ಶಿವಮೊಗ್ಗ: ದೆಹಲಿಯಲ್ಲಿ ಜಿರಳೆ ಪಕ್ಷದ ಹೆಸರಿನಲ್ಲಿ ನಡೆದದ್ದು ವಿದ್ಯಾರ್ಥಿಗಳ ಹೋರಾಟ ಖಂಡಿತಾ ಅಲ್ಲ, ಬದಲಾಗಿ ದೇಶದ ಪ್ರಜಾಪ್ರಭುತ್ವ ಮತ್ತು ಶಾಂತಿ ಕದಡಲು ವಿದೇಶಿ ಹಣದ ಬಲದಿಂದ ಹೆಣೆಯಲಾದ ಭಾರತ ವಿರೋಧಿ, ‘ಟೂಲ್ ಕಿಟ್’ ಅಜೆಂಡಾ ಎಂದು ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಎಸ್.ಎನ್. ಚನ್ನಬಸಪ್ಪ (ಚೆನ್ನಿ) ಅವರು ವಾಗ್ದಾಳಿ ನಡೆಸಿದ್ದಾರೆ.
ರಾಷ್ಟ್ರ ವಿರೋಧಿ ಶಕ್ತಿಗಳ ಈ ಕರಾಳ ಕುತಂತ್ರವನ್ನು ತೀವ್ರವಾಗಿ ಖಂಡಿಸಿರುವ ಶಾಸಕರು, ದೇಶದ ಭವಿಷ್ಯವಾಗಿರುವ ಸಾಮಾನ್ಯ ವಿದ್ಯಾರ್ಥಿಗಳ ಅಮಾಯಕತೆಯನ್ನು ತಮಗಾಗಿ ದಾಳವಾಗಿ ಬಳಸಿಕೊಂಡು, ಅವರ ಮರೆಯಲ್ಲಿ ನಿಂತು ದೇಶದಲ್ಲಿ ಕಿಚ್ಚು ಹಚ್ಚಲು ಈ ಮಾವೋವಾದಿ, ಕುಖ್ಯಾತ ‘ತುಕುಡೆ ಗ್ಯಾಂಗ್’, ಎಡಪಕ್ಷಗಳು ಹಾಗೂ ಎಡಪಂಥೀಯ ದೇಶದ್ರೋಹಿ ಶಕ್ತಿಗಳು ಮುಂದಾಗಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶೈಕ್ಷಣಿಕ ಅಭಿವೃದ್ಧಿ ಅಥವಾ ವಿದ್ಯಾರ್ಥಿ ಹಿತಾಸಕ್ತಿಗೂ, ಈ ರಾಷ್ಟ್ರದ್ರೋಹಿ ಗುಂಪುಗಳ ಹಿಂಸಾತ್ಮಕ ಗಲಭೆಗೂ ಯಾವುದೇ ಸಂಬಂಧವಿಲ್ಲ. ದೇಶದ ಒಳಗೆ ಅಶಾಂತಿ ಸೃಷ್ಟಿಸುವುದು ಮತ್ತು ಭಾರತ ವಿರೋಧಿ ನೀತಿಯನ್ನು ಹರಡುವುದೇ ಇವರ ಏಕೈಕ ಕರಾಳ ಸಿದ್ಧಾಂತವಾಗಿದೆ ಎಂದು ನೇರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಅಲ್ಲದೆ, ವಿದೇಶಿ ನಿಕಟಪೂರ್ವ ಏಜೆನ್ಸಿಗಳು ಹಾಗೂ ‘ಡೀಪ್ ಸ್ಟೇಟ್’ ಪ್ರಾಯೋಜಕತ್ವದ ಕುಖ್ಯಾತ ಜಾಲದ ಮೂಲಕ ಭಾರತದಲ್ಲಿ ಸತತವಾಗಿ ಗಲಭೆ, ಅರಾಜಕತೆ ಹಾಗೂ ಸಾರ್ವಜನಿಕ ಆಸ್ತಿಪಾಸ್ತಿ ನಾಶಪಡಿಸುವುದು ಇವರ ಮುಖ್ಯ ಅಜೆಂಡಾವಾಗಿದೆ. ಭಾರತದ ಜನತೆಯ ಬಹುಮತದೊಂದಿಗೆ ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಬಲಿಷ್ಟ ಸರ್ಕಾರವನ್ನು ಹಾಗೂ ವಿಶ್ವಗುರು ಭಾರತದ ಹಾದಿಯಲ್ಲಿ ದೇಶವನ್ನು ಮುನ್ನಡೆಸುತ್ತಿರುವ ಪ್ರಧಾನಿ ಶ್ರೀ ನರೇಂದ್ರ ಮೋದಿಜಿಯವರ ನೇತೃತ್ವವನ್ನು ಅಸ್ಥಿರಗೊಳಿಸಿ, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬುಡಮೇಲು ಮಾಡಲು ರೂಪಿಸಲಾಗಿರುವ ಬೃಹತ್ ಅಂತರರಾಷ್ಟ್ರೀಯ ಸಂಚು ಈಗ ದೇಶದ ಜನತೆಯ ಎದುರು ಸಂಪೂರ್ಣವಾಗಿ ಬಯಲಾಗಿದೆ.
