ಶಿವಮೊಗ್ಗ : ಹಿರಿಯ ಸಂಸದೀಯ ಪಟು ನಾಲ್ಕು ಸದನಗಳಲ್ಲಿ ಸದಸ್ಯರಾಗಿದ್ದ ಮಾಜಿ ಸಂಸದ ಹಾಗೂ ಕಾಂಗ್ರೆಸ್ ಪಕ್ಷದ ರಾಜ್ಯ ವಕ್ತಾರ ಆಯನೂರು ಮಂಜುನಾಥ್ರವರ 71ನೇ ಹುಟ್ಟುಹಬ್ಬ ನ.14ರಂದು ವಿಶಿಷ್ಟವಾಗಿ ನಡೆಯಲಿದೆ ಎಂದು ಆಯನೂರು ಮಂಜುನಾಥ್ ಅಭಿಮಾನಿಗಳ ಬಳಗದ ಪರವಾಗಿ ಪಾಲಿಕೆ ಮಾಜಿ ಸದಸ್ಯ ಧೀರರಾಜ್ ಹೊನ್ನವಿಲೆ ಹೇಳಿದ್ದಾರೆ.

ಅವರು ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 1955 ನ.14ರಂದು ಜನಿಸಿದ ಆಯನೂರು ಮಂಜುನಾಥ್ ವಿದ್ಯಾರ್ಥಿದೆಸೆಯಿಂದಲೂ ವಿವಿಧ ಚಟುವಟಿಕೆಗಳಲ್ಲಿ ಗುರುತಿಸಿಕೊಂಡಿದ್ದು, ವಿದ್ಯಾರ್ಥಿ ಸಂಘಟನೆಯ ಯೂನಿಯನ್ ಅಧ್ಯಕ್ಷರಾಗಿ 1987ರಲ್ಲಿ ಸೆನೆಟ್ ಸದಸ್ಯರಾಗಿ 37ಕ್ಕೂ ಹೆಚ್ಚು ಕಾರ್ಮಿಕ ಸಂಘಟನೆಗಳ ಮುಖಂಡರಾಗಿ ಗುರುತಿಸಿಕೊಂಡಿದ್ದಾರೆ. 1994ರಲ್ಲಿ ಹೊಸನಗರ ಕ್ಷೇತ್ರದ ಶಾಸಕರಾಗಿ, 1998ರಲ್ಲಿ ಸೋಲರಿಯದ ಸರದಾರ ಎಸ್. ಬಂಗಾರಪ್ಪನವರ ವಿರುದ್ಧ ಗೆದ್ದು ಲೋಕಸಭಾ ಸದಸ್ಯರಾಗಿ 2010ರಲ್ಲಿ ರಾಜ್ಯಸಭಾ ಸದಸ್ಯರಾಗಿ, 2018ರಲ್ಲಿ ವಿಧಾನ

ಪರಿಷತ್ ಸದಸ್ಯರಾಗಿ ಆಯ್ಕೆಯಾಗಿ ಜನ ಸಾಮಾನ್ಯರ ಪ್ರತಿನಿಧಿಯಾಗಿ ಸಾಕಷ್ಟು ಕೆಲಸ ಕಾರ್ಯಗಳನ್ನು ಮಾಡಿ, ಸಾವಿರಾರು ಜನರಿಗೆ ಧ್ವನಿಯಾಗಿದ್ದಾರೆ. ಅವರು 71ನೇ ವಸಂತಕ್ಕೆ ಕಾಲಿಡುತ್ತಿದ್ದು, ನಾಳೆ ಬೆಳಿಗ್ಗೆ 11 ಗಂಟೆಗೆ ಜ್ಯೂಯಲ್ರಾಕ್ ಬಳಿ ಇರುವ ಪಂಚಮುಖಿ ದೇವಸ್ಥಾನದಲ್ಲಿ ಅವರ ಅಭಿಮಾನಿಗಳಿಂದ ದೇವರಿಗೆ ವಿಶೇಷಪೂಜೆ, 11.30ಕ್ಕೆ ಕಾಂಗ್ರೆಸ್ ಕಛೇರಿಯಲ್ಲಿ ವಿಶೇಷ ಅಭಿನಂದನಾ ಕಾರ್ಯಕ್ರಮ, 12.30ಕ್ಕೆ ಶಾರದಾದೇವಿ ಅಂದರ ವಿಕಾಸ ಕೇಂದ್ರದಲ್ಲಿ ವಿವಿಧ ಕಾರ್ಯಕ್ರಮಗಳು, 1ಗಂಟೆಗೆ ಮಿಷನ್ ಕಾಂಪೌಂಡ್ನಲ್ಲಿರುವ ಅವರ ಮನೆಯ ಮುಂಭಾಗದಲ್ಲಿ ಅಭಿಮಾನಿಗಳಿಂದ ಸಭಾ ಕಾರ್ಯಕ್ರಮ ನಡೆಯಲಿದ್ದು, ಅವರನ್ನು ಅಭಿನಂದಿಸುವ ಕಾರ್ಯಕ್ರಮಕ್ಕೆ ಅವರ ಎಲ್ಲಾ ಅಭಿಮಾನಿಗಳು ಮತ್ತು ಸಾರ್ವಜನಿಕರು ಭಾಗವಹಿಸುವಂತೆ ಅವರು ಕೋರಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಲಕ್ಷ್ಮಣಪ್ಪ, ಆಯನೂರು ಸಂತೋಷ್, ಜಿ. ಪದ್ಮನಾಭ್, ಶಿಜು ಪಾಷಾ, ಹಿರಣ್ಣಯ್ಯ, ಎಸ್.ಪಿ. ಪಾಟೀಲ್, ಕೃಷ್ಣ, ಲೋಕೇಶ್, ಭೋಜರಾಜ್, ರಾಘವೇಂದ್ರ ಮತ್ತಿತರರಿದ್ದರು.