ಶಿವಮೊಗ್ಗ : ಬಿಹಾರದಲ್ಲಿ ಎನ್ಡಿಎ ಸರ್ಕಾರಕ್ಕೆ ಅಭೂತಪೂರ್ವ ಗೆಲುವು ಸಿಕ್ಕಿದ ಹಿನ್ನಲೆಯಲ್ಲಿ ಜಿಲ್ಲಾ ಬಿಜೆಪಿ ಕಛೇರಿಯ ಮುಂಭಾಗ ಇಂದು ಪಟಾಕಿ ಸಿಡಿಸಿ, ಸಿಹಿಹಂಚಿ ಸಂಭ್ರಮಾಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಎಸ್.ಎನ್. ಚನ್ನಬಸಪ್ಪ, ಬಿಹಾರದಲ್ಲಿ ಕಮಲಯುಗ ಪ್ರಾರಂಭವಾಗಿದೆ. ಇನ್ನು ಮುಂದೆ ಹಿಂದೂಯುಗ ಅದಕ್ಕೆ ಶಕ್ತಿಕೊಟ್ಟವರು ಬಿಹಾರದ ಜನತೆ ಅದಕ್ಕಾಗಿ ಅವರಿಗೆ ಕೃತಜ್ಞತೆ ವ್ಯಕ್ತಪಡಿಸುತ್ತೇನೆ. ಈಗ ಬಿಹಾರ ಕೇಸರಿಮಯವಾಗಿದ್ದು, ಜಂಗಲ್ರಾಜ್ ಹೋಗಿ ಕಮಲ್ರಾಜ್ ಬಂದಿದೆ ಎಂದರು.

ಮಾಡಬಾರದ್ದನ್ನು ಮಾಡಿ, ಕಳಂಕಿತ ರಾಜಕಾರಣ ಮಾಡಿದ ಲಾಲುಪ್ರಸಾದ್ ಕುಟುಂಬ ಮತ್ತು ಕಾಂಗ್ರೆಸ್ಸನ್ನು ಜನ ತಿರಸ್ಕರಿಸಿದ್ದಾರೆ. ಅಲ್ಲಿ ಬಿಜೆಪಿಯ ಮೈತಿಲಿ ಠಾಕೂರ್ಗೆ ಅಭೂತಪೂರ್ವ ಗೆಲುವಾಗಿದೆ. ಗೆದ್ದರೆ ತನ್ನ ಊರಿಗೆ ಸೀತಾನಗರ ಎಂದು ಹೆಸರಿಡುತ್ತೇವೆ ಎಂದು ಹೇಳಿದ್ದರು. ಈಗ ಜನ ಸ್ಪಷ್ಟ ಸಂದೇಶ ನೀಡುವುದರ ಮೂಲಕ ಅಲ್ಲಿ ಬಿಜೆಪಿ ಅತೀ ಹೆಚ್ಚಿನ ಸ್ಥಾನಗಳಿಸಿದೆ ಎಂದರು.
ಅಟಲ್ಜೀಯವರ ಕನಸು ಸುಶಾಸನ ಮಾಡುವುದು ಎಂದಿತ್ತು ಅದು ನನಸಾಗಿದೆ. ಮತದಾರರಿಗೆ ಮತ್ತು ಚುನಾವಣಾ ಆಯೋಗಕ್ಕೆ ಅಪಮಾನ ಮಾಡಿದವರಿಗೆ ಬಿಹಾರದ ಜನ ತಕ್ಕಪಾಠ ಕಲಿಸಿದ್ದಾರೆ. ಹಸ್ತ ಚಿಹ್ನೆಯ ೫ ಬೆರಳಲ್ಲಿ ಒಂದು ಬೆರಳನ್ನು ಮತದಾರ ತುಂಡರಿಸಿದ್ದಾನೆ. ೩೨ ಲಕ್ಷ ಹೊಸ ಮತದಾರ ಸೇರ್ಪಡೆ ಮತ್ತು ಶೇ.೭೩ರಷ್ಟು ಮಹಿಳಾ ಮತದಾರ ಎನ್ಡಿಎಗೆ ಬೆಂಬಲ ನೀಡಿದ್ದಾರೆ. ಕರ್ನಾಟಕದಲ್ಲೂ ಮುಂದೆ ಕಮಲ ಅರಳಿದೆ ಎಂದರು.

ಶಾಸಕ ಡಾ|| ಧನಂಜಯ ಸರ್ಜಿ ಮಾತನಾಡಿ, ದೇಶದಲ್ಲಿ ೧೮ ರಾಜ್ಯಗಳಲ್ಲಿ ಎನ್ಡಿಎ ಅಧಿಕಾರದಲ್ಲಿದೆ. ಒನ್ ನೇಷನ್-ಒನ್ ರೇಷನ್, ಒನ್ ಟ್ಯಾಕ್ಸ್, ಒನ್ ಎಲೆಕ್ಷನ್ ಎಂಬುದು ಬಿಜೆಪಿಯ ಸಿದ್ಧಾಂತವಾಗಿದ್ದು, ಮುಂದಿನ ದಿನಗಳಲ್ಲಿ ಒನ್ ನೇಷನ್ ಒನ್ ಪಾರ್ಟಿ ಅದು ಬಿಜೆಪಿ ಆಗಲಿದೆ ಎಂದರು.

ರಾಜ್ಯ ಸರ್ಕಾರ ಬಿಟ್ಟಿಭಾಗ್ಯ ನೀಡಿ, ತಲಾ ಒಂದು ತಲೆಗೆ ಒಂದು ಲಕ್ಷ ರೂ. ಸಾಲ ಮಾಡಿದೆ. ಇವರ ಆಡಳಿತವನ್ನು ನೋಡಿ, ಇಂಡಿಯಾ ಮಹಾಘಟಬಂಧನ್ಗೆ ಬಿಹಾರದ ಜನತೆ ಒಳ್ಳೆಯ ಪಾಠ ಕಲಿಸಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಎನ್.ಕೆ. ಜಗದೀಶ್, ಪ್ರಮುಖರಾದ ಶಿವರಾಜ್, ಮಾಲತೇಶ್, ಜ್ಞಾನೇಶ್ವರ್, ಹರಿಕೃಷ್ಣ, ಮೋಹನ್ರೆಡ್ಡಿ, ದೀನ್ದಯಾಳ್, ನಾಗರಾಜ್, ಸುರೇಖಾ ಮುರಳೀಧರ್, ಸುನೀತಾ ಅಣ್ಣಪ್ಪ, ಅಣ್ಣಪ್ಪ, ಸುಮಾ ಭೂಪಾಳಂ ಮೊದಲಾದವರಿದ್ದರು.