ವಿದೇಶಿ ಕಪ್ಪು ಹಣದ ಬಲದಿಂದ ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ ಅರಾಜಕತೆ ಸೃಷ್ಟಿಸಿ, ಸರ್ಕಾರವನ್ನು ಉರುಳಿಸಬಹುದು ಎಂದು ಭ್ರಮೆಯಲ್ಲಿರುವ ಇಂತಹ ರಾಷ್ಟ್ರವಿರೋಧಿ ಶಕ್ತಿಗಳಿಗೆ ಭಾರತದ ಸಾರ್ವಭೌಮತ್ವ ಮತ್ತು ಜಾಗೃತ ಸಮಾಜ ಎಂದಿಗೂ ತಕ್ಕ ಪಾಠ ಕಲಿಸಲಿದೆ. ದೇಶದ ಶಾಂತಿ, ನೆಮ್ಮದಿ ಮತ್ತು ಸಮಗ್ರತೆಗೆ ಭಂಗ ತರಲು ಸಜ್ಜಾಗಿರುವ ಇಂತಹ ವಿದ್ರೋಹಿ ನೆಟ್ವರ್ಕ್ ಅನ್ನು ರಾಜ್ಯ ಮತ್ತು ಕೇಂದ್ರ ತನಿಖಾ ಸಂಸ್ಥೆಗಳು ತಕ್ಷಣವೇ ಬೇರುಸಹಿತ ಕಿತ್ತೊಗೆಯಬೇಕು. ವಿದ್ಯಾರ್ಥಿಗಳ ಸೋಗಿನಲ್ಲಿ ಗಲಭೆಗೆ ಪ್ರಚೋದನೆ ನೀಡುತ್ತಿರುವ ಪ್ರತಿಯೊಂದು ಕರಾಳ ಹಸ್ತವನ್ನು ಕಟ್ಟುನಿಟ್ಟಿನ ತನಿಖೆಗೆ ಒಳಪಡಿಸಿ ಕಾನೂನಿನ ಅತ್ಯಂತ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಶಾಸಕರು ಆಗ್ರಹಿಸಿದ್ದಾರೆ.

ಇಷ್ಟೊಂದು ಬೃಹತ್ ಮಟ್ಟದ ಅಂತರರಾಷ್ಟ್ರೀಯ ಷಡ್ಯಂತ್ರ ಹಾಗೂ ಗಲಭೆಯ ಹುನ್ನಾರವನ್ನು ಅತ್ಯಂತ ಸಮ್ಮುಕವಾಗಿ, ಧೈರ್ಯದಿಂದ ಮತ್ತು ಸಮಯಪ್ರಜ್ಞೆಯಿಂದ ನಿಭಾಯಿಸಿ ದೇಶದ ರಾಜಧಾನಿಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡಿದ ದೆಹಲಿ ಪೊಲೀಸ್ ಸಿಬ್ಬಂದಿ ಹಾಗೂ ಉನ್ನತಾಧಿಕಾರಿಗಳಿಗೆ ಶಾಸಕರಾದ ಶ್ರೀ ಎಸ್.ಎನ್. ಚನ್ನಬಸಪ್ಪ ಅವರು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ರಾಷ್ಟ್ರದ ಹಿತಾಸಕ್ತಿ ಮತ್ತು ಭದ್ರತೆಗಿಂತ ಮಿಗಿಲಾದದ್ದು ಯಾವುದೂ ಇಲ್ಲ. ಯಾವುದೇ ಮಾಧ್ಯಮ ಪ್ರೇರಿತ ‘ಟೂಲ್ ಕಿಟ್’ ಅಜೆಂಡಾಗಳು ಭಾರತದ ಅಭಿವೃದ್ಧಿಯ ಮುನ್ನಡೆಯನ್ನು ತಡೆಯಲು ಸಾಧ್ಯವಿಲ್ಲ. ದೇಶದ ಒಗ್ಗಟ್ಟು, ಅಭಿವೃದ್ಧಿ ಮತ್ತು ಸಮಗ್ರತೆಯನ್ನು ಕಾಯಲು ಪ್ರತಿಯೊಬ್ಬ ದೇಶಪ್ರೇಮಿ ಭಾರತೀಯನೂ ಜಾಗೃತನಾಗಿ ನಿಲ್ಲಬೇಕಿದೆ ಎಂದು ಶ್ರೀ ಎಸ್.ಎನ್. ಚನ್ನಬಸಪ್ಪ ಅವರು ತಮ್ಮ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.