ಶಿವಮೊಗ್ಗ : ಬಿಹಾರ್ ಚುನಾವಣೆ ಫಲಿತಾಂಶ ಪ್ರಧಾನಿ ನರೇಂದ್ರಮೋದಿ, ಅಮಿತ್ ಷಾ ಅವರ ನೇತೃತ್ವ ಹಾಗೂ ನಿತೀಶ್ಕುಮಾರ್ ಅವರ ಆಡಳಿತಕ್ಕೆ ದೊರೆತ ದೊಡ್ಡ ಗೆಲುವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬಣ್ಣಿಸಿದರು.
ಅವರು ಇಂದು ಸುದ್ದಿಗಾರರೊಂದಿಗೆ ಮಾತನಾಡಿ, ಬಿಹಾರ್ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ದಯಾನೀಯ ಸೋಲು ಅನುಭವಿಸುವ ಮೂಲಕ ಕಾಂಗ್ರೆಸ್ಸಿನ ನೇತಾರ ರಾಹುಲ್ಗಾಂಧಿ ತಮ್ಮ ನಾಯಕತ್ವವನ್ನು ಕಳೆದುಕೊಂಡಿದ್ದಾರೆ. ರಾಹುಲ್ಗಾಂಧಿ ನಾಯಕತ್ವವನ್ನು ಬಿಹಾರ್ ಜನತೆ ತಿರಸ್ಕರಿಸಿದ್ದಾರೆ ಎಂದು ತೀಕ್ಷ್ಣ ಪ್ರತಿಕ್ರಿಯೆ ನೀಡಿದರು.

ಬಿಹಾರ್ ಫಲಿತಾಂಶದ ಪರಿಣಾಮವಾಗಿ ಬಿಜೆಪಿ ಇನ್ನುಮುಂದೆ ಎಲ್ಲಾ ಕ್ಷೇತ್ರಗಳಲ್ಲಿಯೂ ದೊಡ್ಡ ಸಾಧನೆ ಮಾಡಲಿದೆ ಎಂದ ಅವರು, ಕರ್ನಾಟಕದಲ್ಲಿಯೂ ಬಿಜೆಪಿ ತನ್ನ ಸಾಧನೆಯನ್ನು ಮುಂದುವರಿಸಲು ಇದು ಪ್ರೇರೇಪಣೆಯಾಗಿದೆ. ಕರ್ನಾಟಕದ ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನದ ಬಗ್ಗೆ ಪ್ರಧಾನಿ ನರೇಂದ್ರಮೋದಿ ಮತ್ತು ಗೃಹಸಚಿವ ಅಮಿತ್ ಷಾ ತೆಗೆದುಕೊಳ್ಳುವ ನಿರ್ಧಾರವೇ ಅಂತಿಮ ಎಂದರು.

ಕಬ್ಬು ಬೆಳೆಗಾರರ ಸಮಸ್ಯೆಗಳನ್ನು ರಾಜ್ಯ ಸರ್ಕಾರ ಬೇಗ ಬಗೆಹರಿಸಬೇಕು. ಬೆಳೆಗಾರರ ಹಿತಕಾಯುವಲ್ಲಿ ಸರ್ಕಾರ ಮುಂದಾಗಬೇಕು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.