಂತೀರಿ.
ಇಲ್ಲಿ ಯಾಕೆ ತಪ್ಪು ಮಾಡಬೇಕು ಎಂಬ ಪ್ರಶ್ನೆ ಸಹಜವಾಗಿ ನಮ್ಮ ಮನದಲ್ಲಿ ಮೂಡುತ್ತದೆ. ಆದರೆ ಒಂದಂಥೂ ಸತ್ಯ. ಇನ್ನೊಬ್ಬರ ಬದುಕು, ಇನ್ನೊಬ್ಬರ ಜೀವನ ಶೈಲಿ ಹೀಗೆ ಇರಬೇಕು ಎಂದು ಮತ್ತೊಬ್ಬ ಯೋಚಿಸುವುದು, ಅದನ್ನೇ ಮಾಡಿಸಲು ಯತ್ನಿಸುವುದು ತಪ್ಪಲ್ಲವೆ? ಆ ತಪ್ಪಿನ ಬಗ್ಗೆ ಚಿಂತಿಸುವುದು ಹೇಗೆ ತಪ್ಪಾಗಲು ಸಾಧ್ಯ. ತಪ್ಪು ಕೆಲವೊಮ್ಮೆ ಅವರ ಮನದಾಳದಲ್ಲಿ ಒಪ್ಪಾಗುತ್ತದೆಯಲ್ಲವೇ? ಹಾಗಾಗಿ ಇನ್ನೊಬ್ಬರನ್ನು ಹತೋಟಿಯಲ್ಲಿಟ್ಟುಕೊಳ್ಳಬೇಕು, ಅವರನ್ನು ತಮ್ಮ ಹದ್ದುಬಸ್ತಿನೊಳಗೆ ಹಿಡಿದು ಇಟ್ಟುಕೊಳ್ಳಬೇಕೆಂಬ ಮನೋ ಸ್ಥಿತಿ ಬದಲಾಗದ ಹೊರತು ತಪ್ಪಿನ ಒಪ್ಪುಗಳು ಸಹ ಬದಲಾಗುವುದಿಲ್ಲ ಎಂಬುದು ಸಾರ್ವಜನಿಕ ವಾದ.
ಏಕೆಂದರೆ ಇಲ್ಲಿ ತಪ್ಪು ಎಂಬುದು ತಪ್ಪಾಗಿ ಕಾಣಲು ತಪ್ಪನ್ನು ತಪ್ಪಾಗಿ ಯೋಚಿಸಿದರೆ ಅದೇ ತಪ್ಪು ಎಂಬ ಮಾತು ನಿಜಕ್ಕೂ ಅತ್ಯಂತ ಮಹತ್ವದಲ್ಲವೇ?