ಶಿವಮೊಗ್ಗ : ಪ್ರತಿಪಕ್ಷವನ್ನು ಕಟ್ಟಿಹಾಕುವ ಪೂರ್ವಾಗ್ರಾಹಪೀಡಿತವಾದ ಕರ್ನಾಟಕ ದ್ವೇಷ, ಭಾಷಣ ಮತ್ತು ದ್ವೇಷ ಅಪರಾಧಗಳ (ಪ್ರತಿಬಂಧಕ) ವಿಧೇಯಕ-೨೦೨೫ಕ್ಕೆ ಯಾವ ಕಾರಣಕ್ಕೂ ರಾಜ್ಯಪಾಲರು ಅಂಕಿತ ಹಾಕಬಾರದು ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ಆಗ್ರಹಿಸಿದರು.
ಈ ವಿಧೇಯಕವನ್ನು ರಾಜ್ಯ ಸರ್ಕಾರ ಅಂಗೀಕಾರ ಮಾಡುವ ಮೂಲಕ ರಾಜ್ಯದಲ್ಲಿ ಮತ್ತೊಮ್ಮೆ ತುರ್ತು ಪರಿಸ್ಥಿತಿಯನ್ನು ಹೇರಿದೆ. ಈ ಹಿಂದೆ ಮಾಜಿ ಪ್ರಧಾನಿ ಇಂದಿರಾಗಾಂಧಿಯವರು ಇಂತಹ ತುರ್ತು ಪರಿಸ್ಥಿತಿಯನ್ನು ಹೇರಿದ್ದರು. ಈಗ ಸಿದ್ಧರಾಮಯ್ಯ ಅವರು ಮತ್ತೇ ಅದೇ ಕೆಲಸವನ್ನು ಮಾಡುತ್ತಿದ್ದಾರೆ. ಇದು ಸಂವಿಧಾನ ವಿರೋಧಿ ಕೂಡ ಆಗಿದೆ. ಸಂವಿಧಾನದ ಆರ್ಟಿಕಲ್ ೧೯‘ಎ’ಗೆ ವಿರುದ್ಧವಾಗಿದೆ. ಎಲ್ಲರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯ ಇರುತ್ತದೆ. ಆದರೆ ಇದು ಅದಕ್ಕೆ ಕಡಿವಾಣ ಹಾಕಲಾಗಿದೆ. ಪ್ರತಿಪಕ್ಷಗಳನ್ನು ಕಟ್ಟಿಹಾಕುವ ಕುತಂತ್ರವಿದೆ. ಜನವಿರೋಧಿ ಧೋರಣೆಯಿಂದ ಕೂಡಿದೆ. ದ್ವೇಷಕ್ಕೆ ಹೆಚ್ಚು ಶಕ್ತಿಯನ್ನು ಕೊಟ್ಟಂತ್ತಾಗುತ್ತದೆ. ಸುಪ್ರೀಂಕೋರ್ಟ್ ತೀರ್ಪುಗಳಿಗೂ ಇದು ವಿರುದ್ಧವಾಗಿದೆ ಎಂದು ಆರೋಪಿಸಿದರು.

ಈ ಬಿಲ್ಲನ್ನು ಪಾಸ್ ಮಾಡುವ ಮೂಲಕ ಸ್ವಾಮೀಜಿಗಳು, ಸಾಹಿತಿಗಳು ಪ್ರತಿಭಟನಾಕಾರರು ಸಂಘ-ಸಂಸ್ಥೆಗಳು ಸೇರಿದಂತೆ ಶ್ರೀಸಾಮಾನ್ಯನ ಬಾಯಿ ಮುಚ್ಚಿಸುವ ನಿರ್ಧಾರವಿದು. ಮುಂದೊಂದು ದಿನ ಸಾಹಿತಿಗಳ ಪುಸ್ತಕಗಳು ಈ ಬಿಲ್ಲಿನಿಂದ ಬ್ಯಾನ್ ಆಗುವ ಅಪಾಯವಿದೆ. ಅಲ್ಲದೆ ದ್ವೇಷದ ಭಾಷಣದ ಬಗ್ಗೆ ಸ್ವಯಂಪ್ರೇರಿತವಾಗಿ ದೂರು ದಾಖಲನ್ನು ಕೂಡ ಮಾಡಬಹುದಾಗಿದೆ. ಯಾವುದೇ ವ್ಯಕ್ತಿ ದ್ವೇಷ ಭಾಷಣ ಮಾಡದಿದ್ದರೂ ಕೂಡ ಆ ವ್ಯಕ್ತಿಯ ಮೇಲಿನ ದ್ವೇಷದಿಂದ ಅವನನ್ನು ಬಂಧಿಸಬಹುದಾಗಿದೆ. ಇಂತಹ ಕರಾಳ ವಿಧೇಯಕವನ್ನು ಬಿಜೆಪಿ ವಿರೋಧಿಸುತ್ತದೆ. ಅಲ್ಲದೆ ಇದರ ವಿರುದ್ಧ ಹೋರಾಟವನ್ನು ಕೂಡ ಆರಂಭಿಸುತ್ತದೆ. ಶಿವಮೊಗ್ಗದಲ್ಲಿ ಡಿ.೨೬ರಂದು ಶಿವಪ್ಪನಾಯಕ ಪ್ರತಿಮೆ ಬಳಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.
ಸತ್ಯ ಹೇಳುವುದೇ ತಪ್ಪು ಎಂದು ಈ ವಿಧೇಯಕ ಹೇಳುತ್ತದೆ. ನಾವು ಯಾರ ವಿರುದ್ಧವೂ ಮಾತನಾಡುವ ಹಾಗಿಲ್ಲ. ನಮಗೆ ದ್ವೇಷ ಇರುವುದು ದೇಶದ್ರೋಹಿಗಳ ವಿರುದ್ಧ ಮಾತ್ರ. ದೇಶದ್ರೋಹಿಗಳ ಬಗ್ಗೆ ನಾವು ಮಾತನಾಡಿದರೆ ನಿಮಗೆ ಅಸೂಯೆ ಏಕೆ ? ನಾವೇನು ಮಾಡಬೇಕು ನಾವು ಸತ್ಯವನ್ನೇ ಹೇಳುತ್ತೇವೆ. ಸತ್ಯವನ್ನು ಹೇಳುವುದೇ ತಪ್ಪು ಎಂದಾದರೆ ಹೇಗೆ ? ಇದನ್ನು ಗಂಭೀರವಾಗಿ ಆಲೋಚಿಸಬೇಕಾಗಿದೆ. ಕಾಂಗ್ರೆಸ್ನ ಮಾನಸಿಕತೆ ಸಂವಿಧಾನ ವಿರೋಧಿಯೇ ಆಗಿದೆ. ಅಲ್ಲದೆ ಶ್ರೀಸಾಮಾನ್ಯನಿಗೆ ಭಯ ಹುಟ್ಟಿಸುವಂತ್ತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಎಷ್ಟು ಕುತಂತ್ರಿ ಎಂದರೆ ಈ ಮಸೂದೆಯು ಮೂರುವರ್ಷ ಚಾಲ್ತಿಯಲ್ಲಿದ್ದರೆ ಮುಂದೆ ಯಾರೇ ಅಧಿಕಾರಕ್ಕೆ ಬಂದರೂ ಕೂಡ ಇದನ್ನು ಬದಲಾಯಿಸಲು ಸಾಧ್ಯವಾಗುವುದಿಲ್ಲ. ಅಂತಹ ನಿಯಮ ಇದರಲ್ಲಿದೆ. ಕಾಂಗ್ರೆಸ್ ಸರ್ಕಾರಕ್ಕೆ ಗೊತ್ತು ಇನ್ನು ಮೂರುವರ್ಷ ಆದ ನಂತರ ನಮ್ಮ ಸರ್ಕಾರ ಅಧಿಕಾರದಲ್ಲಿ ಇರುವುದಿಲ್ಲ. ಆಗ ಬಿಜೆಪಿ ಪಕ್ಷ ಆಡಳಿತ ನಡೆಸಿದರೂ ಕೂಡ ಈ ಮಸೂದೆಗೆ ಏನು ತೊಂದರೆಯಾಗಬಾರದು ಎಂಬ ಉದ್ದೇಶ ಅವರಿಗಿದೆ. ಅವರಿಗೆ ಈಗಾಗಲೇ ಚೆನ್ನಾಗಿ ಗೊತ್ತಾಗಿದೆ. ಮುಂದಿನ ಬಾರಿ ನಾವು ಆಡಳಿತಕ್ಕೆ ಬರುವುದಿಲ್ಲ ಎಂದು ಅವರಿಗೆ ಗೊತ್ತಾಗಿದೆ ಆದರೆ ಬಿಜೆಪಿ ಮುಂದಿನ ಬಾರಿ ಆಡಳಿತಕ್ಕೆ ಬರುವುದು ನಿಜ ಮತ್ತು ಈ ಮಸೂದೆಯನ್ನು ಕಿತ್ತು ಬಿಸಾಡುವುದು ನಿಜ ಎಂದರು.

ಅಸೂಯೆಯಿಂದ ಕೂಡಿರುವ ಚರ್ಚೆಗೂ ಅವಕಾಶ ಕೊಡದೆ ಅಂಗೀಕರಿಸಿರುವ, ಭಯ ಹುಟ್ಟಿಸುವ, ಪೂರ್ವಾಗ್ರಹಪೀಡಿತ, ತುರ್ತು ಪರಿಸ್ಥಿತಿಗೆ ಕಾರಣವಾಗಿರುವ ಈ ಕುತಂತ್ರ, ಕರಾಳ ಮಸೂದೆಯ ವಿರುದ್ಧ ವಿರುದ್ಧ ಜನಾಂದೋಲನ ರೂಪಿಸುತ್ತದೆ. ರಾಜ್ಯಪಾಲರ ಬಳಿ ಬಿಜೆಪಿ ನಿಯೋಗ ತೆರಳಿ ಈ ಮಸೂದೆಯನ್ನು ತಿರಸ್ಕರಿಸುವಂತೆ ಆಗ್ರಹಿಸುತ್ತದೆ ಮತ್ತು ರಾಷ್ಟ್ರಪತಿಗಳಿಗೂ ಕೂಡ ಮನವಿ ಮಾಡುತ್ತೇವೆ. ಸಂದರ್ಭ ಬಂದರೆ ನ್ಯಾಯಾಲಯದ ಮೊರೆಯನ್ನು ಕೂಡ ಹೋಗುತ್ತವೆ ಎಂದು ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಜಗದೀಶ್ ಎನ್.ಕೆ., ನಾಗರಾಜ್ ಎನ್.ಜೆ., ಮಂಜುನಾಥ್ ನವಿಲೆ, ದೀನದಯಾಳ್, ಎಂ.ಬಿ. ಹರಿಕೃಷ್ಣ, ಮುರಳಿ, ಶ್ರೀನಾಗ್, ಮೋಹನ್ ರೆಡ್ಡಿ, ಮಂಜು ಇದ್ದರು.